ಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿ ಕೊಲೆ
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಸಾಹಿತಿ ಗೌರಿ ಲಂಕೇಶ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ರಾತ್ರಿ 8 ಸುಮಾರಿಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ನಗರದ ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ.
ಗೌರಿ ಲಂಕೇಶ್ ಅವರು ಮನೆಯ ಬಾಗಿಲ ಬೀಗ ತೆಗೆಯುತ್ತಿದ್ದ ವೇಳೆ ದುಷ್ಕರ್ಮಿಗಳು ಎದೆ ಹಾಗೂ ಹಣೆಯ ಭಾಗಕ್ಕೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆಗ ಗೌರಿ ಲಂಕೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಸಂಬಂಧಿಕರು, ಪೊಲೀಸರು ನೂರಾರು ಮಂದಿ ಜಮಾಯಿಸಿದ್ದಾರೆ. ಅಲ್ಲದೇ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿಪರ ಚಿಂತಕರಾಗಿ, ಪತ್ರಕರ್ತೆಯಾಗಿ, ಹಾಗೂ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಗೌರಿ ಲಂಕೇಶ್ ಶ್ರಮಿಸಿದ್ದರು.
ಗೌರಿ ಲಂಕೇಶ್ ಹತ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡನೆ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆ ಮುಂದೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ. ಗೌರಿ ಲಂಕೇಶ್ ಅವರ ಹತ್ಯೆ ಅತ್ಯಂತ ಹೇಯ ಕೃತ್ಯ, ಈ ಬಗ್ಗೆ ತನಿಖೆ ನಡೆಸಿ, ದುಷ್ಕರ್ಮಿಗಳು ಕೂಡಲೇ ಬಂಧಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.