ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ – ದಯಾನಂದ
ಮಲ್ಪೆ: ಮನೆಯ ಕಸವನ್ನು ರಸ್ತೆಗೆ ಎಸೆಯದೆ ಅದನ್ನು ಕಾಂಪೋಸ್ಟ್ ಗೊಬ್ಬರವಾಗಿಸಿ ಉಪಯೋಗಿಸುವುದರಿಂದ ತೋಟದ ಫಲವತ್ತತೆ ಹೆಚ್ಚಿಸಬಹುದು ಈ ಮೂಲಕ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಬೀಳುವುದನ್ನು ತಪ್ಪಿಸಿ ಪರಿಸರವನ್ನು ಸ್ವಚ್ಚವಾಗಿಸಿಡಬಹುದು ಎಂದು ತೆಂಕನಿಡಿಯೂರು ಗ್ರಾಮಪಂಚಾಯತ್ ಅಭಿವೃದ್ಧಿಸ ಅಧಿಕಾರಿ ದಯಾನಂದ ಹೇಳಿದರು
ಅವರು ಭಾನುವಾರ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಸಭಾಂಗಣದಲ್ಲಿ ಚರ್ಚಿನ ಪರಿಸರ ಆಯೋಗ, ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿ ತೊಟ್ಟಂ, ತೆಂಕನಿಡಿಯೂರು ಮತ್ತು ಬಡಾನಿಡಿಯೂರು ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಕೃತಿ – ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಜನರು ಪರಿಸರದ ಮೇಲೆ ಕಾಳಜಿ ತೋರದಿದ್ದರೆ ಮುಂದೊಂದು ಇಡೀ ಜೀವ ಸಂಕುಲಕ್ಕೆ ಆಪತ್ತು ಎದುರಾಗುವ ಸಾಧ್ಯತೆ ಇದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಮರ ಗಿಡಗಳನ್ನು ಬೆಳೆಸುವುದರಿಂದ ತಾಪಮಾನ ತಗ್ಗಲು ಸಾಧ್ಯವಿದೆ ಎಂದರು.
ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಪರಿಸರ ಅಸಮತೋಲನದಿಂದಲೇ ಹವಾಮಾನ ವೈಪರಿತ್ಯ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಪರಿಸರ ರಕ್ಷಣೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿದೆ. ಪ್ರತಿಯೊಂದು ಜೀವರಾಶಿಗೆ ಪರಿಸರ ಅತ್ಯಂತ ಅಮೂಲ್ಯ ಕೊಡುಗೆಯಾಗಿದ್ದು ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು ಎಂದೆಂದಿಗೂ ಉಳಿಯಬೇಕು. ಪ್ರತಿಯೊಬ್ಬರೂ ಕೂಡ ಪರಿಸರದ ಮೇಲೆ ಅವಲಂಭಿತರಾಗಿದ್ದು ಅದಕ್ಕಾಗಿ ಪರಿಸರ ಸಂರಕ್ಷಿಸಲು ಮುಂದಾಗಬೇಕು ಎಂದರು.
ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿ ತೊಟ್ಟಂ ಇದರ ಅಧ್ಯಕ್ಷರಾದ ರಮೇಶ್ ತಿಂಗಳಾಯ ಮಾತನಾಡಿ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇಂದಿನ ದಿನಗಳಲ್ಲಿ ಮುಖ್ಯವಾಗಿ ಆಗಬೇಕಾಗಿದೆ. ಪರಿಸರದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದ್ದು ಇದರ ಸೂಕ್ತ ನಿರ್ವಹಣೆ ಬಗ್ಗೆ ಪಂಚಾಯತ್ ಗಳು ಗಮನ ಹರಿಸಬೇಕು ಇದರೊಂದಿಗೆ ಜನರು ಸಹ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನಿಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಅವರು ಪರಿಸರ ನಾಶದಿಂದ ಆಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.
ತೆಂಕನಿಡಿಯೂರು ಮತ್ತು ಬಡಾನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಡಿ ನಾಯ್ಕ್, ಬಡಾನಿಡಿಯೂರು ಗ್ರಾಪಂ ಅಧ್ಯಕ್ಷೆ ಯಶೋಧಾ ಆಚಾರ್ಯ, ಪಂಚಾಯತ್ ಕಾರ್ಯದರ್ಶಿ ಗುರುರಾಜ್, ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಸುಶ್ಮಾ, ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿ ತೊಟ್ಟಂ ಉಪಾಧ್ಯಕ್ಷರಾದ ಶಬೀರ್ ಸಾಹೇಬ್, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಶರತ್ ಶೆಟ್ಟಿ, ಮೀನಾ ಪಿಂಟೊ, ಯಾದವ ಹಾಗೂ ಇತರರು ಉಪಸ್ಥಿತರಿದ್ದರು.
ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿ ತೊಟ್ಟಂ ಕಾರ್ಯದರ್ಶಿ ಲೆಸ್ಲಿ ಆರೋಜಾ ಸ್ವಾಗತಿಸಿ, ಪರಿಸರ ಆಯೋಗದ ಸಂಚಾಲಕರಾದ ಜೊಸೇಫ್ ಪಿಂಟೊ ವಂದಿಸಿದರು. ಲವೀನಾ ಎ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.