ಪರೋಪಕಾರಿ ಮನೋಭಾವ ಬೆಳೆಸುವ ರಮಝಾನ್-ಎಮ್. ಇಸ್ಮಾಯಿಲ್
ಕೆಮ್ಮಣ್ಣು : ರಮಝಾನ್ ತಿಂಗಳು ತನ್ನಂತೆ ಇರುವ ಮಾನವ ಜೀವಿಗಳ ಬಗ್ಗೆ ಕರುಣೆ, ಅನುಕಂಪಗಳನ್ನು ಉದ್ದೀಪಿಸಿ ಪರೊಪಕಾರಿ ಮನೋಭಾವವನ್ನು ಬೆಳೆಸುವ ಮಾಸವಾಗಿದೆ ಎಂದು ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಜನಾಬ್ ಎಮ್. ಇಸ್ಮಾಯಿಲ್‍ರವರು ಹೇಳಿದರು.
ಅವರು ತೋನ್ಸೆ ಗ್ರಾಮ ಪಂಚಾಯತ್‍ನ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಹೂಡೆ ಶಾಖೆಯ ವತಿಯಿಂದ ಆಯೋಜಿಸಲಾದ “ಜನಪ್ರತಿನಿಧಿಗಳೊಂದಿಗೆ ಈದ್ ಮಿಲನ್” ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಉಪವಾಸ ಮನುಷ್ಯನನ್ನು ದೇವನೊಂದಿಗೆ ಅತ್ಯಂತ ನಿಕಟಗೊಳಿಸುವ ಆರಾಧನೆಯಾಗಿದೆ ಆದರಿಂದ್ದ ಈ ಆರಾಧನೆಯ ಮೂಲಕ ಒಂದು ತಿಂಗಳ ತರಬೇತಿಯನ್ನು ಪಡೆದ ವ್ಯಕ್ತಿಗೆ ಮುಂದಿನ ಹನ್ನೊಂದು ತಿಂಗಳ ಜೀವನಕ್ಕೆ ಅದು ದಾರಿ ದೀಪವಾಗಬೇಕು ಈ ಮೂಲಕ ಒಂದು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ ಹಾಗೂ ಜನಪ್ರತಿನಿಧಿಗಳಿಗೆ ಈ ತಿಂಗಳ ಆಚರಣೆಗಳು ಭೋಧಪ್ರದವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ್ ತೋನ್ಸೆಯವರು ಧರ್ಮಗ್ರಂಥಗಳ ಸಕಾರಾತ್ಮಕ ಅಧ್ಯಯನವು ಮನುಷ್ಯನಿಗೆ ಆಧ್ಯಾತ್ಮಿಕ ಸ್ಪೂರ್ತಿ ಮತ್ತು ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ, ರಮಝಾನ್ ಮಾಸ ಆತ್ಮಶುದ್ಧಿ ಸಾಧಿಸುವ ಮಾಸವಾಗಿದೆ ಎಂದು ಹೇಳಿದರು.
ಕಲ್ಯಾಣಪುರ ಪಂಚಾಯತ್ ಅಧ್ಯಕ್ಷೆ ಪುಷ್ಪ ಎಸ್ ಕೋಟ್ಯಾನ್, ತಾಲೂಕು ಪಂಚಾಯತ್ ಸದಸ್ಯೆ ಸುಲೋಚನ ಮತ್ತು ಪಂಚಾಯತ್ ಅಭಿವೃಧಿ ಅಧಿಕಾರಿ ಕಮಲ ಮುಂತಾದವರು ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲ್ಯಾಣಪುರ ಮತ್ತು ತೋನ್ಸೆ ಪಂಚಾಯತ್‍ನ ಸದಸ್ಯರುಗಳಲ್ಲದೆ ಎರಡು ಪಂಚಾಯತ್‍ನ ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಪಂಚಾಯತ್ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿಗಳು ಇನ್ನಿತರ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಬಾಂಗಿ ಇಬ್ರಾಹೀಮ್ ಸಾಹೇಬ್ ಕುರ್‍ಆನ್ ವಾಚಿಸಿದರು, ಮುಹಮ್ಮದ್ ಇದ್ರಿಸ್‍ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ಜಮಾಅತೆ ಇಸ್ಲಾಮಿ ಹಿಂದ್, ತೋನ್ಸೆ-ಹೂಡೆ ಶಾಖೆಯ ಅಧ್ಯಕ್ಷರಾದ ಜನಾಬ್‍ಅಬ್ದುಲ್ ಕಾದರ್‍ರವರು ಧನ್ಯವಾದ ಸಮರ್ಪಿಸಿದರು. ಜನಾಬ್ ಇರ್ಷಾದುಲ್ಲಾ ಆದಿಲ್ ಕಾರ್ಯಕ್ರಮ ನಿರೂಪಿಸಿದರು.