ಪಿಣರಾಯಿ ಭೇಟಿ ವಿರೋಧಿಸಿ ದ.ಕ ಬಂದ್: ಜನಜೀವನ ಅಸ್ತವ್ಯಸ್ಥ

Spread the love

ಪಿಣರಾಯಿ ಭೇಟಿ ವಿರೋಧಿಸಿ ದ.ಕ ಬಂದ್: ಜನಜೀವನ ಅಸ್ತವ್ಯಸ್ಥ

ಮಂಗಳೂರು:  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ವಿರೋಧಿಸಿ ಸಂಘ ಪರಿವಾರದಿಂದ ದಕ್ಷಿಣ ಕನ್ನಡ ಜಿಲ್ಲಾ ಬಂದ್ ನಿಂದಾಗಿ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವಸ್ತ್ಯಗೊಂಡಿದೆ

ಜಿಲ್ಲೆಯಾದ್ಯಂತ ಖಾಸಗಿ‌ ಬಸ್ ಗಳ ಸಂಚಾರ ಬಹುಪಾಲು ಸ್ಥಗಿತಗೊಂಡಿದ್ದು ಕೆಎಸ್ಆರ್ ಟಿಸಿ ಬಸ್ ಗಳ ಸಂಚಾರ ಮಾತ್ರ ಲಭ್ಯವಿದೆ. ಅಂಗಡಿ ಮುಂಗಟ್ಟುಗಳು ಬಹುತೇಕ ಬಂದ್ ಆಗಿದೆ .

ಮಂಗಳೂರಿನ ಹಲವೆಡೆ ಸರ್ಕಾರಿ ಬಸ್ ಗಳ ಮೇಲೆ ಕಲ್ಲು ತೂರಾಟ, ರಸ್ತೆ ಮಧ್ಯೆ ಟೈರ್ ಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿದೆ .

ಹಿಂಸಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಮಂಗಳೂರಿನ ಪಡೀಲ್, ಭವಂತಿ ಸ್ಟ್ರೀಟ್, ದೇರೆಬೈಲ್, ತಲಪಾಡಿ ಜಂಕ್ಷನ್, ಬಿ.ಸಿ. ರೋಡ್, ತುಂಬೆ ಬಳಿ ಕೆಲವು ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಿದ್ದು  ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಮಂಗಳೂರಿನಲ್ಲಿ ಮೊಕ್ಕಾ ಹೂಡಿದ್ದು, ಮೂರು ಸಾವಿರಕ್ಕೂ ಹೆಚ್ಚು ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ನೆರೆಯ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಕೂಡ ಹೆಚ್ಚುವರಿ ಪೋಲಿಸರನ್ನು ಕರೆಯಿಸಲಾಗಿದ್ದು, ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಕೂಡ ಮಂಗಳೂರಿನಲ್ಲಿ ಭದ್ರತೆಯ ಉಸ್ತುವಾರಿಯಲ್ಲಿ ನಿರತರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಬಂದ್ ಕರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಬಸ್ ಸಂಚಾರವಿಲ್ಲದೆ ಪರೀಕ್ಷೆ ಬರೆಯಲು ಹೋಗಲು ಪರದಾಟ ನಡೆಸುತ್ತಿದ್ದ ದೃಶ್ಯ ಕಂಡು ಕೆಲವು ಸ್ಥಳಗಳಲ್ಲಿ ಕಂಡು ಬಂದಿದೆ.


Spread the love