ಪಲಿಮಾರು ಮಠದ ಉತ್ತರಾಧಿಕಾರಿಗೆ ಪ್ರಣವೋಪದೇಶ
ಉಡುಪಿ: ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯೋಜಿಸಲ್ಪಟ್ಟಿರುವ ಕಂಬ್ಲಕಟ್ಟ ಶೈಲೇಶ ಉಪಾದ್ಯಾಯ ಎಂಬ ವಟುವಿಗೆ ಶುಕ್ರವಾರ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತವಾದ 3.57ಕ್ಕೆ ಪ್ರಣವೋಪದೇಶ ಪುರಸ್ಸರ ಸನ್ಯಾಸ ಧೀಕ್ಷೆ ನೀಡಲಾಯಿತು.
ಪರ್ಯಾಯ ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥರು ಸರ್ವಜ್ಞ ಪೀಠದಲ್ಲಿ ಕುಳಿತು ಪ್ರಣವೋಪದೇಶ ನೀಡಿದ್ದು ವಿಶೇಷವಾಗಿತ್ತು. ಬೆಳಿಗ್ಗೆ 4ಕ್ಕೆ ಸನ್ಯಾಸ ಧೀಕ್ಷೆಯನ್ನು ನೀಡಿ ವಟುವಿಗೆ ‘ದಂಡ’ ಹಸ್ತಾಂತರ ಮಾಡಲಾಯಿತು.
ಬಳಿಕ ಪಲಿಮಾರು ಶ್ರೀಗಳು ವಟುವಿಗೆ ಗುಪ್ತ ನಾಮಕರಣ ಮಾಡಿದರು. ಪಲಿಮಾರು ಶ್ರೀಗಳಿಗೆ ಹಾಗೂ ವಟುವಿಗೆ ಹೊರತುಪಡಿಸಿ ಬೇರೆ ಯಾರಿಗೂ ಗುಪ್ತ ನಾಮಕರಣದ ಹೆಸರು ತಿಳಿಯುವಂತಿಲ್ಲ ಎಂಬ ಸಂಪ್ರದಾಯ ಹಿಂದಿನಿಂದಲೂ ಅಷ್ಠಮಠಗಳಲ್ಲಿ ರೂಢಿಯಲ್ಲಿದೆ.
ಸನ್ಯಾಸ ದೀಕ್ಷೆಯ ಪೂರ್ವಭಾವಿಯಾಗಿ ಗುರುವಾರ ರಾತ್ರಿ ಶಾಕಲ ಹೋಮ ನಡೆಯಿತು. ಧೀಕ್ಷೆ ಪಡೆಯುವ ಹಿಂದಿನ ರಾತ್ರಿ ವಟು ಮಲಗುವಂತಿಲ್ಲ. ಹಾಗಾಗಿ, ರಾತ್ರಿಯಿಡೀ ಭಾಗವತ ಶ್ರವಣ ಮಾಡಲಾಯಿತು. ವಿದ್ವಾಂಸರಾದ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಹಾಗೂ ವೈದಿಕರು ವಿರಜಾ ಮಂತ್ರ ಹೋಮ ನೆರವೇರಿಸಿದರು.
ಸನ್ಯಾಸ ಧೀಕ್ಷೆ ಹಿನ್ನೆಲೆಯಲ್ಲಿ ತಿರುಪತಿಯ ಶ್ರೀನಿವಾಸ ದೇವರ ಪ್ರಸಾದವನ್ನು ಅಲ್ಲಿನ ಅರ್ಚಕ ವೃಂದದವರು ವೇದಘೋಷ ಸಹಿತ ಪರ್ಯಾಯ ವಿದ್ಯಾಧೀಶ ತೀರ್ಥರಿಗೆ, ರಘುವರೇಂದ್ರ ತೀರ್ಥರಿಗೆ, ನೂತನ ಶಿಷ್ಯರಿಗೆ ಸಮರ್ಪಿಸಿದರು.
ರಾಜಾಂಗಣದಲ್ಲಿ ನೂತನ ಯತಿಗಳು ತರ್ಕ ಸಂಗ್ರಹದಲ್ಲಿ ಬರುವ ವಾಯು ಲಕ್ಷಣದ ಬಗ್ಗೆ ಸಂಸ್ಕೃತದಲ್ಲಿ ಅನುವಾದ ಮಾಡಿದರು. ಬಳಿಕ ಮಧ್ವಾಚಾರ್ಯರ ತಂತ್ರಸಾರ ಸಂಗ್ರಹದಲ್ಲಿ ಅಡಕವಾದ ಅಷ್ಠ ಮಹಾಮಂತ್ರಗಳನ್ನು ಕನ್ನಡಕ್ಕೆ ಅನುವಾದವನ್ನು ಮಾಡಿದರು.
ಶನಿವಾರ ಅಷ್ಠಮಹಾ ಮಂತ್ರೋಪದೇಶ ಸರ್ವಮೂಲ ಶಾಂತಿಪಾಠ, ತತ್ವಚಿಂತನೆ ಹಾಗೂ ನಾರಾಯಣ ಮಂತ್ರ ಹೋಮ ನಡೆಯಲಿದೆ. ಜತೆಗೆ, ಅಷ್ಠಮಠಗಳ ಯತಿಗಳು ನೂತನ ವಟುವಿಗೆ ಪೂಜಾ ಕ್ರಮಗಳನ್ನು ಉಪದೇಶ ಮಾಡಲಿದ್ದಾರೆ. ಮುಂದೆ ಮಠಾಧೀಶರ ಅನುಪಸ್ಥಿತಿಯಲ್ಲಿ ಪೂಜಾ ಕಾರ್ಯಗಳು ಸಾಂಗವಾಗಿ ನೆರವೇರಿಸಲು ವಟುವಿಗೆ ಪೂಜಾ ಕ್ರಮಗಳನ್ನು ಹೇಳಿಕೊಡುವುದು ಸಂಪ್ರದಾಯ ಎನ್ನುತ್ತಾರೆ ಮಠದ ಸಿಬ್ಬಂದಿ.
ಮೇ 12ರಂದು ಪಲಿಮಾರು ಪೀಠದ ನೂತನ ಉತ್ತರಾಧಿ ಕಾರಿಯ ಪಟ್ಟಾಭಿಷೇಕ ನೆರವೇರಲಿದೆ. ನೂತನ ಕಿರಿಯ ಯತಿಗಳಿಗೆ ಮರು ನಾಮಕರಣವೂ ಅಂದೇ ನಡೆಯಲಿದೆ.
ಕೃಪೆ : ಪ್ರಜಾವಾಣಿ