Home Mangalorean News Kannada News ಪಿಂಚಣಿ ವಂಚಿತ ವಿಕಲಚೇತನರನ್ನು ಗುರುತಿಸಲು ತಹಶೀಲ್ದಾರ್ ಸೂಚನೆ 

ಪಿಂಚಣಿ ವಂಚಿತ ವಿಕಲಚೇತನರನ್ನು ಗುರುತಿಸಲು ತಹಶೀಲ್ದಾರ್ ಸೂಚನೆ 

Spread the love

ಪಿಂಚಣಿ ವಂಚಿತ ವಿಕಲಚೇತನರನ್ನು ಗುರುತಿಸಲು ತಹಶೀಲ್ದಾರ್ ಸೂಚನೆ 

ಮಂಗಳೂರು : ತಾಲೂಕು ವ್ಯಾಪ್ತಿಯಲ್ಲಿ ಪಿಂಚಣಿ ವಂಚಿತ ವಿಕಲಚೇತನರನ್ನು ಗುರುತಿಸಿ ಕೂಡಲೇ ಮಾಹಿತಿ ನೀಡಿದರೆ, ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.

ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿವಿಧ ಯೋಜನೆಗಳ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಕಲಚೇತನರ ಮೇಲೆ ವಿಶೇಷ ಕಾಳಜಿ ಇದ್ದು, ಅವರು ಪಿಂಚಣಿ ವಂಚಿತರಾಗಬಾರದು ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಪಿಂಚಣಿ ವಂಚಿತ ವಿಕಲಚೇತನರನ್ನು ಗುರುತಿಸಿ ಸೂಕ್ತ ದಾಖಲೆಗಳ ಪ್ರತಿಯನ್ನು ವಾಟ್ಸ್‍ಆ್ಯಪ್ ಮೂಲಕ ಪಡೆದುಕೊಂಡು ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.

ವಿಕಲಚೇತನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಪ್ರತೀ ತಿಂಗಳ ಮೊದಲ ಸೋಮವಾರ ವಿಕಲಚೇತನರ ಕುಂದು ಕೊರತೆ ಸಭೆ ನಡೆಸಲಾಗುವುದು, ವಿಕಲಚೇತನರು ಈ ಸಭೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸರಕಾರದ ಯೋಜನೆಯನ್ವಯ ವಿಕಲಚೇತನರಿಗೆ ನೀಡುವ ವಿವಿಧ ಸವಲತ್ತುಗಳಲ್ಲಿ ಯಾವುದೇ ಲೋಪವಾಗಬಾರದು, ಏನಾದರು ಸಮಸ್ಯೆ ಇದ್ದರೆ ತಕ್ಷಣ ಗಮನಕ್ಕೆ ತರಬೇಕು. ವಿಕಲಚೇತನರಿಗೆ ಅನುಕೂಲವಗುವು ದೃಷ್ಠೀಯಿಂದ ಈಗಾಗಲೇ ಎಲ್ಲಾ ಕಚೇರಿಗಳಲ್ಲಿ ವೀಲ್ ಚೇರ್ ಸೌಲಭ್ಯವನ್ನು ಕಡ್ಡಾಯಗೊಳಿಸಲಾಗಿದ್ದು, ಈ ಸೌಲಭ್ಯದ ಬಗ್ಗೆ ಎಲ್ಲಾ ಕಚೇರಿಗಳಲ್ಲಿ ಪರಿಶೀಲನೆ ನಡೆಸಬೇಕೆಂದು ಶಿಶು ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ವಿಕಲಚೇತನರಿಗೆ ಗುರುತಿನ ಚೀಟಿಗೆ ಸೇವಾಸಿಂಧು ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಬೇಕು ಎಂದರು.

ವಿಕಲಚೇತನರಿಗೆ ಆದಾಯ ಪ್ರಮಾಣ ಪತ್ರದ ಮಿತಿ ಇರುವುದರಿಂದ, ಸಾಕಷ್ಟು ವಿಕಲಚೇತನರಿಗೆ ಆದಾಯ ಪ್ರಮಾಣ ಪತ್ರ ದೊರಕಿರುವುದಿಲ್ಲ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿ ಸಭೆಗೆ ತಿಳಿಸಿದಾಗ, ಮಾನವೀಯತೆಯ ನೆಲೆಯಲ್ಲಿ ಆಯಾ ವ್ಯಾಪ್ತಿಯಲ್ಲಿ ವಿಕಲಚೇತರಿಗೆ ಆದಾಯ ಪ್ರಮಾಣ ಒದಗಿಸಿಕೊಡಬೇಕು, ಈ ಬಗ್ಗೆ ಎಲ್ಲಾ ತಾಲೂಕಿನ ಗ್ರಾಮ ಲೆಕ್ಕಿಗರ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪುರಸಭೆ ಮತ್ತು ನಗರಸಭೆಗಳಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಕಾವಲು ಸಮಿತಿ ಸಭೆ ನಡೆಸುವ ಬಗ್ಗೆ ಪತ್ರ ಬರೆಯಲಾಗುವುದು ಎಂದು ತಹಶೀಲ್ದಾರ್ ಹೇಳಿದರು. ಬಾಲ್ಯವಿವಾಹ ನಿಷೇಧಧ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಲು ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಮಕ್ಕಳ ರಕ್ಷಣಾ ಸಮಿತಿ ಅನಾಥ, ನಿರ್ಗತಿಕ ಮಕ್ಕಳನ್ನು ಪೋಷಿಸುತ್ತಾ, ರಕ್ಷಣೆ ಮಾಡುತ್ತಿದ್ದು, ಸಾಕಷ್ಟು ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ದೊರಕಿರುವುದಿಲ್ಲ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿ ಕುಮಾರ್ ಸಭೆಗೆ ತಿಳಿಸಿದಾಗ, ಈಗಾಗಲೇ ಅಂತಹ ಮಕ್ಕಳು ಆಧಾರ್ ಕಾರ್ಡ್ ಹೊಂದಿದ್ದು, ಜಾತಿ ಪ್ರಮಾಣ ಪತ್ರ ಕೊಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇಲಾಖಾ ವತಿಯಿಂದ ನಡೆಯುವ ಸಭೆಗಳಲ್ಲಿ ಮಾದಕ ಮತ್ತು ವ್ಯಸನ ನಿಷೇಧದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಸೆಂಬ್ಲಿ ಸಭೆ, ನೋಟಿಸ್ ಬೋರ್ಡ್, ಎಸ್.ಡಿ.ಎಮ್. ಸಭೆಗಳಲ್ಲಿ ಶಾಲಾಮಟ್ಟದಲ್ಲಿ ಇದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸುನೀತಾ ಸಭೆಗೆ ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version