Home Mangalorean News Kannada News ಪತ್ರಿಕೋದ್ಯಮವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಕೊಂಡಿಯ ರೀತಿಯಲ್ಲಿ ಕೆಲಸ ಮಾಡುತ್ತಿದೆ: ಡಾ. ಕೆ ವಿದ್ಯಾಕುಮಾರಿ

ಪತ್ರಿಕೋದ್ಯಮವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಕೊಂಡಿಯ ರೀತಿಯಲ್ಲಿ ಕೆಲಸ ಮಾಡುತ್ತಿದೆ: ಡಾ. ಕೆ ವಿದ್ಯಾಕುಮಾರಿ

Spread the love

ಪತ್ರಿಕೋದ್ಯಮವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಕೊಂಡಿಯ ರೀತಿಯಲ್ಲಿ ಕೆಲಸ ಮಾಡುತ್ತಿದೆ: ಡಾ. ಕೆ ವಿದ್ಯಾಕುಮಾರಿ

ಉಡುಪಿ: ಪತ್ರಿಕೋದ್ಯಮವು ಸಮಾಜದಲ್ಲಿನ ಜನಸಾಮಾನ್ಯರ ಆಗು-ಹೋಗುಗಳು ಸೇರಿದಂತೆ ಪ್ರತಿಯೊಂದು ಆಯಾಮಗಳನ್ನು ರಚನಾತ್ಮಕವಾಗಿ ರಚಿಸಿ, ಅವರುಗಳ ಆಶೋತ್ತರಗಳಿಗೆ ಸ್ಪಂದಿಸುವ ಕೊಂಡಿಯ ರೀತಿಯಲ್ಲಿ ದಿನನಿತ್ಯ ಕೆಲಸ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಇಂದು ನಗರದ ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪತ್ರಿಕೆಗಳು ವಿಶ್ವದಲ್ಲಿ ನಡೆಯುವ ಪ್ರಸ್ತುತ ಸುದ್ದಿಗಳು, ರಾಜಕೀಯ ಬೆಳವಣಿಗೆಗಳು, ಆವಿಷ್ಕಾರಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಮಾಹಿತಿಯನ್ನು ಸ್ಪಷ್ಟವಾಗಿ ಸತ್ಯಾಸತ್ಯತೆಯೊಂದಿಗೆ ಕೊಡುವ ಕಾರ್ಯ ಮಾಡುತ್ತಿದೆ. ಇದರಿಂದ ಎಲ್ಲರಿಗೂ ಜ್ಞಾನಾರ್ಜನೆ ಹಾಗೂ ಮಾಹಿತಿಗಳು ತಲುಪುತ್ತಿವೆ ಎಂದರು.

ಪ್ರತಿದಿನ ದಿನಪತ್ರಿಕೆ ಓದುವ ಹವ್ಯಾಸ ಇರುವವರಿಗೆ ಪತ್ರಿಕೆ ನೋಡದೇ ಇದ್ದಲ್ಲಿ ದಿನ ಪ್ರಾರಂಭವಾಗುವುದಿಲ್ಲ. ಜನರ ಮಧ್ಯ ಇಂತಹ ಬೆಸುಗೆಯನ್ನು ಪತ್ರಿಕೆಯು ಉಂಟು ಮಾಡಿದೆ. ಆದರೆ ಇವತ್ತಿನ ಸಂದರ್ಭದಲ್ಲಿ ಎಲೆಕ್ಟ್ರಾನಿಕ್, ಸೋಶಿಯಲ್ ಮೀಡಿಯಾಗಳ ಮಧ್ಯೆ ಪತ್ರಿಕೋದ್ಯಮ ಕೂಡ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಹೆಚ್ಚು ಪತ್ರಿಕೆಗಳು ಸಂಕಷ್ಟಕ್ಕೀಡಾಗಿದ್ದು, ಕೋವಿಡ್ ನಂತರದ ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದೆ. ಪತ್ರಿಕೆಗಳು ದಿನನಿತ್ಯದ ಮಾಹಿತಿಯ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ವಿಷಯಗಳ ಕುರಿತು ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ವಿಷಯಗಳನ್ನು ಸಹ ತಲುಪಿಸುತ್ತಿದ್ದು, ಆ ಮೂಲಕ ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಸುದ್ದಿಯನ್ನು ಬಿತ್ತರಿಸುವ ಕೆಲಸ ಪತ್ರಿಕೆಗಳು ಮಾಡುತ್ತಿವೆ.

ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಭವ್ಯಾ ನಾಗರಾಜ್ ಉಪನ್ಯಾಸ ನೀಡಿ ಮಾತನಾಡುತ್ತಾ, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಪತ್ರಿಕೋದ್ಯಮ ಬೆಳೆದುಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸುತ್ತಾ, ದಿನದಿಂದ ದಿನಕ್ಕೆ ಪತ್ರಿಕೋದ್ಯಮ ಬೆಳವಣಿಗೆ ಕಂಡುಕೊಳ್ಳುತ್ತಿದೆ. ಈ ಮಧ್ಯೆ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಪತ್ರಿಕೋದ್ಯಮವು ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು.

ಪ್ರತಿದಿನ ಹೊಸತನ್ನು ಕಲಿಯಲು ಪತ್ರಿಕೋದ್ಯಮ ಪ್ರೇರೇಪಿಸುತ್ತದೆ. ಯಾವುದೇ ರೀತಿಯ ಸವಾಲನ್ನು ಎದುರಿಸಲು ಧೈರ್ಯವನ್ನು ತುಂಬುವ ಶಕ್ತಿ ಪತ್ರಿಕೋದ್ಯಮ ಕ್ಷೇತ್ರಕ್ಕಿದೆ. ಈ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಕೇವಲ ಜರ್ನಲಿಸಂ ಪದವಿ ಹೊಂದಿದವರಲ್ಲದೇ, ಭಿನ್ನವಾಗಿ ಆಲೋಚಿಸುವ ಸಾಮಥ್ರ್ಯ ಹಾಗೂ ಉತ್ತಮ ಬರವಣಿಗೆ ಶೈಲಿ ಹೊಂದಿರುವವರು ಸಹ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರಿಗೆ ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ, ಕಾಲಕಾಲಕ್ಕೆ ತಕ್ಕಂತೆ ಆದ ಬದಲಾದ ವೈಖರಿ ಹಾಗೂ ಪ್ರಸ್ತುತ ವೃತ್ತಿಯಲ್ಲಿ ತೊಡಗಿಕಂಡವರು ಮಾಡಿಕೊಳ್ಳಬೇಕಾದ ಬದಲಾವಣೆ ಕುರಿತು ಅವಲೋಕನ ಮಾಡಿಕೊಳ್ಳಲು ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಮಾನವನ ಸರ್ವತೋಮುಖ ಅಭಿವೃದ್ಧಿ, ಬೆಳವಣಿಗೆಯಲ್ಲಿ ಪತ್ರಕೋದ್ಯಮ ಮಹತ್ತರ ಪಾತ್ರವನ್ನು ವಹಿಸುವುದರೊಂದಿಗೆ ಎಲ್ಲಾ ರೀತಿಯ ಜಾಗೃತಿಗಳನ್ನು ಮೂಡಿಸುವಲ್ಲಿ ತನ್ನದೇ ಆದ ಛಾಪನ್ನು ಹೊಂದಿದೆ. ಇದರ ಜೊತೆಗ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿ, ದೈನಂದಿನ ಪತ್ರಿಕೋದ್ಯಮದ ಚಟುವಟಿಕೆಗಳು ಯಾವ ರೀತಿ ನಡೆಯುತ್ತವೆ ಎಂದು ಸವಿಸ್ತಾರವಾಗಿ ತಿಳಿಸುತ್ತಾ, ಪತ್ರಿಕೆಯನ್ನು ಹೊರತರುವಾಗ ಅನೇಕ ಜನರ ಶ್ರಮವಿರುತ್ತದೆ. ಒಂದು ಸುದ್ದಿಯನ್ನು ವಿವಿಧ ಪತ್ರಿಕೆಗಳು ವಿಭಿನ್ನ ಶೈಲಿಯಲ್ಲಿ ಪ್ರಕಟಿಸುತ್ತವೆ ಎಂದ ಅವರು, ಪ್ರತಿಯೊಬ್ಬರೂ ಪತ್ರಿಕೆಯನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೆಯು ಸಂವಿಧಾನಿಕವಾಗಿ ಸಾಂಸ್ಥಿಕ ಸ್ಥಾನವನ್ನು ಪಡೆಯದಿದ್ದರೂ ಸಹ ಲೌಖಿಕ ಹಾಗೂ ಪ್ರಾಯೋಗಿಕವಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಿದ್ದಂತೆ. ಪತ್ರಿಕಾ ಧರ್ಮವನ್ನು ಪ್ರತಿಯೊಬ್ಬ ಪತ್ರಕರ್ತರು ಬದ್ಧತೆಯಿಂದ ಪಾಲಿಸಿದ್ದಲ್ಲಿ ಸಮಾಜದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ತಳವೂರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಕಾಲೇಜಿನ ಕಲಾ ನಿಕಾಯದ ಡೀನ್ ಪ್ರೊ. ನಿಕೇತನಾ, ವಿವಿಧ ಪತ್ರಕರ್ತರು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಾರ್ತಾಭಾರತಿ ದಿನಪತ್ರಿಕೆಯ ಹಿರಿಯ ವರದಿಗಾರ ಬಿ.ಬಿ. ಶೆಟ್ಟಿಗಾರ್ ಅವರಿಗೆ ಪತ್ರಿಕಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.

ಪತ್ರಕರ್ತ ಅಜಿತ್ ಸನ್ಮಾನಿತರ ವ್ಯಕ್ತಿ ಪರಿಚಯ ಮಾಡಿಕೊಟ್ಟರು. ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಅಶ್ವಿನಿ ನಿರೂಪಿಸಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು.


Spread the love

Exit mobile version