ಪರಿವರ್ತನಾ ಟ್ರಸ್ಟ್ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮಂಗಳಮುಖಿಯರು

Spread the love

ಪರಿವರ್ತನಾ ಟ್ರಸ್ಟ್ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮಂಗಳಮುಖಿಯರು

ಮಂಗಳೂರು: ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುಲ್ವಾಮಾದಲ್ಲಿ ಉಗ್ರರಿಂದ ಹತರಾದ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರಿ ಕದ್ರಿ ಹುತಾತ್ಮ ಸ್ಮಾರಕದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಬಳಿಕ ಮೊಂಬತ್ತಿಗಳನ್ನು ಹಚ್ಚಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಈ ವೇಳೆ ಹುತಾತ್ಮ ಯೋಧರಿಗೆ ನುಡಿನಮನ ಸಲ್ಲಿಸಿದ ಪರಿವರ್ತನಾ ಚಾರಿಟೇಬಲ್ ಟ್ರಸ್ಟಿನ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಮಾತನಾಡಿ ನಾವು ಎಂದು ಕೂಡ ಸೈನಿಕರ ಸೇವೆಯನ್ನು ಕೇವಲವಾಗಿ ನೋಡುವಂತಿಲ್ಲ ಅಲ್ಲದೆ ಅವರ ಸೇವೆಯನ್ನು ಪ್ರತಿನಿತ್ಯ ನೆನಪಿಡಬೇಕಾಗಿದೆ. ನಮ್ಮೆಲ್ಲರ ರಕ್ಷಣೆಗೆ ಸೈನಿಕರು ಹಗಲು ರಾತ್ರಿಯೆನ್ನದೆ ತಮ್ಮ ಸೇವೆಯನ್ನು ಗಡಿಯಲ್ಲಿ ನೀಡುತ್ತಾರೆ. ಫೆಬ್ರವರಿ 14ರಂದು ಯೋಧರು ತಮ್ಮ ರಜೆಯನ್ನು ಮುಗಿಸಿ ತಮ್ಮ ನಿಗದಿತ ಸ್ಥಳಗಳಿಗೆ ತೆರಳುತ್ತಿದ್ದ ವೇಳೆ ಮಾನವ ಬಾಂಬರ್ ಸೇನಾ ವಾಹನಗಳಿಗೆ ಅಪ್ಪಳಿಸಿ 44 ಸೈನಿಕರನ್ನು ಕಳೆದುಕೊಳ್ಳುವಂತಾಯಿತು. ಪ್ರತಿಯೊಬ್ಬ ಭಾರತೀಯನ್ಊ ಕೂಡ ಈ ಘಟನೆಯನ್ನು ಖಂಡಿಸಲೇಬೇಕಾಗಿದೆ. ಈ ಘಟನೆ ದೇಶದ ಚರಿತ್ರೆಯಲ್ಲಿ ಮರೆಯಲಾದ ಘಟನೆಯಾಗಿದ್ದು, ನಮ್ಮ ಸಂಸ್ಥೆಯ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದೇವೆ ಎಂದರು.

ಇದೇ ವೇಳೆ ವಾಯ್ಲೆಟ್ ಪಿರೇರಾ ರಚಿಸಿದ ‘ವೀರ ಸೈನಿಕರಿಗೊಂದು ಸಲಾಮು’ ಕವಿತೆಯನ್ನು ವಾಚಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷೆ ರಮ್ಯಾ ಗೌಡ ಮಾತನಾಡಿ ನಾವಿಂದು ನಮ್ಮ ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಸಹೋದರರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಸರಕಾರಗಳು ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ರಕ್ಷಣೆ ಒದಗಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

ಕಾರ್ಯದರ್ಶಿ ಸಂಜನಾ ಮಾತನಾಡಿ ನಮ್ಮ ದೇಶದ 44 ಮಂದಿ ಸೈನಿಕರನ್ನು ಕಳೆದುಕೊಂಡಿರುವುದು ನಿಜಕ್ಕೂ ವೇದನೆಯ ಸಂಗತಿಯಾಗಿದೆ. ಮೃತ ಹುತಾತ್ಮ ಯೋಧರ ಆತ್ಮಗಳಿಗೆ ಸದ್ಗತಿ ದೊರೆಯಲಿ ಎಂದರು.


Spread the love