Home Mangalorean News Kannada News ಪರಿಷತ್ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆಯ ಘೋಷಣೆ ಮಾಡಿದ ರಘುಪತಿ ಭಟ್

ಪರಿಷತ್ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆಯ ಘೋಷಣೆ ಮಾಡಿದ ರಘುಪತಿ ಭಟ್

Spread the love

ಪರಿಷತ್ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆಯ ಘೋಷಣೆ ಮಾಡಿದ ರಘುಪತಿ ಭಟ್

ಉಡುಪಿ: ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಶಾಸಕರೂ ಆದ ಕೆ.ರಘುಪತಿ ಭಟ್‌ ಘೋಷಿಸಿದರು.

ಕರಂಬಳ್ಳಿಯ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದವೀಧರರ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರು ಖಚಿತವಾಗಿ ಟಿಕೆಟ್‌ ನೀಡುವ ಭರವಸೆಯನ್ನೂ ನೀಡಿದ್ದರು.

ಅದರಂತೆ, ಕ್ಷೇತ್ರದಾದ್ಯಂತ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು 20 ಸಾವಿರಕ್ಕೂ ಹೆಚ್ಚು ಮಂದಿಯ ನೋಂದಣಿ ಮಾಡಿಸಿದ್ದೇನೆ. ಇದೀಗ ಏಕಾಏಕಿ ಟಿಕೆಟ್ ನಿರಾಕರಿಸಿರುವುದರಿಂದ ತೀವ್ರವಾಗಿ ಮನನೊಂದಿದ್ದು ಪಕ್ಷೇತ್ತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ಎಂದರು.

ಪಕ್ಷಕ್ಕಾಗಿ ದಶಕಗಳ ಕಾಲ ದುಡಿದ ಹಿರಿಯರಿಗೆ ಟಿಕೆಟ್ ನೀಡಬಹುದಿತ್ತು. ಹಿರಿತನ ಹಾಗೂ ಪಕ್ಷನಿಷ್ಠೆ ಬದಿಗಿಟ್ಟು ವರ್ಷದ ಹಿಂದಷ್ಟೆ ಬಿಜೆಪಿ ಸೇರಿದವರಿಗೆ ಟಿಕೆಟ್ ನೀಡಿರುವುದು ಬೇಸರ ತಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಿದಾಗಲೂ ಬಂಡಾಯ ಪ್ರದರ್ಶಿಸದೆ ಪಕ್ಷದ ಗೆಲುವಿಗೆ ಶ್ರಮಿಸಿದ್ದೇನೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೂ ದುಡಿದಿದ್ದೇನೆ. ಇಷ್ಟಾದರೂ ಟಿಕೆಟ್ ನಿರಾಕರಿಸಿರುವುದು ಅತೀವ ನೋವು ತಂದಿದೆ ಎಂದರು.

ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆಗಳಿಂದ ಪದವೀದರ ಮತದಾರರು ಕರೆ ಮಾಡಿ ಚುನಾವಣೆಗೆ ನಿಲ್ಲುವಂತೆ ಬೆಂಬಲ ನೀಡಿದ್ದಾರೆ. ನೊಂದಿರುವ ಸಮಸ್ತ ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.

‘ಪರಿಷತ್ ಚುನಾವಣೆ ರಾಜ್ಯ ಹಾಗೂ ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯಲ್ಲ. ಸರ್ಕಾರ ರಚಿಸಲೂ ಸಾದ್ಯವಿಲ್ಲ. ಪಕ್ಷದ ಚಿಹ್ನೆಯಡಿಯಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲ. ನನ್ನ ಸ್ಪರ್ಧೆ ಬಿಜೆಪಿ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ ರಘುಪತಿ ಭಟ್‌ ಗೆದ್ದರೂ ಸೋತರೂ ಬಿಜೆಪಿಯಲ್ಲಿಯೇ ಇರುತ್ತೇನೆ, ಉಚ್ಛಾಟಿಸಿದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ’ ಎಂದರು.

ಮೂರು ಬಾರಿ ಉಡುಪಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದು ಪಕ್ಷದ ನಿರ್ಧಾರದ ವಿರುದ್ಧ ಬಂಡಾಯ ಪ್ರದರ್ಶಿಸಿಲ್ಲ. ಖಚಿತವಾಗಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಮಾತು ತಪ್ಪಿದ್ದಕ್ಕೆ ಬೇಸರವಿದೆ. ಕರಾವಳಿಯಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಸರಿಯಲ್ಲ. ಈಗಲೂ ಅಭ್ಯರ್ಥಿ ಬದಲಾವಣೆಗೆ ಸಮಯಾವಕಾಶವಿದ್ದು ‘ಬಿ’ ಫಾರಂ ನೀಡಿದರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷೇತ್ತರವಾಗಿ ಸ್ಪರ್ಧಿಸುವುದು ಖಚಿತ ಎಂದು ರಘುಪತಿ ಭಟ್‌ ಸ್ಪಷ್ಟಪಡಿಸಿದರು.


Spread the love

Exit mobile version