Home Mangalorean News Kannada News ಪದವಿ ವಿದ್ಯಾರ್ಥಿಗಳು ದಾಖಾಲಾತಿ ಶುಲ್ಕ ನೀಡ ಬೇಕಿಲ್ಲ: ಫ್ರೆಟರ್ನಿಟಿ ಮೂವ್‍ಮೆಂಟ್

ಪದವಿ ವಿದ್ಯಾರ್ಥಿಗಳು ದಾಖಾಲಾತಿ ಶುಲ್ಕ ನೀಡ ಬೇಕಿಲ್ಲ: ಫ್ರೆಟರ್ನಿಟಿ ಮೂವ್‍ಮೆಂಟ್

Spread the love

ಪದವಿ ವಿದ್ಯಾರ್ಥಿಗಳು ದಾಖಾಲಾತಿ ಶುಲ್ಕ ನೀಡ ಬೇಕಿಲ್ಲ: ಫ್ರೆಟರ್ನಿಟಿ ಮೂವ್‍ಮೆಂಟ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕೆಲವು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಂದ ಮುಂದಿನ ಶೈಕ್ಷಣಿಕ ವರ್ಷದ ದಾಖಾಲಾತಿ ಶುಲ್ಕವನ್ನು ಆನ್‍ಲೈನ್ ಮೂಲಕ ಪಾವತಿಸಲು ಸೂಚಿಸಿದ್ದನ್ನು ಆಕ್ಷೇಪಿಸಿ ಫ್ರೆಟರ್ನಿಟಿ ಮೂವ್‍ಮೆಂಟ್ ದಕ್ಷಿಣ ಕನ್ನಡ ಜಿಲ್ಲೆ ಸಂಬಂಧಪಟ್ಟ ಪ್ರಾಂಶುಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರಾಂಶುಪಾಲರು ದಾಖಾಲಾತಿ ಶುಲ್ಕ ಪಾವತಿಸುವುದನ್ನು ಕಡ್ಡಾಯಗೊಳಿಸಿಲ್ಲ. ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಶುಲ್ಕ ಪಾವತಿಸುವುದಾದರೆ ಮಾತ್ರ ಸ್ವೀಕರಿಸಲಾಗುವುದು ಎಂದಿದ್ದಾರೆ.

ಲಾಕ್‍ಡೌನ್ ಪರಿಣಾಮ ಪದವಿ ಕಾಲೇಜುಗಳ ಸೆಮಿಸ್ಟರ್ ಪರೀಕ್ಷೆ ಬಾಕಿ ಇರುವುದರ ಮಧ್ಯೆಯೇ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕವನ್ನು ಆನ್‍ಲೈನ್ ಮುಖಾಂತರ ಪಾವತಿಸುವಂತೆ ಕೆಲವು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ಮೊಬೈಲ್ ಸಂದೇಶ ಕಳುಹಿಸಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಹೆತ್ತವರು ಗೊಂದಲಕ್ಕೀಡಾಗಿದ್ದರು. ಖಾಸಗಿ ಕಾಲೇಜುಗಳ ಈ ಕ್ರಮವನ್ನು ವಿರೋಧಿಸಿ ಫ್ರೆಟರ್ನಿಟಿ ಮೂವ್‍ಮೆಂಟ್ ಪ್ರಾಂಶುಪಾಲರ ಜತೆ ಶನಿವಾರದಂದು (ಜೂನ್ 6) ಮಾತುಕತೆ ನಡೆಸಿ ವಿದ್ಯಾರ್ಥಿಗಳಿಂದ ಶುಲ್ಕಕ್ಕೆ ಒತ್ತಾಯಿಸದಿರಲು ಸೂಚಿಸಿದೆ.

`ಪರೀಕ್ಷೆ ಬಾಕಿ ಇರುವಂತೆಯೇ ಕಾಲೇಜುಗಳು ಮುಂದಿನ ಶೈಕ್ಷಣಿಕ ವರ್ಷದ ಶುಲ್ಕ ಪಾವತಿಸಲು ಸೂಚಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಒಟ್ಟಾರೆ ನ್ಯಾಯಪರವಲ್ಲದ ಈ ನಡೆಯ ಬಗ್ಗೆ ಹಲವು ವಿದ್ಯಾರ್ಥಿಗಳು ಫ್ರೆಟರ್ನಿಟಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರನ್ನು ಜಿಲ್ಲಾ ವಿದ್ಯಾರ್ಥಿ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದನ್ನು ವಿಶ್ವವಿದ್ಯಾನಿಯದ ಗಮನಕ್ಕೆ ತರಲಾಗಿದೆ ಮತ್ತು ಉನ್ನತ ಶಿಕ್ಷಣ ಸಚಿವಾಲಯಕ್ಕೆ ಈ ಕುರಿತು ದೂರು ಸಲ್ಲಿಸಲಾಗಿದೆ’ ಎಂದು ಫ್ರೆಟರ್ನಿಟಿ ರಾಜ್ಯಾಧ್ಯಕ್ಷ ತಫ್ಲೀಲ್.ಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ದಾಖಾಲಾತಿ ಶುಲ್ಕದ ಆದಾಯದ ಆಧಾರದಲ್ಲಿ ಸಂಸ್ಥೆಯ ಹೆಚ್ಚಿನ ಭೋದಕ-ಭೋದಕೇತರ ಸಿಬ್ಬಂದಿಗಳಿಗೆ ಸಂಬಳ ನೀಡಲಾಗುತ್ತದೆ. ಆದಾಯದ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ನೀಡುವ ಶುಲ್ಕವನ್ನು ಮಾತ್ರ ಪಡೆಯಲಾಗುವುದು ಎಂದು ಪ್ರಾಂಶುಪಾಲರು ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟೀಕರಣ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪರೀಕ್ಷಾ ಶುಲ್ಕಕ್ಕೆ ಒತ್ತಾಯ ಬೇಡ
ಲಾಕ್‍ಡೌನ್ ಮುಗಿದು ತರಗತಿಗಳು ಆರಂಭವಾಗುವುದಕ್ಕೆ ಮುಂಚೆಯೇ ವಿದ್ಯಾರ್ಥಿಗಳಿಂದ ಸೆಮಿಸ್ಟರ್ ಪರೀಕ್ಷಾ ಶುಲ್ಕ ಪಡೆಯುವಂತೆ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ ಎಂದು ತಫ್ಲೀಲ್.ಯು ಆಕ್ಷೇಪಿಸಿದ್ದಾರೆ. ಇದರ ಬಗ್ಗೆ ಸ್ವತಃ ಕಾಲೇಜು ಪ್ರಾಂಶುಪಾಲರುಗಳು ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸಿದಾಗ ಕಾಲೇಜುಗಳಿಂದ ಕೇವಲ ವಿದ್ಯಾರ್ಥಿಗಳ ದಾಖಲೆಗಳನ್ನು ನೀಡುವಂತೆ ಮಾತ್ರ ಕೋರಲಾಗಿದೆ. ಪರೀಕ್ಷಾ ಶುಲ್ಕ ನೀಡುವಂತೆ ಸೂಚನೆ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.


Spread the love

Exit mobile version