ಪಹಣಿ (ಆರ್.ಟಿ.ಸಿ) ಗೆ ಆಧಾರ್ ಜೋಡಣೆ ಕಡ್ಡಾಯ – ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ
ಉಡುಪಿ: ರೈತರು ತಮ್ಮ ಜಮೀನಿನ ಪಹಣಿಯನ್ನು ಆಧಾರ್ ಗೆ ಲಿಂಕ್ ಮಾಡುವ ಕಾರ್ಯವು ಪ್ರಸ್ತುತ ಪ್ರಗತಿಯಲ್ಲಿದ್ದು , ಜಿಲ್ಲೆಯಲ್ಲಿ ಈ ವರೆಗೆ 65% ಮಾತ್ರ ಈ ಕಾರ್ಯದ ಪ್ರಗತಿಯು ಆಗಿರುತ್ತದೆ. ಮುಂದಿನ ಒಂದು ವಾರದೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಭೂಮಾಲೀಕರ ಜಮೀನಿನ ಪಹಣಿಯನ್ನು ಆಧಾರ್ ಗೆ ಲಿಂಕ್ ಮಾಡುವ ಬಗ್ಗೆ ಸರ್ಕಾರದ ನಿರ್ದೇಶನವಿರುತ್ತದೆ. ಜಿಲ್ಲೆಯ ಕೆಲವೊಂದು ನಾಗರೀಕರು ಆಧಾರ್ ಲಿಂಕ್ ಮಾಡಲು ಹಿಂಜರಿಯುತ್ತಿದ್ದು ಇದರಿಂದ ನಿಗಧಿತ ಪ್ರಗತಿಯು ಸಾಧಿಸಲು ಅಸಾಧ್ಯವಾಗಿರುತ್ತದೆ.
ರೈತರಿಗೆ ನಿಗಧಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಅಕ್ರಮ ಖಾತಾ ಬದಲಾವಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಆಧಾರ್ ಜೋಡಣೆಯು ಅವಶ್ಯಕವಾಗಿರುವುದರಿಂದ ಜಿಲ್ಲೆಯ ರೈತರು ಮೂರು ದಿನದೊಳಗಾಗಿ ಪಹಣಿ , ಆಧಾರ್ ದಾಖಲಾತಿಗಳೊಂದಿಗೆ ಹಾಗೂ ಆಧಾರ್ ಜೋಡಣೆಯಾಗಿರುವ ಮೊಬೈಲ್ ನೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದಾಗಿದೆ.
ಜಿಲ್ಲೆಯಲ್ಲಿ ಜಮೀನು ಹೊಂದಿ ಬೇರೆ ರಾಜ್ಯ ಹಾಗೂ ವಿದೇಶದಲ್ಲಿ ವಾಸವಿದ್ದ ಭೂಮಾಲೀಕರು ಅವರ ಕುಟುಂಬಸ್ಥರು/ಸಂಬಂಧಿಕರು ಜಿಲ್ಲೆಯಲ್ಲಿದ್ದಲ್ಲಿ ಸದ್ರಿಯವರು ಅವರಿಂದ ಮಾಹಿತಿಯನ್ನು ಪಡೆದು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್ ಜೋಡಣೆ ಮಾಡಿಸಬೇಕು. ಸದರಿ ಕಾರ್ಯವು ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರವೇ ಆಗುತ್ತಿದ್ದು ಸೈಬರ್, ಗ್ರಾಮ ಒನ್ ಸೆಂಟರ್ ಇತ್ಯಾದಿ ಕಡೆಗಳಲ್ಲಿ ಮಾಡಲು ಅವಕಾಶ ಇರುವುದಿಲ್ಲ.
ಈ ವರೆಗೆ ಆಧಾರ್ ಜೋಡಣೆ ಮಾಡದೇ ಇರುವ ಭೂಮಾಲೀಕರು ಮುಂದಿನ ದಿನಗಳಲ್ಲಿ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುವ ಸಂಭವ ಇರುವುದರಿಂದ ಆಧಾರ್ ಜೋಡಣೆ ಮಾಡದೇ ಇರುವ ಭೂಮಾಲೀಕರು ತಕ್ಷಣವೇ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್ ಜೋಡಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.