Home Mangalorean News Kannada News ಪಾರದರ್ಶಕ ಆಡಳಿತ ವ್ಯವಸ್ಥೆಗೆ ಬಲಿಷ್ಠ ಲೋಕಾಯುಕ್ತ- ಜಸ್ಟಿಸ್ ವಿಶ್ವನಾಥ ಶೆಟ್ಟಿ

ಪಾರದರ್ಶಕ ಆಡಳಿತ ವ್ಯವಸ್ಥೆಗೆ ಬಲಿಷ್ಠ ಲೋಕಾಯುಕ್ತ- ಜಸ್ಟಿಸ್ ವಿಶ್ವನಾಥ ಶೆಟ್ಟಿ

Spread the love

ಪಾರದರ್ಶಕ ಆಡಳಿತ ವ್ಯವಸ್ಥೆಗೆ ಬಲಿಷ್ಠ ಲೋಕಾಯುಕ್ತ- ಜಸ್ಟಿಸ್ ವಿಶ್ವನಾಥ ಶೆಟ್ಟಿ

ಉಡುಪಿ : ಶಿಕ್ಷಣ ಮತ್ತು ಆರೋಗ್ಯ ಸ್ವಾಸ್ಥ್ಯ ಸಮಾಜದ ಮುಖ್ಯ ಅಂಗವಾಗಿದ್ದು, ಉಡುಪಿ ಜಿಲ್ಲೆ ಜನರಿಗೆ ನೀಡುವ ಸೇವೆಗೆ ಮಾದರಿಯಾಗಿರಲಿ; ಮುಂದಿನ ಐದು ವರ್ಷ ಈ ಜಿಲ್ಲೆಯಿಂದ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ದೂರುಗಳು ಬರಬಾರದು ಎಂದು ಲೋಕಾಯುಕ್ತ ಪಿ ವಿಶ್ವನಾಥ ಶೆಟ್ಟಿ ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಧಿಕಾರಿಗಳು ಸೇವೆಯನ್ನು ನಿಷ್ಠೆಯಿಂದ ಮಾಡಿದರೆ, ಜನರಿಗೆ ಸೇವೆ ನೀಡುವ ವೇಳೆ ಸಕಾರಾತ್ಮಾಕವಾಗಿ ಸ್ಪಂದಿಸುವುದರಿಂದ ಲೋಕಾಯುಕ್ತಕ್ಕೆ ಬರುವ ದೂರುಗಳು ಇಳಿಮುಖವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಣದ ಹಕ್ಕಿನಡಿ ಜಿಲ್ಲೆಯ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಹೊಣೆಯನ್ನು ನೆನಪಿಸಿದರು. ಜಿಲ್ಲೆಯಲ್ಲಿ ಕೊರಗ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಹೆಣ್ಣು ಮಕ್ಕಳು ಅರ್ಧದಲ್ಲೇ ಶಿಕ್ಷಣ ನಿಲ್ಲಿಸದಂತೆ ಪ್ರೇರಣಾ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ, ಕುಂಭಾಷಿ ಮಕ್ಕಳ ಮನೆ ಬಗ್ಗೆ ವಿದ್ಯಾಂಗ ಉಪನಿರ್ದೇಶಕರು ವಿವರಿಸಿದರು.

ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿಯನ್ನು ಸವಿವರವಾಗಿ ಆಲಿಸಿದ ಅವರು, ಕೊರಗ ಮಕ್ಕಳ ಹೆತ್ತವರಿಗೆ ಆಯೋಜಿಸುವ ಕೌನ್ಸಿಲಿಂಗ್ ಕಾರ್ಯಕ್ರಮಕ್ಕೆ ಖುದ್ದು ಹಾಜರಾಗಿ ಹೆತ್ತವರೊಂದಿಗೆ ಮಾತನಾಡುವುದಾಗಿ ನುಡಿದರು.

ಸರ್ಕಾರಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿರಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಲೋಕಾಯುಕ್ತರು, ಜನರು ಖಾಸಗಿ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆದು ಆರ್ಥಿಕವಾಗಿ ದಿವಾಳಿಯಾದ ಹಲವು ಉದಾಹರಣೆಗಳು ತಮ್ಮ ಮುಂದಿದ್ದು, ಸರ್ಕಾರಿ ಆರೋಗ್ಯ ವ್ಯವಸ್ಥೆ ನಂಬಿಕಸ್ಥವಾಗಿ ಬೆಳೆಯಬೇಕು; ಈ ಬಗ್ಗೆ ಅನಾಮಿಕ ದೂರುಗಳು ತಮ್ಮ ಇಲಾಖೆಗೆ ಬರಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು; ತಾಯಿ, ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಸಿಜೇರಿಯನ್ ಹೆರಿಗೆ ದಂಧೆಯಾಗಿದ್ದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಿ ಎಂದರು.

ಇಂದು ಅಧಿಕಾರಿಗಳು ನೀಡಿದ ಮಾಹಿತಿಗಳು ಸತ್ಯವಾಗಿದ್ದರೆ ಸಂತೋಷ; ಇದಲ್ಲದೆ ಬೇರೆಯೇ ಪರಿಸ್ಥಿತಿ ಇದೆ ಎಂದು ಕಂಡು ಬಂದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದು ನಿಶ್ಚಿತ ಎಂದರು.

ಕೃಷಿ, ತೋಟಗಾರಿಕೆ, ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ, ಪಶುಸಂಗೋಪನೆ, ಕಂದಾಯ, ಪೊಲೀಸ್ ಇಲಾಖೆಗಳ ಪರಾಮರ್ಶೆ ಹಾಗೂ ಇಲಾಖಾ ಸಮಸ್ಯೆಗಳನ್ನು ಆಲಿಸಿದರು. ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹೊಸದಾಗಿ ನೇಮಕಾತಿ ಮಾಡಲಿ ಎಂದು ಕಾಯದೆ ತಮ್ಮ ವ್ಯಾಪ್ತಿಯಲ್ಲೇ ಸಕಾರಾತ್ಮಕ ಚಿಂತನೆಗಳ ಮೂಲಕ ಪರಿಹರಿಸಿಕೊಳ್ಳಲು ಅವಕಾಶವಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂಬ ಕಿವಿ ಮಾತನ್ನು ಈ ವೇಳೆ ಲೋಕಾಯುಕ್ತರು ಹೇಳಿದರು.

ಭ್ರಷ್ಟಾಚಾರ ಮಾತ್ರವಲ್ಲ; ಸಕಾಲದಲ್ಲಿ ಕರ್ತವ್ಯ ನಿರ್ವಹಣೆ ಮಾಡದಿರುವುದು ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ ಲೋಕಾಯುಕ್ತ ವ್ಯಾಪ್ತಿಗೆ ಬರುತ್ತದೆ ಎಂದ ಲೋಕಾಯುಕ್ತರು, ಪಶುಪಾಲನೆ, ಕೃಷಿ, ತೋಟಗಾರಿಕೆ ವ್ಯವಸ್ಥೆಯನ್ನು ಸುಧಾರಿಸಲು ಅಧಿಕಾರಿಗಳು ಕೈಗೊಂಡ ಕ್ರಮಗಳನ್ನು ಸವಿವರವಾಗಿ ಆಲಿಸಿದರು.

ಪಂಚಾಯತ್‍ರಾಜ್ ಇಲಾಖೆ ಜನರಿಗೆ ಮೂಲ ಸೌಕರ್ಯ ಒದಗಿಸುತ್ತಿದ್ದು, ಪಂಚಾಯತ್ ಮಟ್ಟದಿಂದ ನರೇಗಾ, ವಸತಿ ಯೋಜನೆ, ಸ್ವಚ್ಛ ಭಾರತ್. ನೈರ್ಮಲ್ಯ, ತ್ಯಾಜ್ಯ ವಿಲೇ ಪ್ರಮುಖ ಕಾರ್ಯಕ್ರಮಗಳು ಎಂದು ಅಧಿಕಾರಿಗಳು ವಿವರಿಸಿದರು. ಪೈಪ್ ಕಂಪೋಸ್ಡ್‍ಗೆ ಪೈಪ್‍ಗಳನ್ನು ಉಚಿತವಾಗಿ ಕೊಡುವ ಬಗ್ಗೆ ಚಿಂತಿಸಿ. ಯೋಜನೆಗಳ ಅನುಷ್ಠಾನಕ್ಕೆ ಪ್ರೋತ್ಸಾಹನೀಡುವ ಕ್ರಮಗಳಿಂದ ಉದ್ದೇಶ ಈಡೇರುತ್ತದೆ ಎಂದರು.

ಜನರಿಗಾಗಿ ರೂಪಿಸುವ ಕಾರ್ಯಕ್ರಮಗಳು ಜನರನ್ನು ತಲುಪಲೇ ಬೇಕು. ಇದಕ್ಕಾಗಿ ತಡೆ ಒಡ್ಡುವ ಕಾರಣಗಳ ಬಗ್ಗೆ ನನಗೆ ಮಾಹಿತಿಬೇಕು. ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗಬಾರದು ಎಂಬುದು ಉದ್ದೇಶವಾಗಬೇಕು.

ಅರಣ್ಯ ಇಲಾಖೆಯಿಂದ ದೊರಕುವ ಯೋಜನೆಗಳ ಬಗ್ಗೆ ಡಿಸಿಎಫ್ ವಿವರಿಸಿದರು. ಅರಣ್ಯ ಸಂರಕ್ಷಣೆ ಅಗತ್ಯವಾಗಬೇಕು; ಇಲಾಖೆ ವಿಜಿಲಂಟ್ ಆಗಿರಬೇಕು. ಟ್ರೀ ಕಟ್ಟಿಂಗ್ ಅನುಮತಿ ಹಾಗೂ ಅದಕ್ಕೆ ಬದಲಾಗಿ ಗಿಡನೆಟ್ಟ ಬಗ್ಗೆ ಸಮೀಕ್ಷೆ ಮಾಡಿ.

ಮೀನುಗಾರಿಕೆ ಸಂಕಷ್ಟ ನಿಧಿ ಹೆಚ್ಚಿಸಲು ಅಧಿಕೃತವಾಗಿ ಸರ್ಕಾರಕ್ಕೆ ಬರೆಯಲು ಅಧಿಕಾರಿಗಳಿಗೆ ಸೂಚಿಸಿದರು.

ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಆನ್‍ಲೈನ್ ಮೂಲಕ ಎಲ್ಲ ರೇಷನ್ ಅಂಗಡಿಗಳ ಮೇಲೆ ಕಣ್ಣಿಡಿ ಎಂದ ಅವರು, 15 ದಿನಗಳೊಳಗೆ ಇದನ್ನು ಅನುಷ್ಠಾನಕ್ಕೆ ತರಲು ಸೂಚನೆ ನೀಡಿದರು. ಫಲಾನುಭವಿಗಳಿಗೆ ಆಹಾರಗಳು ಲಭ್ಯವಾಗಲಿ ಎಂದರು.

ಮರಳುಗಾರಿಕೆ ನಮ್ಮ ಜಿಲ್ಲೆಯನ್ನು ಕಾಡುತ್ತಿರುವ ಪ್ರಶ್ನೆ ಎಂಬ ಮಾಹಿತಿಯಿದ್ದು, ಮರಳುಗಾರಿಕೆಯಿಂದೇ ಊರಿಗೆ ಊರೇ ಹಾಳಾಗುತ್ತಿದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಕಾನೂನು ಮೀರಿ ನಡೆದರೆ ಶಿಕ್ಷೆ ಖಂಡಿತ.

ಲೋಕಾಯುಕ್ತ ಶಕ್ತಿಯುತವಾಗಿದೆ. ಎಲ್ಲ ರೀತಿಯಲ್ಲಿ ಜನರ ಹಿತವನ್ನು ಕಾಯಲು ಸಬಲವಾಗಿದೆ. ಎಲ್ಲ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ. ನಿಶಕ್ತವಾಗಿಲ್ಲ ಎಂದು ಲೋಕಾಯುಕ್ತರು ಸ್ಪಷ್ಟ ಪಡಿಸಿದರು.

ಮರಳುಗಾರಿಕೆಯಲ್ಲಿ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ. ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲ. ಕಾನೂನು ಪಾಲಿಸಲು ಜಿಲ್ಲಾಧಿಕಾರಿಗಳ ನೆರವು ಪಡೆಯಿರಿ. ಜಿಲ್ಲೆಯಲ್ಲಿ ಮರಳು ದಂಧೆಗೆ ಅವಕಾಶ ನೀಡಬೇಡಿ. ರಾಶಿ ಮಾಡಿಟ್ಟ ಮರಳನ್ನು ಸೀಜ್ ಮಾಡಿ. ಫಲಿತಾಂಶವನ್ನು ಜಿಲ್ಲಾಧಿಕಾರಿಗಳೊಂದಿಗೆ ಪಡೆಯಲಾಗುವುದು ಎಂದರು.

ಉಡುಪಿ ನಗರಸಭಾ ಪೌರಾಯುಕ್ತರ ಬಳಿ ಫುಟ್‍ಪಾತ್ ನಲ್ಲಿ ಕಟ್ಟಡಗಳೆದ್ದಿವೆಯಾ? ಮನೆಗೆ ಲೈಸನ್ಸ್ ಕೊಡುವುದು ಆನ್‍ಲೈನ್ ನಲ್ಲಿ 45 ದಿನಗಳೊಳಗೆ ಅನುಮತಿ ನೀಡಬೇಕೆಂದು ಕಮಿಷನರ್ ಹೇಳಿದರು. ಸೆಟ್ ಬ್ಯಾಕ್ ನೀತಿ ಪಾಲಿಸಿ; ಸದುದ್ದೇಶದಿಂದ ಜಾರಿಗೆ ಬಂದ ಸೆಟ್ ಬ್ಯಾಕ್ ನೀತಿಯನ್ನು ಅನುಸರಿಸಿ ಎಂದು ಲೋಕಾಯುಕ್ತ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಫ್ರಾನ್ಸಿಸ್, ಲೋಕಾಯುಕ್ತ ಎಸ್ ಪಿ ರಶ್ಮಿ, ಅಪರ ಜಿಲ್ಲಾಧಿಕಾರಿ ಅನುರಾಧ, ಸಹಾಯಕ ಆಯುಕ್ತರಾದ ಶಿಲ್ಪಾ ನಾಗ್, ಅಡಿಷನಲ್ ಎಸ್ ಪಿ ವಿಷ್ಣುವರ್ಧನ್ ಅವರನ್ನೊಳಗೊಂಡಂತೆ ಎಲ್ಲ ಅಧಿಕಾರಿಗಳು ಸಭೆಯಲ್ಲಿದ್ದರು.


Spread the love

Exit mobile version