ಪರಶುರಾಮ ಥೀಂ ಪಾರ್ಕ್ ಅಕ್ರಮ: ನಿರ್ಮಿತಿ ಕೇಂದ್ರ ನಿರ್ದೇಶಕ ಅರುಣ್ ಕುಮಾರ್ ಅಮಾನತು
ಉಡುಪಿ: ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದ ನಿರ್ದೇಶಕರಾದ ಅರುಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ|ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.
ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಪೂರ್ಣಗೊಳಿಸದೇ ಸಂಬಂದಪಟ್ಟ ಇಲಾಖೆಗೆ ಹಸ್ತಾಂತರ ಮಾಡದೇ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಿರುವುದರಿಂದ, ಸದ್ರಿ ಕಾಮಗಾರಿಯ ‘ಗುಣಮಟ್ಟದ ಬಗ್ಗೆ ಆರೋಪಗಳಿರುವುದರಿಂದ ಮತ್ತು ಈ ವಿಚಾರದ ಬಗ್ಗೆ. ಸಿ.ಒ.ಡಿ ತನಿಖೆ ಹಾಗೂ ನಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ವಿಚಾರಣಾ ಆಯೋಗದಲ್ಲಿ ತನಿಖಾ ಹಂತದಲ್ಲಿ ಇದ್ದು ಸದ್ರಿ ತನಿಖೆಗೆ ಅಡಚಣೆ ಆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಅರುಣ್ ಕುಮಾರ್, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿಟ್ಟು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ,
ಇವರ ಸ್ಥಾನಕ್ಕೆ ದಿವಾಕರ ಪಿ. ಸಹಾಯಕ ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಇವರನ್ನು ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಹುದ್ದೆಗೆ ಹೆಚ್ಚುವರಿ ಪ್ರಭಾರ ಆದೇಶ ನೀಡಿದ್ದಾರೆ.