ಪರೀಕ್ಷಾ ವಂಚಿತ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿ –ಎಬಿವಿಪಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪದವಿ ತರಗತಿಗಳ ಮೊದಲ ಸೆಮಿಸ್ಟರ್ ಪರೀಕ್ಷೆಯ ಪ್ರವೇಶ ಪತ್ರದಲ್ಲಿದ್ದ ಗೊಂದಲದಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ವಂಚಿತರಾಗಿ ಹತಾಶರಾದ ಘಟನೆ ಬೆಳಕಿಗೆ ಬಂದಿದ್ದು, ವಿಶ್ವವಿದ್ಯಾನಿಲಯದ ಬೇಜವಬ್ದಾರಿಯ ಈ ನಡೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.
ಮಂಗಳೂರು ವಿಶ್ವವಿದ್ಯಾನಿಲಯದ ನೇರ ಆಡಳಿತ ನಿಂತ್ರಣಕ್ಕೊಳಪಟ್ಟ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು (ಎಫ್.ಎಮ್.ಸಿ) ಮಡಿಕೇರಿಯಲ್ಲಿ ಪ್ರಥಮ ಸೆಮಿಸ್ಟರ್ ಪರೀಕ್ಷಾ ಪ್ರವೇಶಾತಿ ಪತ್ರದಲ್ಲಾದ ದೋಷದಿಂದ ಸುಮಾರು 13 ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರಿನ ಇಂಗ್ಲೀಷ್ ಭಾಷಾ ವಿಷಯದ ಪರೀಕ್ಷೆ ಬರೆಯಲು ಅವಕಾಶ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು ತಮಗೆ ಲಭ್ಯವಾದ ಪತ್ರದಲ್ಲಿ ನಮೂದಿಸಿದಂತೆ ದಿನಾಂಕ 26.10.2017ಕ್ಕಿದ್ದ ಇಂಗ್ಲೀಷ್ ಪರೀಕ್ಷೆಗೆ ತಯಾರಿ ನಡೆಸಿದ್ದರೆ ಪುನರಾವರ್ತಿತ ವೇಳಾಪಟ್ಟಿಯಂತೆ ವಿಶ್ವವಿದ್ಯಾನಿಲಯವು ದಿನಾಂಕ 23.10.2017ಕ್ಕೆ ಇಂಗ್ಲೀಷ್ ಪರೀಕ್ಷೆಯನ್ನು ನಡೆಸಿದೆ.
ಸಕಾಲಿಕವಾಗಿ ಮಾಹಿತಿ ಲಭ್ಯವಾಗದೆ ಹದಿಮೂರು ವಿದ್ಯಾರ್ಥಿಗಳು ನೊಂದು ಹತಾಶರಾಗಿದ್ದು ಮಾತ್ರವಲ್ಲದೆ ವಿದ್ಯಾರ್ಥಿ ಪೆÇೀಷಕರು ಮಕ್ಕಳ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಪರೀಕ್ಷಾ ಫಲಿತಾಂಶವೂ ಸೇರಿದಂತೆ ಒಂದಲ್ಲ ಒಂದು ಅಧ್ವಾನಗಳನ್ನು ಮಾಡುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಈ ಉಡಾಫೆ ಪ್ರವೃತ್ತಿಗಳನ್ನು ವಿರೋಧಿಸುವುದಲ್ಲದೆ ಪರೀಕ್ಷಾ ವಂಚಿತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಬಂಧಪಟ್ಟ ಕಾಲೇಜು ಹಾಗೂ ವಿಶ್ವವಿದ್ಯಾನಿಲಯವನ್ನು ಆಗ್ರಹಿಸುತ್ತದೆ.