Home Mangalorean News Kannada News ಪಿಎಸ್ಐ ನಾಸೀರ್ ಹುಸೇನ್ ವಿರುದ್ದ ಹಿಂಜಾವೇ ಪ್ರತಿಭಟನೆಗೆ ಸಿಗದ ಬೆಂಬಲ; ಬಂಧನ, ಬಿಡುಗಡೆ

ಪಿಎಸ್ಐ ನಾಸೀರ್ ಹುಸೇನ್ ವಿರುದ್ದ ಹಿಂಜಾವೇ ಪ್ರತಿಭಟನೆಗೆ ಸಿಗದ ಬೆಂಬಲ; ಬಂಧನ, ಬಿಡುಗಡೆ

Spread the love

ಪಿಎಸ್ಐ ನಾಸೀರ್ ಹುಸೇನ್ ವಿರುದ್ದ ಹಿಂಜಾವೇ ಪ್ರತಿಭಟನೆಗೆ ಸಿಗದ ಬೆಂಬಲ; ಬಂಧನ, ಬಿಡುಗಡೆ

ಕುಂದಾಪುರ: ಕಳೆದೆರಡು ದಿನಗಳ ಹಿಂದೆ ಭಿನ್ನಕೋಮಿನ ವಿದ್ಯಾರ್ಥಿಗಳು ಸಾಗುತ್ತಿದ್ದ ಕಾರನ್ನು ಕೋಟೇಶ್ವರದಲ್ಲಿ ತಡೆದು ನಿಲ್ಲಿಸಿ ವಿದ್ಯಾರ್ಥಿಗಳಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೈತಿಕ ಪೊಲೀಸ್ ಗಿರಿ ನಡೆಸಿದ ಹಿಂಜಾವೇ ಮಖಂಡರಿಗೆ ಬೆವರಿಳಿಸಿದ ಠಾಣಾಧಿಕಾರಿ ನಾಸೀರ್ ಹುಸೇನ್ ವಿರುದ್ದ ಹಿಂಜಾವೇ  ಗುರುವಾರ ಆಯೋಜಿಸಿದ್ದ ಪ್ರತಿಭಟನೆ ನಿರೀಕ್ಷಿತ ಯಶಸ್ಸು ಕಾಣಲು ವಿಫಲವಾಗಿದೆ.

ಗುರುವಾರ ಸಂಜೆ ಪ್ರತಿಭಟನೆಗೆ ಆಗಮಿಸಿದ ಕಾರ್ಯಕರ್ತರನ್ನು ಪ್ರತಿಭಟನೆಗೆ ಅವಕಾಶ ಇಲ್ಲದ ಕಾರಣ ಪೋಲಿಸರು ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು.

ತಾಲೂಕಿನ ಗಂಗೊಳ್ಳಿಯಿಂದ ಹಾಗೂ ಕುಂದಾಪುರ, ಕೋಟೇಶ್ವರ ಸೇರಿದಂತೆ ಇತರ ಕಡೆಗಳಿಂದ ಕೆಲವೇ ಕಾರ್ಯಕರ್ತರು ಹಿಂದೂ ಜಾಗರಣಾ ವೇದಿಕೆಯ ಪ್ರತಿಭಟನಾ ಕರೆಗೆ ಓಗೊಟ್ಟು ಇಂದು ಸಂಜೆ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಒಟ್ಟುಗೂಡಿದ್ದರು.

ಪ್ರತಿಭಟನೆಗೆ ಸಕಾರಣವಿಲ್ಲದೆ ಇರುವುದರಿಂದ ಪೋಲಿಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಇನ್ನೊಂದೆಡೆ ಬಿಜೆಪಿ ಬೆಂಬಲಿತ ಸಂಘಟನೆಗಳು ಸಹ ಪ್ರತಿಭಟನೆಯನ್ನು ಬೆಂಬಲಿಸಲು ಹಿಂದೇಟು ಹಾಕಿದ್ದರು.

ಘಟನೆಯ ಬಳಿಕ ಎರಡು ದಿನಗಳಿಂದ ವಾಟ್ಸ್ಯಾಪ್ ಫೇಸ್‌ಬುಕ್‌ಗಳಲ್ಲಿ ನಾಸೀರ್ ಹುಸೇನ್ ಹಿಂದೂ ವಿರೋಧಿ ಎಂಬ ಬರಹಗಳನ್ನು ಹರಿಯಬಿಟ್ಟು ಹಿಂದೂ ಯುವಕರನ್ನು ಕೆರಳಿಸುವ ಯತ್ನವೂ ನಡೆಸಲಾಗಿತ್ತು. ಆದರೆ ಸತ್ಯಾಸತ್ಯತೆ ಅರಿತ ನಾಗರಿಕರು ಹಿಂಜಾವೇ ಕರೆಕೊಟ್ಟ ಪ್ರತಿಭಟನೆಗೆ ಹಾಜರಾಗದೆ ಠಾಣಾಧಿಕಾರಿ ನಾಸೀರ್ ಹುಸೇನ್‌ಗೆ ಪರೋಕ್ಷವಾಗಿ ಬೆಂಬಲ ನೀಡಿದ್ದರು.

ಬೀಚ್‌ನಲ್ಲಿ ತಿರುಗಾಟಕ್ಕೆ ಬಂದಿದ್ದ ಭಿನ್ನ ಕೋಮುಗಳ ವಿದ್ಯಾರ್ಥಿಗಳ ತಂಡದ ಮೇಲೆ ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಹಿಂಜಾವೇ ಮುಖಂಡರ ವಿರುದ್ದ ಮುಂಜಾಗ್ರತಾ ಕ್ರಮವಾಗಿ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಅನುಮತಿ ಇಲ್ಲದ ನಡುವೆಯೂ ಪ್ರತಿಭಟನೆಗೆ ಮುಂದಾಗುವ ಬಗ್ಗೆ  ಬಿಗು ಪೊಲೀಸ್ ಬಂದೋಸಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಎಸ್ಪಿ ಡಾ.ಸಂಜೀವ ಪಾಟೀಲ್ ಕೂಡಾ ಕುಂದಾಪುರದಲ್ಲಿ ಮೊಕ್ಕಾಂ ಹೂಡಿದ್ದರು. ಸಿಪಿಐ ಮಂಜಪ್ಪ, ಠಾಣಾಧಿಕಾರಿ ನಾಸೀರ್ ಹುಸೇನ್ ನೇತೃತ್ವದಲ್ಲಿ ಕೆಎಸ್ಆರ್ಪಿ, ಡಿಎಆರ್ ತುಕಡಿ ಹಾಗೂ ನೂರಾರು ಸಿಬ್ಬಂದಿ ನೇಮಕ ಮಾಡಲಾಗಿತ್ತು.


Spread the love

Exit mobile version