ಪಾಲಿಕೆ ವ್ಯಾಪ್ತಿಯ ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯ ಸಕಾಲದಲ್ಲಿ ನಡೆಸಲು ಶಾಸಕ ಕಾಮತ್ ಮನವಿ
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಂದು ಮೀಟರ್ ಅಗಲದ ಚರಂಡಿ (ತೋಡು)ಗಳಲ್ಲಿರುವ ಹೂಳನ್ನು ತೆಗೆಸಲು ಚುನಾವಣಾ ನೀತಿ ಸಂಹಿತೆ ಆರಂಭವಾಗುವ ಮೊದಲೇ ಪಾಲಿಕೆಯ ಆಯುಕ್ತರಿಗೆ ತಿಳಿಸಲಾಗಿದೆ. ಅದೇ ರೀತಿಯಲ್ಲಿ ಬೇರೆ 116 ಚರಂಡಿಗಳ ಮತ್ತು 12 ಬೃಹತ್ ಚರಂಡಿಗಳ ಹೂಳೆತ್ತುವ ಕಾರ್ಯ ನಡೆಸಲು 1.76 ಕೋಟಿ ರೂಪಾಯಿಗಳ ಟೆಂಡರ್ ಪ್ರಕ್ರಿಯೆ ಕಾರ್ಯ ಕೂಡ ಮುಗಿದಿದೆ.
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಮೇಲಿನ ಯಾವುದೇ ಕಾಮಗಾರಿ ನಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಎಲ್ಲಾ ರಾಜ್ಯಗಳ ಚುನಾವಣಾ ಮತದಾನ, ಮತ ಎಣಿಕೆ ನಡೆದು ಚುನಾವಣಾ ನೀತಿ ಸಂಹಿತೆ ಕೊನೆಗೊಳ್ಳುವ ತನಕ ಕಾದರೆ ಆಗ ಮಳೆಗಾಲ ಆರಂಭವಾಗಲಿದೆ. ಆವಾಗ ಚರಂಡಿಗಳಲ್ಲಿ ಹೂಳು ತೆಗೆಯದೇ ಇದ್ದ ಕಾರಣ ಮಳೆಯ ನೀರು ಹರಿದು ಹೋಗಲು ಸರಿಯಾದ ದಾರಿ ಇಲ್ಲದೆ ಅದು ಕೃತಕ ನೆರೆ ಸೃಷ್ಟಿಸುವ ಸಾಧ್ಯತೆ ನಿಚ್ಚಳವಾಗಿದೆ. ಆದ್ದರಿಂದ ದಕ್ಷಿಣ ಕನ್ನಡ ಲೋಕಸಭಾ ಸ್ಥಾನಕ್ಕೆ ಮತದಾನ ನಡೆದ ಕೂಡಲೇ ಚರಂಡಿಗಳ ಹೂಳೆತ್ತುವ ಕಾರ್ಯ ಆರಂಭಿಸಿದರೆ ಒಂದು ಮೀಟರ್ ಅಗಲದ ಚರಂಡಿಗಳ ಹೊಳೆತ್ತುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರಿಗೂ, ಉಳಿದ ಚರಂಡಿಗಳ ಹೂಳೆತ್ತುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೂ ಕೆಲಸಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಚರಂಡಿಗಳಲ್ಲಿ ಸಕಾಲದಲ್ಲಿ ಹೂಳು ತೆಗೆದರೆ ಕೃತಕ ನೆರೆ ಸೃಷ್ಟಿ ಆಗುವುದನ್ನು ತಡೆಯಬಹುದು.
ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಜನರ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಈಗಾಗಲೇ ಮನವಿ ಮಾಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಮತದಾನದ ದಿನದ ನಂತರ ಹೂಳೆತ್ತುವ ಕಾರ್ಯ ಆರಂಭವಾದರೆ ಅದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಮಂಗಳೂರಿನ ಜನರ ಹಿತಾಸಕ್ತಿಯ ದೃಷ್ಟಿಯಿಂದ ಸಹಕರಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ