ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಮಾ.7 ಮತ್ತು 8ರಂದು ಡೆಯುವ ರಾಜ್ಯ ಪತ್ರಕರ್ತರ ಸಮ್ಮೇಳನದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದ.ಕ. ಜಿಲ್ಲಾಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀನಿವಾಸ ಪೂಜಾರಿ ‘ಆಹಾರ, ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ಫೆ.28ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಅಧಿಕಾರಿಗಳ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ‘ರಾಜ್ಯ ಸಂಘದಲ್ಲಿ ನೋಂದಣಿಯಾಗಿರುವ 7 ಸಾವಿರ ಪತ್ರಕರ್ತರ ಪೈಕಿ ಮೂರು ಸಾವಿರ ಮಂದಿ ಸಮ್ಮೇಳನಕ್ಕೆ ಹಾಜರಾಗುವ ಸಾಧ್ಯತೆ ಇದೆ. ಈ ಮೊದಲಿನ ಎಲ್ಲ ಸಮ್ಮೇಳನಗಳನ್ನು ಆಯಾ ಜಿಲ್ಲಾಡಳಿತಗಳ ನೆರವಿನಲ್ಲಿ ನಡೆಸಲಾಗಿದೆ. ಇಲ್ಲಿ ಕೂಡ ಜಿಲ್ಲಾಡಳಿತದ ನೆರವಿನಲ್ಲಿ ಸಮ್ಮೇಳನವನ್ನು ಯಶಸ್ಸುಗೊಳಿಸುವ ವಿಶ್ವಾಸವಿದೆ. ಈ ಸಮ್ಮೇಳನ ವಿಭಿನ್ನವಾಗಿ ನಡೆಯಲಿದ್ದು, ರಾಜ್ಯ ಮಾತ್ರವಲ್ಲದೆ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಮುಂಬೈ ಹಾಗೂ ದೆಹಲಿಗಳಿಂದಲೂ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಸಮ್ಮೇಳನದಲ್ಲಿ ಸುಮಾರು 50 ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು. ಪ್ರವಾಸೋದ್ಯಮ ಸೇರಿದಂತೆ ಕರಾವಳಿಯ ಅಭಿವೃದ್ಧಿ ಕುರಿತು ಸಮ್ಮೇಳನದಲ್ಲಿ ವಿಚಾರ ಗೋಷ್ಠಿ ನಡೆಯಲಿದ್ದು ವಿವಿಧ ಕ್ಷೇತ್ರದ ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು .
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಪತ್ರಕರ್ತರ ಸಮ್ಮೇಳನ ಯಶಸ್ವಿ ಆಗಿ ನಡೆಸಲು ವಿವಿಧ ಸಮಿತಿ ಗಳನ್ನು ರಚಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಪತ್ರಕರ್ತರಿಗೆ ಕರಾವಳಿಯ ಪ್ರವಾಸಿ ತಾಣಗಳಿಗೆ ಒಂದು ದಿನದ ಪ್ರವಾಸ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ರಾಜೇಶ್, ವಾರ್ತಾಧಿಕಾರಿ ಖಾದರ್ ಶಾ, ಸಮ್ಮೇಳನದ ಸಂಚಾಲಕ ಜಗನಾಥ್ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಭಾಗವಹಿಸಿದ್ದರು.
ಬಳಿಕ ವಿವಿಧ ಉಪ ಸಮಿತಿಗಳ ಸಭೆ ಪತ್ರಿಕಾ ಭವನದಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನಡೆಯಿತು.