Home Mangalorean News Kannada News ಪಶ್ಚಿಮ ವಾಹಿನಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಕಿರು ಅಣೆಕಟ್ಟು ಕಾಮಗಾರಿ ಪ್ರಗತಿಯಲ್ಲಿ 

ಪಶ್ಚಿಮ ವಾಹಿನಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಕಿರು ಅಣೆಕಟ್ಟು ಕಾಮಗಾರಿ ಪ್ರಗತಿಯಲ್ಲಿ 

Spread the love

ಪಶ್ಚಿಮ ವಾಹಿನಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಕಿರು ಅಣೆಕಟ್ಟು ಕಾಮಗಾರಿ ಪ್ರಗತಿಯಲ್ಲಿ 

ಮಂಗಳೂರು : ರಾಜ್ಯದ ಕರಾವಳಿಯಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಜಾರಿಗೆ ತಂದಿರುವ ಪಶ್ಚಿಮ ವಾಹಿನಿ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಕಿಂಡಿ ಅಣೆಕಟ್ಟು ಕಾಮಗಾರಿಗಳು ಪ್ರಗತಿಯಲ್ಲಿದೆ.

ಬುಧವಾರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಈ ಮಾಹಿತಿ ನೀಡಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಈ ಅಣೆಕಟ್ಟುಗಳ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ವರ್ಷದ ಮಾರ್ಚ್ ಒಳಗೆ ಕಾಮಗಾರಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಕಡಿರುದ್ಯಾವರ, ನಿಡ್ಡೋಡಿ, ನಿಟ್ಟಡೆ, ಮಾರೂರು, ಕೊಳವೂರು, ಪುಚ್ಚಮೊಗರು, ಕರ್ಪೆ, ಪೊಳಲಿ, ಚಾರ್ವಾಕದಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ. ಬಿಳಿಯೂರು ಹಾಗೂ ಹರೇಕಳದಲ್ಲಿ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಬಗ್ಗೆ ಒಂದು ವಾರದೊಳಗೆ ಸಂಬಂಧಪಟ್ಟ ಅಂಗನವಾಡಿಗಳಿಗೆ ಭೇಟಿ ನೀಡಿ ವರದಿ ನೀಡಲು ಸೂಚಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸೂರಿ ಪಂಜ ಮಾತನಾಡಿ, ನಗರದ ಲೇಡಿಘೋಷನ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳನ್ನು ತುರ್ತು ಸಂದರ್ಭಗಳಲ್ಲಿ ವೆನ್‍ಲಾಕ್‍ಗೆ ವರ್ಗಾಯಿಸಿದ ಸಂದರ್ಭದಲ್ಲಿ ಅಲ್ಲಿ ದಾಖಲಿಸಲು ವಿಳಂಭ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಇದಕ್ಕೆ ಆಸ್ಪದೆ ನೀಡದೇ ಎರಡೂ ಆಸ್ಪತ್ರೆಗಳು ರೋಗಿಯನ್ನು ವರ್ಗಾಯಿಸುವ ಮೊದಲೇ ಸಮನ್ವಯದಿಂದ ಕಾರ್ಯನಿರ್ವಹಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಿದ ನಂತರ ವರ್ಗಾಯಿಸಬೇಕು ಎಂದು ಸೂಚಿಸಿದರು.

ಕ್ರೀಡಾ ಇಲಾಖೆಯಿಂದ ನೀಡುವ ಸಹಾಯಧನ ಕುರಿತ ಮಾಹಿತಿಯನ್ನು ಜಿಲ್ಲಾ ಪಂಚಾಯತ್ ಗಮನಕ್ಕೆ ತರುವಂತೆ ಸೂಚನೆ ನೀಡಲಾಯಿತು. ಪಡಿತರ ಚೀಟಿ ವಿತರಣೆಯ ಕೆಲಸಗಳು ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ 387 ಹೆಕ್ಟೇರ್ ಭತ್ತದ ಕೃಷಿ ನಾಶವಾಗಿದೆ. ಈಗಾಗಲೇ ಈ ನಷ್ಟವನ್ನು ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಪ್ರತೀ ಹೆಕ್ಟೇರ್ ನಷ್ಟಕ್ಕೆ ರೂ. 6800 ಪರಿಹಾರ ದೊರಕಲಿದೆ ಎಂದು ಕೃಷಿ ಇಲಾಖೆ ಜಂಟೀ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶಾಲಾ ಕಟ್ಟಡಗಳ ದುರಸ್ತಿ ಕಾಮಗಾರಿಗಳಿಗೆ ರೂ. 10.28 ಕೋಟಿ ರೂ. ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಡಿಡಿಪಿಐ ಶಿವರಾಮಯ್ಯ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version