ಪಿಎಸ್ ಐ ಶ್ರೀಕಲಾರಿಂದ ರಾಜಕೀಯ ಒತ್ತಡ ಮರಳಿಗೆ ಜಿಲ್ಲೆಗೆ ಬಂದರೆ ತೀವ್ರ ಪ್ರತಿಭಟನೆ ಎಚ್ಚರಿಕೆ

Spread the love

ಪಿಎಸ್ ಐ ಶ್ರೀಕಲಾರಿಂದ ರಾಜಕೀಯ ಒತ್ತಡ ಮರಳಿಗೆ ಜಿಲ್ಲೆಗೆ ಬಂದರೆ ತೀವ್ರ ಪ್ರತಿಭಟನೆ ಎಚ್ಚರಿಕೆ

ಮಂಗಳೂರು: ಮುಡಿಪುವಿನಲ್ಲಿ ಬಡ ದಲಿತ ವ್ಯಕ್ತಿ ರುಕ್ಮಯ್ಯರವರ ಮೇಲೆ ವಿನಾಕಾರಣ ಹಲ್ಲೆ ಮಾಡಿದ ಪ್ರಕರಣದಲ್ಲಿ ಅಮಾನತು ಶಿಕ್ಷೆಗೆ ಒಳಪಟ್ಟಿರುವ ಕೊಣಾಜೆ ಪಿಎಸ್ ಐ ಶ್ರೀಕಲಾ ರಾಜಕೀಯ ಪ್ರಭಾವ ಬಳಸಿ ಇಲಾಖೆಗೆ ಸೇರ್ಪಡೆಯಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಭೃಷ್ಟಾಚಾರದ ಕಳಂಕವನ್ನು ಮೆತ್ತಿಕೊಂಡು ಅಮಾಯಕರ ಜೀವನದ ಜೊತೆ ಚೆಲ್ಲಾಟವಾಡಿ ಅವರ ಬದುಕನ್ನು ದುಸ್ತರಗೊಳಿಸಿ ಪೋಲಿಸ್ ಇಲಾಖೆಗೆ ಮಸಿಯನ್ನು ಬಳಿದಿರುವ ಇವರು ಮತ್ತೆ ಜಿಲ್ಲೆಗೆ ಬಂದರೆ ತೀವ್ರ ಹೋರಾಟವನ್ನು ಎದುರಿಸಬೇಕಾದಿತು ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಈ ಕುರಿತು ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರಾಜಕಾರಣಿಗಳ ಬಳಿ ತೆರಳಿ ರಾಜಕೀಯ ಒತ್ತಡವನ್ನು ಹೇರಲು ಈಕೆ ಪ್ರಯತ್ನಿಸುತ್ತಿದ್ದು, ಪ್ರಭಾವಿ ರಾಜಕಾರಣಿಯೊಬ್ಬರು ಈಕೆಗೆ ಅಭಯ ಹಸ್ತ ನೀಡುವ ಮೂಲಕ ಪೋಲಿಸ್ ಇಲಾಖೆಗೆ ಒತ್ತಡ ಹೇರಿ, ಭ್ರಷ್ಟ ಅಧಿಕಾರಿಯ ರಕ್ಷಣೆಗೆ ಮುಂದಾಗಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಇವರ ಮೇಲೆ ಈಗಾಗಲೇ ದಾಖಲಾಗಿರುವ ಭ್ರಷ್ಟಾಚಾರ ಹಗರಣಗಳು, ದೌರ್ಜನ್ಯಗಳೂ, ಸೇರಿದಂತೆ 7 ಪ್ರಕರಣಗಳು ಬಗ್ಗೆ ಮರುತನಿಖೆ ನಡೆಯುತ್ತಿದ್ದು, ನೊಂದ ಸಂತ್ರಸ್ತರಿಂದ ದೂರುಗಳು ಮತ್ತೆ ಮತ್ತೆ ದಾಖಲಾಗುತ್ತಿದೆ. ತನಿಖೆಯು ಪ್ರಗತಿಯಲ್ಲಿ ಸಾಗುತ್ತಿದೆ ಈ ಮಧ್ಯೆ ರಾಜಕೀಯವು ಇಲ್ಲಿ ಹಸ್ತಕ್ಷೇಪ ನಡೆಸಲು ನಾವು ಬಿಡುವುದಿಲ್ಲ. ಜಿಲ್ಲೆಯ ರಾಜಕಾರಣಿಗಳೂ ಈ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕಾದ ರಾಜಕಾರಣಿಗಳು ನೊಂದ ಅಮಾಯಕರ ಪರವಾಗಿ ಸ್ವರ ಎತ್ತಬೇಕೇ ಹರೊತು ಇಂತಹ ಕಳಂಕಿತರ ಪರವಾಗಿ ನಿಲ್ಲಬಾರದು. ಶ್ರೀಕಲಾ ಮತ್ತೆ ಜಿಲ್ಲೆಗೆ ಬರುವಲ್ಲಿ ರಾಜಕೀಯ ಪ್ರಭಾವ ನಡೆದರೆ ಸಂಬಂಧಪಟ್ಟ ರಾಜಕಾರಣಿಗಳ ಮನೆ ಮುಂದೆಯೂ ಪ್ರತಿಭಟನೆ ನಡೆಸಲಾಗುವುದು ಹಾಗೂ ಪೋಲಿಸ್ ಇಲಾಖೆ ಒತ್ತಡಕ್ಕೆ ಒಳಗಾಗಿ ಪ್ರಕರಣವನ್ನು ದಿಕ್ಕು ತಪ್ಪಿಸಲು ಮುಂದಾದರೆ ಪೋಲಿಸ್ ಇಲಾಖೆಯ ಮುಂದೆಯೂ ಪ್ರತಿಭಟನೆ ನಡೆಸಲಾಗುವುದು.

ಈಗಾಗಲೇ ಪಿಎಸ್ ಐ ಶ್ರೀಕಲಾ ಅನ್ಯಾಯಕ್ಕೊಳಗಾಗಿ ನೊಂದಿರುವ ಸಂತ್ರಸ್ತರು ಪ್ರಾಣಭಯದಿಂದ ಹೊರಗೆ ಬಂದು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಂತಹ ನೊಂದ ಸಂತ್ರಸ್ತರು ಯಾವುದೇ ಗೊಡ್ಡು ಬೆದರಿಕೆಗಳಿಗೆ ಹೆದರದೆ ನಿರ್ಭೀತಿಯಿಂದ ಮುಂದೆ ಬಂದು ಪೋಲಿಸ್ ಆಯುಕ್ತರಲ್ಲಿ ಅಥವಾ ಸಂಘಟಕರಲ್ಲಿ ದೂರನ್ನು ನೀಡಬಹುದು. ವಿನ್ ಗೋಲ್ಡ್ ವಿಜಾರ್ ಮತ್ತಿತರ ಬ್ಲೇಡ್ ಕಂಪೆನಿಗಳಲ್ಲಿ ಹಣ ತೊಡಗಿಸಿ ಹಣ ಕಳಕೊಂಡಿರವು ಅಮಾಯಕರು ತಮ್ಮ ದೂರನ್ನು ನೀಡಬಹುದು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ನಿರ್ಮಲ್ ಕುಮಾರ್, ರಘುವೀರ್ ಸೂಟರ್ ಪೇಟೆ, ಅಶೀಕ್ ಕೊಂಚಾಡಿ, ರಮೇಶ್ ಕೋಟ್ಯಾನ್, ಯಶೋಧ, ದಿನಕರ್ ಶೆಟ್ಟಿ, ಸುರೇಶ್ ಭಟ್, ದಯನಾಥ ಕೋಟ್ಯಾನ್, ಶೇಖರ್ ಚಿಲಿಂಬಿ ಮುತ್ತಾದವರು ಉಪಸ್ಥಿತರಿದ್ದರು/


Spread the love