ಪರಿಹಾರ ಮಂಜೂರಾತಿಗೆ ವಿಳಂಬ ಸಹಿಸಲಾಗದು- ಸ್ಪೀಕರ್ ಯು.ಟಿ ಖಾದರ್
ಮಂಗಳೂರು: ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಅಥವಾ ಪ್ರಾಕೃತಿಕ ದುರಂತಗಳ ಸಂತ್ರಸ್ತರಿಗೆ ಸೌಲಭ್ಯವನ್ನು ಮಂಜೂರು ಮಾಡಲು ದಾಖಲೆಗಳ ಕೊರತೆ ನೆಪದಲ್ಲಿ ವಿಳಂಬಿಸುವುದನ್ನು ಸಹಿಸಲಾಗದು ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.
ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ಉಳ್ಳಾಲ ತಾಲೂಕು ಮಟ್ಟದ ಕುಡಿಯುವ ನೀರಿನ ಯೋಜನೆ, ಅತಿವೃಷ್ಟಿ ಅನಾವೃಷ್ಟಿ ಕುರಿತು ಉಳ್ಳಾಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಮಳೆಹಾನಿ, ಮನೆಕುಸಿತ, ಕಾಡುಪ್ರಾಣಿಗಳ ದಾಳಿ ಸೇರಿದಂತೆ ವಿವಿಧ ಪ್ರಾಕೃತಿಕ ಘಟನೆಗಳು ಸಂಭವಿಸಿದಾಗ ಸಂತ್ರಸ್ತರಿಗೆ ಪರಿಹಾರ ನೀಡಲು ದಾಖಲೆಗಳ ಕೊರತೆಯ ನೆಪದಲ್ಲಿ ಪರಿಹಾರ ವಿಳಂಬಿಸುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ. ಘಟನೆಗಳು ನಡೆದಿರುವುದು ವಾಸ್ತವ ಆಗಿದ್ದರೂ ಸಾರ್ವಜನಿಕರಿಗೆ ಪರಿಹಾರ ನೀಡಲು ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಘಟನೆಗಳ ಬಗ್ಗೆ ಆಯಾಯ ಸ್ಥಳಗಳಿಗೆ ಭೇಟಿ ನೀಡಿ ದೃಢೀಕರಿಸಿ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು ಅವರು ಕಟ್ಟುನಿಟ್ಟಾಗಿ ಸೂಚಿಸಿದರು
ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್‍ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕಂದಾಯ ಇಲಾಖೆಯೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಸಂಶಯದ ಮೇಲೆ ಜನರಿಗೆ ಪರಿಹಾರ ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಸ್ಪೀಕರ್ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಗ್ರಾಮ ಪಂಚಾಯತ್ ಡೋರ್ ನಂಬರ್ ದಾಖಲೆಗಳನ್ನು ಸಲ್ಲಿಸಿದ ನಂತರವೂ ವಾಸ ಯೋಗ್ಯ ಪ್ರಮಾಣ ಪತ್ರ ನೀಡಲು ಕೇಳುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ. ಇದರಿಂದ ವಿದ್ಯುತ್ ಸಂಪರ್ಕ ನೀಡಲು ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಮನೆ ನಿರ್ಮಿಸಿದ ನಂತರ ಗ್ರಾಮ ಪಂಚಾಯತ್ ಸಿಸಿ ಪಡೆದು ವಿದ್ಯುತ್ ಸಂಪರ್ಕ ನೀಡುವಂತೆ ಅವರು ಸೂಚಿಸಿದರು.
ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ತಂಡ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು. ಸಮಸ್ಯೆಗಳ ಬಗ್ಗೆ ಪರಸ್ಪರ ಆರೋಪಿಸುವ ಬದಲು ಅದರ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಅವರು ಸೂಚಿಸಿದರು.
ಲೋಕೋಪಯೋಗಿ ರಸ್ತೆಗಳ ಬದಿಗಳಲ್ಲಿ ತಾತ್ಕಲಿಕವಾಗಿ ಚಪ್ಪರ, ಶೀಟ್ ಹಾಕಿ ವ್ಯಾಪಾರ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಆದರೆ ತಳ್ಳುಗಾಡಿ ಅಥವಾ ಅಂದಂದೇ ಸರಕುಗಳನ್ನು ತಂದು ಹೋಗುವ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಅವರು ಪಿ.ಡಬ್ಲ್ಯು.ಡಿ ಅಧಿಕಾರಿಗಳಿಗೆ ಸೂಚಿಸಿದರು.
ಐದು ವರ್ಷಗಳಿಗೊಮ್ಮೆ ನಡೆಯುವ ಉಳ್ಳಾಲ ಉರೂಸ್ ಈ ತಿಂಗಳಲ್ಲಿ ಆರಂಭವಾಗಲಿದ್ದು, ಎಲ್ಲಾ ಪ್ರಮುಖ ರಸ್ತೆಗಳನ್ನು ಸುಸಜ್ಜಿತಗೊಳಿಸಬೇಕು. ದೇಶದ ವಿವಿಧ ಕಡೆಗಳಿಂದ ಭಕ್ತಾದಿಗಳು ಬರುವುದರಿಂದ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ತೊಕ್ಕೊಟ್ಟು – ಮುಡಿಪು ರಸ್ತೆಯ ಚತುಷ್ಪಥ ಕಾಮಗಾರಿ ಮುಗಿದ ನಂತರ ಚರಂಡಿ, ಫುಟ್‍ಪಾತ್ ಮತ್ತಿತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಸಜಿಪ-ತುಂಬೆ ನಡುವೆ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿ ಕೈಗೆತ್ತಿಕೊಳ್ಳಲು ಯು.ಟಿ. ಖಾದರ್ ಅಧಿಕಾರಿಗೆ ಸೂಚಿಸಿದರು.
ಕುಡಿಯುವ ನೀರಿನ ಯೋಜನೆಗಳನ್ನು ಭವಿಷ್ಯದ 30 ವರ್ಷಗಳ ಜನಸಂಖ್ಯೆಯ ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಬೇಕು. ಯಾವುದೇ ಕುಡಿಯುವ ನೀರಿನ ಯೋಜನೆಯಲ್ಲಿ ಮನೆ ಮನೆಗೆ ನಳ್ಳಿ ನೀರಿನ ಸಂಪರ್ಕ ನೀಡಲು ಸಾರ್ವಜನಿಕರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪೀಕರ್ ಸೂಚಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪೈಪ್‍ಲೈನ್ ಅಳವಡಿಕೆ ಮತ್ತು ಟ್ಯಾಂಕ್ ನಿರ್ಮಾಣ ಕಾಮಗಾರಿಯಲ್ಲಿ ಕಂಡು ಬಂದಿರುವ ಎಲ್ಲಾ ಸಮಸ್ಯೆಗೆ ಮುಂದಿನ 15 ದಿನಗಳೊಳಗೆ ಅಧಿಕಾರಿಗಳು ಗ್ರಾಮ ಪಂಚಾಯತ್‍ಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಅವರು ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿಗಳಿಗೆ ಸೂಚಿಸಿದರು.
ಮುಂಬರುವ ಮಳೆಗಾಲದಲ್ಲಿ ಸಂಭವನೀಯ ಗುಡ್ಡ ಕುಸಿತ ಪ್ರದೇಶಗಳನ್ನು ಮೊದಲೇ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ನದಿತೀರ ಮುಳುಗಡೆ ಪ್ರದೇಶದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ವಿಧಾನಸಭೆ ಸ್ಪೀಕರ್ ಸೂಚಿಸಿದರು.
ಗ್ರಾಮ ಪಂಚಾಯತ್‍ಗಳು ಬೀದಿ ನಾಯಿಗಳ ಸಮೀಕ್ಷೆ ಮಾಡಿ ಅವುಗಳ ನಿರ್ವಹಣೆಗೆ ಪ್ರತ್ಯೇಕ ನಿಧಿ ಮೀಸಲಿಡಬೇಕು. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ತೆರವುಗೊಳಿಸಬೇಕು. ಮಳೆಗಾಲದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು.