ಪರ್ಕಳದಲ್ಲಿ ರಸ್ತೆ ಹೊಂಡದಿಂದಾಗಿ ಮಗು ಸಾವು; ರಾ. ಹೆದ್ದಾರಿ ಅಧಿಕಾರಿಗಳ ವಿರುದ್ದ ತನಿಖೆ; ಎಸ್ಪಿ ಸಂಜೀವ್ ಪಾಟೀಲ್
ಉಡುಪಿ: ಮಲ್ಪೆ – ತೀರ್ಥಹಳ್ಳೀ ರಾಷ್ಟ್ರೀಯ ಹೆದ್ದಾರಿಯ ಪರ್ಕಳದಲ್ಲಿ ಹೆದ್ದಾರಿ ಹೊಂಡದಿಂದಾಗಿ ಮಗುವಿನ ಸಾವಿಗೆ ಸಂಬಂಧಿಸಿದಂತೆ ಹೆದ್ದಾರಿ ಇಲಾಖೆಯ ನಿರ್ಲಕ್ಷದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಒಂದು ವೇಳೆ ಅಫಘಾತಕ್ಕೆ ಹೆದ್ದಾರಿ ಇಲಾಖೆ ಹೊಣೆ ಎನ್ನುವುದು ಸಾಬೀತಾದಲ್ಲಿ ಇಲಾಖೆಯ ಅಧಿಕಾರಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ವರಿಷ್ಟಾಧಿಕಾರಿ ಡಾ. ಸಂಜೀವ್ ಪಾಟೀಲ್ ಹೇಳಿದರು.
ಅವರು ಶನಿವಾರ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ಹೆದ್ದಾರಿ ಸಮಸ್ಯೆ ಕುರಿತು ಸಾರ್ವಜನಿಕರೊಬ್ಬರ ಕರೆಗೆ ಪ್ರತಿಕ್ರಿಯಿಸಿ ಮಾತನಾಡುತ್ತಾ ಈ ಕುರಿತು ಈಗಾಗಲೇ ಮಣಿಪಾಲ ಪಿಎಸ್ ಐ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಹೆದ್ದಾರಿ ಇಲಾಖೆಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದು, 2 ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಮಣಿಪಾಲ ಎಮ್ ಐ ಟಿ ಕಾಲೇಜಿನ ಪರಿಸರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆನಡೆಯುತ್ತಿರುವ ಕುರಿತು ಕರೆಗೆ ಉತ್ತರಿಸಿದ ಎಸ್ಪಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ತುರ್ತು ಸೇವೆಗೆ ಹೋದ ಸಂದರ್ಭದಲ್ಲಿ ರೋಗಿಯ ಸಂಬಂಧಿಕರು ಕರ್ತವ್ಯ ನೀರತ ಸಿಬಂದಿಗೆ ಬೆದರಿಕೆ ಹಾಕುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಕೂಡಲೇ ಸ್ಥಳೀಯ ಪೊಲಿಸ್ ಠಾಣೆಗೆ ಮಾಹಿತಿ ನೀಡದರೆ ಪೋಲಿಸರು ಬಂದು ಅಂತಹವರ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಅಲ್ಲದೆ ಸುಪ್ರಿಂ ಕೋರ್ಟಿನ ಕಾನೂನಿನಂತೆ ಕರ್ತವ್ಯ ನಿರತ ವೈದ್ಯರಿಗೆ ಅಥವಾ ಸಿಬಂದಿಗೆ ಹಲ್ಲೆ ಅಥವಾ ಬೆದರಿಕೆ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ ಆದ್ದರಿಂದ ಅಂತಹ ಘಟನೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಹೊರ ರಾಜ್ಯದ ಕಾರ್ಮಿಕರು ಬಂದಲ್ಲಿ ಅವರನ್ನು ಕೆಲಸಕ್ಕೆ ನೇಮಿಸಿಕೊಂಡ ವ್ಯಕ್ತಿಯು ಕಾರ್ಮಿಕರ ಸೂಕ್ತ ವಿಳಾಸದ ಮಾಹಿತಿ ಹಾಗೂ ದಾಖಲೆಗಳನ್ನು ಪಡೆದುಕೊಳ್ಳಬೇಕು. ಅಲ್ಲದೆ ಬಾಂಗ್ಲಾ ದೇಶದ ಅಕ್ರಮ ವಲಸಿಗರು ಕಂಡು ಬಂದಲ್ಲಿ ಪೋಲಿಸರಿಗೆ ಮಾಹಿತಿ ನೀಡಿದ್ದಲ್ಲಿ ಮಾಹಿತಿ ನೀಡಿದ ವ್ಯಕ್ತಿಗೆ ಸೂಕ್ತ ಬಹುಮಾನ ನೀಡುವುದಲ್ಲದೆ ವ್ಯಕ್ತಿಯ ಕುರಿತ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದರು.
ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ವಿಪರೀತ ವೇಗದಲ್ಲಿ ಕರ್ಕಶ ಹಾರ್ನ್ ಹಾಕಿಕೊಂಡು ಹೋಗುತ್ತಿದ್ದು ಸೂಕ್ತ ಕ್ರಮಕ್ಕಾಗಿ ಸಾರ್ವಜನಿಕರೋರ್ವರು ಒತ್ತಾಯಿಸಿದರು ಇದಕ್ಕೆ ಉತ್ತರಿಸಿದ ಎಸ್ಪಿಯವರು ಈ ಕುರಿತು ಕ್ರಮದ ಅಭಿಯಾನ ಆರಂಭವಾಗಿದ್ದು, ಈಗಾಗಲೇ 836 ಕೇಸುಗಳನ್ನು ದಾಖಲಿಸಲಾಗಿದೆ ಇದು ನಿರಂತರ ನಡೆಯಲಿದೆ ಎಂದರು.
ಮಟ್ಕಾ ಬರೆಯುತ್ತಿರುವ ಕುರಿತು ಬಂದ ಕರೆಗೆ ಉತ್ತರಿಸಿದ ಎಸ್ಪಿ ಈಗಾಗಲೇ 278 ಪ್ರಕರಣಗಳು ದಾಖಲಾಗಿದ್ದು ಇದಕ್ಕಾಗಿ ಬಂಧನಗೊಂಡ ಆರೋಪಿಗಳನ್ನು ಹಾಗೂ ಜಿಲ್ಲೆಯಲ್ಲಿ ಮಟ್ಕಾ ಬರೆಯುವ ಎಲ್ಲಾ ಬಿಡ್ಡರ್ ಗಳನ್ನು ಠಾಣೆಗಳಿಗೆ ಕರೆಸಿ ಅವರಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಬಾಳಿಗ ಫಿಶ್ ನೆಟ್ ಬಳಿ ಬಸ್ಸುಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುತ್ತಿರುವ ಕುರಿತು ಸಾರ್ವಜನಿಕರ ಕರೆಗೆ ಉತ್ತರಿಸಿದ ಎಸ್ಪಿ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಗರದಲ್ಲಿ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಸಾರ್ವಜನಿಕರ ಕರೆಗೆ ಉತ್ತರಿಸಿದ ಎಸ್ಪಿ ಒಂದು ತಿಂಗಳ ಒಳಗೆ ನಗರದ ಎಲ್ಲಾ ಪಾರ್ಕಿಂಗ್ ನಡೆಸುವ ಕುರಿತು ಸರ್ವೆ ನಡೆಸಲು ಟ್ರಾಫಿಕ್ ಪೋಲಿಸರಿಗೆ ಸೂಚನೆ ನೀಡಲಾಗಿದೆ ಸದ್ಯದಲ್ಲಿಯೇ ಸಮಸ್ಯೆ ಪರಿಹಾರವಾಗಲಿದೆ ಎಂದರು.
ದೊಡ್ಡಣಗುಡ್ಡೆಯಲ್ಲಿ ಪೋಲಿಸ್ ವಸತಿ ಗೃಹದ ಬಳಿಯಲ್ಲಿ ಸಂಜೆಯ ಹೊತ್ತು ಕೆಲವರು ಸಿಗರೇಟ್ ಸೇದಿಕೊಂಡು ವಾಕಿಂಗ್ ಹೋಗುವ ಮಹಿಳೆಯರಿಗೆ ಚುಡಾಯಿಸುತ್ತಿರುವ ಕುರಿತು ಬಂದ ಕರೆಗೆ ಉತ್ತರಿಸಿದ ಎಸ್ಪಿ ಇಂದು ಸಂಜೆಯೇ ಇದನ್ನು ಸರಿಮಾಡಲಗುವುದು ಎಂದರು.
ಒಂದು ಗಂಟೆಯ ಅವಧಿಯಲ್ಲಿ ಒಟ್ಟು 28 ಕರೆಗಳು ಬಂದಿದ್ದು, ಪಾರ್ಕಿಂಗ್ ಸಮಸ್ಯೆ, ಮಟ್ಕಾ, ಅಕ್ರಮ ಸಾರಾಯಿ ಮಾರಾಟ, ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆಗಳಿಗೆ ಸಂಬಂಧಪಟ್ಟ ಕರೆಗಳು ಕೂಡ ಇದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದರು.
ಕಳೆದ ಒಂದು ವಾರದ ಅವಧಿಯಲ್ಲಿ 3 ಗ್ಯಾಬ್ಲಿಂಗ್ ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಿದ್ದು, 1 ಮಟ್ಕಾ ಪ್ರಕರಣದಲ್ಲಿ 1 ಬಂಧನ, 3 ಗಾಂಜಾ ಪ್ರಕರಣದಲ್ಲಿ 3 ಮಂದಿಯನ್ನು ಬಂಧಿಸಲಾಗಿದೆ ಅಲ್ಲದೆ ಕುಡಿದು ವಾಹನ ಚಲಾವಣೆಗೆ ಸಂಬಂಧಿಸಿ 35 ಕೇಸು, ಹೆಲ್ಮೇಟ್ ರಹಿತ ಸವಾರಿ 1097 ಪ್ರಕರಣ ಹಾಗೂ ಅತೀ ವೇಗದ ಚಾಲನೆಗೆ 71 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.