ಪರಿಸರ ಸಂರಕ್ಷಣೆಗೆ ಸಮಾನ ಮನಸ್ಕ ಯುವಕರ ‘ಸೆಲ್ಫಿ ವಿದ್ ಗ್ರೀನ್’
ಉಡುಪಿ: ಯುವಶಕ್ತಿ ಒಂದಾದರೆ ಉತ್ತಮ ಯೋಜನೆಯ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎನ್ನುವ ಮಾತಿಗೆ. ಸ್ವಾಮಿ ವಿವೇಕಾನಂದರು ಕೂಡ ರಾಷ್ಟ್ರದ ಯುವ ಶಕ್ತಿಯ ಬಗ್ಗೆ ಅಪಾರ ಆಸಕ್ತಿವಹಿಸಿ, ಯುವ ಶಕ್ತಿಯ ಕುರಿತು ಪ್ರೋತ್ಸಾಹದ ಮಾತುಗಳನ್ನು ಆಡಿರುವುದನ್ನು ನಾವು ಗಮನಿಸಬಹುದು. ಇದಕ್ಕೆ ಸಾಕ್ಷಿ ಎನ್ನುವಂತೆ ಸಾಸ್ತಾನ ಪರಿಸರದ ಒಂದಿಷ್ಟು ಸಮಾನ ಮನಸ್ಕ ಯುವಕರು ಒಟ್ಟಾಗಿ ಪರಿಸರ ಸಂರಕ್ಷಣೆಯ ಪಣ ತೊಟ್ಟು, ಆಧುನಿಕ ರೀತಿಯಲ್ಲಿ ಪರಿಸರ ರಕ್ಷಣೆಯ ಕಹಳೆ ಊದಿದ್ದಾರೆ.
ಪರಿಸರದ ರಕ್ಷಣೆ ಕೂಗು ಎನ್ನುವುದು ಮಾತಿಗೆ ಸೀಮಿತವಾಗಬಾರದು, ಪುಸ್ತಕರದ ಬದನೆಕಾಯಿಯಾಗಬಾರದು ಎನ್ನುವ ನಿಟ್ಟಿನಲ್ಲಿ ಸಮಾನ ಮನಸ್ಕರಾದ ಸಾಸ್ತಾನದ ಮಿತ್ರರು ಈ ಬಾರಿ ವಿನೂತನ ಪರಿಸರ ರಕ್ಷಣೆ ಕಾರ್ಯಕ್ರಮ ಪರಿಸರ ಹಬ್ಬ-2016 ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮ ಇಷ್ಟೆ ನಿಮಗೆ ಅವಕಾಶವಿರುವ ಜಾಗದಲ್ಲಿ ಸುಂದರವಾದ ಗಿಡವನ್ನು ನೆಟ್ಟು ಅದರೊಂದಿಗೆ ಒಂದು ಆಕರ್ಷಕ ಸೇಲ್ಫಿ ತೆಗೆದು ಸಾಸ್ತಾನ ಮಿತ್ರ ವಾಟ್ಸಾಪ್ಗೆ ಕಳುಹಿಸಬೇಕು. ಆಕರ್ಷಕವು ವಿಭಿನ್ನವಾಗಿರುವ ಸೆಲ್ಫಿಯನ್ನು ಆಯ್ಕೆ ಮಾಡಿ ಸ್ವಾತಂತ್ರ್ಯ ದಿನಾಚರಣೆಯಂದು ಬಹುಮಾನ ನೀಡುವ ಕಾರ್ಯಕ್ರಮವನ್ನು ಜುಲೈ 1ರಿಂದಲೇ ಕಾರ್ಯುರೂಪಕ್ಕೆ ತಂದಿದ್ದಾರೆ.
ಸದ್ಯ 350ಕ್ಕೂ ಅಧಿಕ ಸೆಲ್ಫಿಗಳು ಬಂದಿದ್ದು, ಒಟ್ಟು 350 ಗಿಡಗಳು ಉತ್ಸಾಹಿ ಯುವಕರಿಂದ ಈಗಾಗಲೇ ಸೆಲ್ಫಿ ವಿದ್ ಗ್ರೀನ್ ಕಾರ್ಯಕ್ರಮದ ಹಿನ್ನಲೆಯಲ್ಲಿ ನೆಡಲಾಗಿದೆ. ಈ ಕಾರ್ಯಕ್ರಮದ ಕುರಿತು ವಾಟ್ಸಾಪ್ ಆಂದೋಲನ ಪ್ರಾರಂಭವಾಗಿದ್ದು ದಿನಕ್ಕೆ ಮೂರ್ನಾಲ್ಕು ಸೆಲ್ಫಿಗಳು ಬರುತ್ತಿವೆ ಎನ್ನುತ್ತಾರೆ ಕಾರ್ಯಕ್ರಮದ ಮೂಲ ಕರ್ತೃ ವಿನಯಚಂದ್ರ ಸಾಸ್ತಾನ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಸಂಸ್ಥೆಗಳಾದ ಗ್ರಾಮಕ್ಷೇಮ ಚಾರಿಟೇಬಲ್ ಟ್ರಸ್ಟ್(ರಿ) ಪಾಂಡೇಶ್ವರ ಮತ್ತು ಯಕ್ಷೇಶ್ವರಿ ಗೆಳೆಯರ ಬಳಗ ಗುಂಡ್ಮಿ ಇವರು ಸಹಕಾರ ನೀಡಿದ್ದಾರೆ. ಈ ವಿನೂತನ ಕಾರ್ಯಕ್ರಮದ ಬಗ್ಗೆ ಅಭಿನಂದನೆ ಸಲ್ಲಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮತ್ತು ಕೋಟ ಪೊಲೀಸ್ ಉಪನಿರೀಕ್ಷಕ ಕಬ್ಬಾಳ್ರಾಜ್ ಹೆಚ್ಡಿ ಅವರು ಕೂಡ ಸ್ವತಃ ನಾವೇ ಗಿಡ ನೆಟ್ಟು ಪೋಟೋ ತೆಗೆದು ಪರಿಸರ ಹಬ್ಬದಲ್ಲಿ ಭಾಗಿಯಾಗಿದ್ದಾರೆ.
ಸಾಸ್ತಾನದ ಮಿತ್ರರು ತಂಡದ ವಿನಯಚಂದ್ರ ಪ್ರಕಾರ ಪರಿಸರ ಸಂರಕ್ಷಣೆ ನಮ್ಮೇಲ್ಲರ ಹೊಣೆ. ನಗರೀಕರಣದ ಹಿನ್ನಲೆಯಲ್ಲಿ ಸಾಕಷ್ಟು ಹಸಿರು ನಾಶವಾಗುತ್ತಿದೆ. ಯುವಕರಾದ ನಾವು ಪರಿಸರ ಸಂರಕ್ಷಣೆಯ ಕುರಿತು ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಸರ ಹಬ್ಬ 2016 ಆಯೋಜಿಸಿ, ಸೆಲ್ಫಿ ವಿದ್ ಗ್ರೀನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮ್ಮೇಲ್ಲರ ಪಾಲ್ಗೋಳ್ಳುವಿಕೆ. ನೀವು ಪರಿಸರಕ್ಕೆ ನೀಡುವ ಕೊಡುಗೆಯಾಗಲಿದೆ.
ಈ ಅಭಿಯಾನದಲ್ಲಿ ಭಾಗವಹಿಸಲಿ ಒಂದಿಷ್ಟು ನಿಯಮ ನಿಬಂಧನೆಗಳಿವೆ. ಗಿಡವನ್ನು ಸಾರ್ವಜನಿಕ ಜಾಗದಲ್ಲಿ ಸ್ವತಃ ನೆಟ್ಟು, ನೀರೆರೆದು, ಗಿಡ ನೆಡುವಾಗ ಒಂದು ಸೆಲ್ಫಿ ಮತ್ತು ಅದಕ್ಕೆ ರಕ್ಷಣಾ ಬೇಲಿ ನಿರ್ಮಿಸಿ ಇನ್ನೊಂದು ಸೆಲ್ಫಿ ಕಳುಹಿಸಬೇಕು. ಅಲ್ಲದೇ ನೀವು ನೆಟ್ಟ ಗಿಡದಲ್ಲಿ ನಿಮ್ಮ ನಾಮ ಫಲಕ ಹಾಕಿ ಮುಂದೆ ಅದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು ಅಲ್ಲದೇ ಗಿಡವನ್ನು ಸಂರಕ್ಷಣೆ ಮಾಡಿದಲ್ಲಿ ಮುಂದಿನ ವರ್ಷ ಮತ್ತೊಂದು ಬಹುಮಾನ ನೀಡುವ ಕಾರ್ಯಕ್ರಮವೂ ಕೂಡ ಇದರಲ್ಲಿ ಸೇರಿದೆ.
ಸೆಲ್ಫಿ ಕಳುಹಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ನೀವು ಮೊಬೈಲ್ ಸಂಖ್ಯೆ 8197407570 ಅಥವಾ sasthan576226@gmail.com ಸೆಲ್ಫಿ ಕಳುಹಿಸಬಹುದಾಗಿದೆ.