ಪಾಳು ಬಿದ್ದ ಭೂಮಿಯಲ್ಲಿ ಕೃಷಿಯ ಮೂಲಕ ಹಸನು ಮಾಡ ಹೋರಟ ಉಡುಪಿ ಧರ್ಮಪ್ರಾಂತ್ಯದ ಯುವಜನತೆ

Spread the love

ಪಾಳು ಬಿದ್ದ ಭೂಮಿಯಲ್ಲಿ ಕೃಷಿಯ ಮೂಲಕ ಹಸನು ಮಾಡ ಹೋರಟ ಉಡುಪಿ ಧರ್ಮಪ್ರಾಂತ್ಯದ ಯುವಜನತೆ

ಉಡುಪಿ: ಕೃಷಿಕನ ಬದುಕು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಒಂದು ಕಡೆ ಮಳೆ ಕೈ ಕೊಟ್ಟರೆ ಇನ್ನೊಂದೆಡೆ ಕೂಲಿಯಾಳುಗಳ ಕೊರತೆ. ವಿದ್ಯಾಭ್ಯಾಸದ ಬಳಿಕ ಯುವಜನತೆ ಪಟ್ಟಣದ ಕಡೆಗೆ ಮುಖ ಮಾಡುತ್ತಿರುವುದು ಇನ್ನೊಂದು ಸಮಸ್ಯೆ. ಆದರೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಪರಿಸರ ಪ್ರೀತಿಯೊಂದಿಗೆ ಕೃಷಿಗೆ ಮಹತ್ವ ನೀಡುವ ನಿಟ್ಟಿನಲ್ಲಿ ಕ್ರೈಸ್ತರ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ನೀಡಿದ ಪರಿಸರ ಪ್ರೀತಿಯ ಸಂದೇಶವನ್ನು ಪಾಲಿಸುವುದರೊಂದಿಗೆ ಪಾಳು ಬಿದ್ದ ಭೂಮಿಯಲ್ಲಿ ನಾಟಿ ಮಾಡುವುದರ ಮೂಲಕ ಕೃಷಿಯತ್ತ ಯುವಜನತೆಯನ್ನು ಆಕರ್ಷಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಕೃಷಿ ಜೀವನ ಕೊನೆಗೊಂಡರೆ ಭೂಮಿ ಬಂಜರಾದೀತು ಅನ್ನೋ ಕೂಗು ಇಂದು ವಿಶ್ವಮಟ್ಟಕ್ಕೆ ತಲುಪಿದೆ ಪೋಪ್ ಫ್ರಾನ್ಸಿಸ್ ಅವರು 2015ರ ವರ್ಷ ಜಗತ್ತಿಗೆ ನೀಡಿದ ವಿಶ್ವಪತ್ರ ಲಾವ್ದಾತೋ ಸಿ ಯಲ್ಲಿ ಪರಿಸರ ಜಾಗೃತಿಯ ಬಗ್ಗೆ ಹೆಚ್ಚಿನ ಒತ್ತನ್ನು ನೀಡಿದ್ದು ಅದರಂತೆ ಉಡುಪಿ ಧರ್ಮಪ್ರಾಂತ್ಯದ 54 ಚರ್ಚುಗಳಲ್ಲಿ ಇರುವ ಭಾರತೀಯ ಕೆಥೊಲಿಕ್ ಯುವ ಸಂಚಾಲನದ ಯುವಕರ ಮೂಕಾಂತರ ಅವರವರ ಚರ್ಚುಗಳ ವ್ಯಾಪ್ತಿಯಲ್ಲಿ ಪಾಳು ಬಿದ್ದಿರುವ ಗದ್ದೆಗಳನ್ನು ಗುರುತಿಸಿ ಅಥವಾ ಕೃಷಿ ಮಾಡುತ್ತಿರುವ ಗದ್ದೆಗಳಲ್ಲಿ ಯುವಜನತೆ ಸ್ವತಃ ತಾವೇ ನೇಜಿ ನಾಟಿ ಮಾಡುವುದರ ಮೂಲಕ ಪರಿಸರ ಜಾಗೃತಿಗಾಗಿ ಹಾಗೂ ಕೃಷಿ ಉಳಿವಿಗಾಗಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಪೋಪ್ ಸಂದೇಶವನ್ನು ಪಾಲಿಸುವುದರ ಮೂಲಕ ಉಡುಪಿ ಜಿಲ್ಲೆಯ ಕ್ರೈಸ್ತ ಯುವಜನರು ತಮ್ಮ ಸಂಘಟನೆಯಾದ ಐಸಿವೈಎಮ್ ನೇತೃತ್ವದಲ್ಲಿ ಈಗಾಗಲೇ ಕೃಷಿ ಮಾಡುವ ಮಾದರಿ ಕೆಲಸಕ್ಕೆ ಕೈ ಹಾಕಿದ್ದಾರೆ. ಧರ್ಮಪ್ರಾಂತ್ಯ ವ್ಯಾಪ್ತಿಯಲ್ಲಿ ಸುಮಾರು 8-10 ಚರ್ಚುಗಳಲ್ಲಿ ಈ ಕಾರ್ಯ ಮುಗಿದಿದ್ದು ಭಾನುವಾರ ಜುಲೈ 21 ರಂದು ಉಡುಪಿ ಸಮೀಪದ ಕಲ್ಮಾಡಿ ಮತ್ತು ಸಾಸ್ತಾನ ಚರ್ಚಿನ ಯುವಕ ಯುವತಿಯರು ಉತ್ಸಾಹದಿಂದ ಗದ್ದೆಗಿಳಿದು ನೇಜಿ ನಾಟಿ ಮಾಡಿದರು. ಹೆಚ್ಚಿನ ಯುವಜನರಿಗೆ ನೇಜಿ ನಾಟಿ ಮಾಡುವುದು ಮೊದಲ ಅನುಭವವಾದ್ದರಿಂದ ಯುವಜನರ ಜೊತೆ ಕೃಷಿಯಲ್ಲಿ ಅನುಭವ ಹೊಂದಿದ ಹಿರಿಯರು ಪಾಲ್ಗೊಂಡು ನಾಟಿ ಮಾಡುವುದು ಹೇಗೆ ಎನ್ನುವುದು ಹೇಳಿಕೊಡುತ್ತಿರುವುದು ಕೂಡ ಈ ವೇಳೆ ಕಂಡು ಬಂತು. ಹಿರಿಯರು ಹೇಳಿಕೊಟ್ಟಂತೆ ಉತ್ಸಾಹದಿಂದ ಯುವಕ ಯುವತಿಯರು ನಾಟಿ ಕೆಲಸವನ್ನು ಪೊರೈಸಿದರು.

ಪ್ರತಿ ಚರ್ಚುಗಳಲ್ಲಿ ಈ ಕೃಷಿ ಕೆಲಸದ ಜಾಗೃತಿ ನಡೆಯುತ್ತಿದ್ದು ಪ್ರತಿ ಭಾನುವಾರ ಒಂದೊಂದು ಚರ್ಚುಗಳ ಯುವಜನತೆ ತಮ್ಮ ಚರ್ಚ್ ವ್ಯಾಪ್ತಿಯಲ್ಲಿ ಈ ಕೆಲಸದಲ್ಲಿ ಭಾಗಿಯಾಗುತ್ತಿದ್ದು ಧರ್ಮಪ್ರಾಂತ್ಯದಾದ್ಯಂತ ಎಕರೆಗಟ್ಟಲೆ ಪಾಳು ಭೂಮಿಯಲ್ಲಿ ಕೃಷಿಯ ಮೂಲಕ ಹಸಿರು ಮಾಡುವ ಕೆಲಸ ನಡೆಯುತ್ತಿದೆ. ಬೆಳಿಗ್ಗೆ ಚರ್ಚಿನಲ್ಲಿ ಪೂಜೆಯಲ್ಲಿ ಭಾಗವಹಿಸಿ ಬಳಿಕ ಗದ್ದೆಗೆ ತೆರಳಿ ಕೃಷಿಯಲ್ಲಿ ಯುವಜನತೆ ಮಧ್ಯಾಹ್ನದ ತನಕ ತೊಡಗಿಸಿಕೊಳ್ಳುತ್ತಾರೆ. ಟಿಲ್ಲರ್, ಟ್ರ್ಯಾಕ್ಟರ್, ಎತ್ತು ಮತ್ತು ನೇಗಿಲು ಇತ್ಯಾದಿ ಬಳಸಿ ಗದ್ದೆ ಹದಮಾಡುವ ಕಾರ್ಯದಲ್ಲಿ ಯುವಕರೇ ಪಾಲ್ಗೊಂಡು ನೇಜಿಯನ್ನು ಕಿತ್ತು ಹದಗೊಂಡ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಯುವಜನರೊಂದಿಗೆ ಸ್ಥಳೀಯ ಚರ್ಚಿನ ಧರ್ಮಗುರುಗಳು ಕೂಡ ಗದ್ದೆಗಿಳಿದು ನೇಜಿ ನಾಟಿ ಮಾಡುತ್ತಿರುವುದು ಮತ್ತೋಂದು ವಿಶೇಷವಾಗಿದೆ.

ಜೂನ್ ಮತ್ತು ಜುಲೈ ತಿಂಗಳಲ್ಲಿ ನಮ್ಮ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಉಡುಪಿ ಧರ್ಮಪ್ರಾಂತ್ಯ ಪೋಪ್ ಸ್ವಾಮೀಗಳ ಲಾವ್ದಾತೋಸಿ ವಿಶ್ವಪತ್ರದ ಸೂಚನೆಯಲ್ಲಿ ಮಹತ್ವದ ಕೆಲಸಕ್ಕೆ ಕೈ ಹಾಕಿದೆ. ಅದರಂತೆ ಚರ್ಚುಗಳ ವ್ಯಾಪ್ತಿಯಲ್ಲಿ ಹಸಿರು ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಅದರ ಪೊಷಣೆ ಮಾಡುವ ಜವಾಬ್ದಾರಿಯನ್ನು ಕೂಡ ಕೈಗೆತ್ತಿಕೊಂಡಿದೆ. ಅಲ್ಲದೆ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಹಡಿಲು ಬಿದ್ದಿರುವ ಕೃಷಿ ಭೂಮಿಯನ್ನು ಹಸಿರು ಮಾಡುವ ನಿಟ್ಟಿನಲ್ಲಿ ಕೂಡ ಪ್ರಯತ್ನ ನಡೆದಿದೆ. ಅದರಂತೆ ಈಗಾಗಲೇ ಹಲವಾರು ಚರ್ಚುಗಳಲ್ಲಿ ಈ ಕಾರ್ಯಕ್ರಮ ಮುಗಿದಿದೆ. ಇದು ಕೇವಲ ಒಂದು ವರ್ಷಕ್ಕೆ ಸೀಮಿತವಾಗಿರಿಸಿದೆ ಪ್ರತಿ ವರ್ಷವೂ ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತದೆ. ಯುವಜನತೆ ಕೃಷಿಯಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಯೋಜನೆ ಮತ್ತೆ ನಮ್ಮ ಯುವಕರನ್ನು ಕೃಷಿಯತ್ತ ಆಕರ್ಷಿಸಲು ಒಂದು ಪ್ರಯತ್ನವಾಗಿದೆ. ಪೋಪ್ ಸ್ವಾಮೀಗಳು ಕೂಡ ತಮ್ಮ ವಿಶ್ವಪತ್ರದಲ್ಲಿ ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಹಸಿರು ಕ್ರಾಂತಿಗೆ ಸೂಚನೆ ನೀಡಿದ್ದು ಈಗಾಗಲೇ ಇಡೀ ವಿಶ್ವದಲ್ಲಿ ಕ್ರೈಸ್ತ ಸಮುದಾಯ ಉತ್ತಮ ಹೆಜ್ಜೆ ಇಟ್ಟಿದೆ ಅಲ್ಲದೆ ಇದರ ಫಲ ನಮಗೆ ಮುಂದಿನ ವರ್ಷಗಳಲ್ಲಿ ಲಭಿಸಲಿದೆ ಎಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾದ ಡಿಯೊನ್ ಡಿಸೋಜಾ.

ಒಟ್ಟಾರೆಯಾಗಿ ಯುವಕ – ಯುವತಿಯರು ಕ್ರಷಿಯಿಂದ ಹಿಂದೆ ಸರಿಯುತ್ತಿರೋ ಈ ಕಾಲ ಘಟ್ಟದಲ್ಲಿ ಪೋಪ್ ಸಂದೇಶವನ್ನು ಪಾಲಿಸುವದರ ಮೂಲಕ ಕ್ರೈಸ್ತ ಬಾಂಧವರು ಮಾಡ್ತಾ ಇರೋ ಕೆಲಸ ನಿಜಕ್ಕೂ ಮಾದರಿಯಾಗಿದೆ.


Spread the love