ಪಿತ್ರೋಡಿ – ಜಾರುಕುದ್ರು ಸೇತುವೆಯ ಅಸಮರ್ಪಕ ನಿರ್ಮಾಣದಿಂದ ನದಿಕೊರೆತ ; ಆತಂಕದಲ್ಲಿ ತೀರದ ನಿವಾಸಿಗಳು

Spread the love

ಪಿತ್ರೋಡಿ – ಜಾರುಕುದ್ರು ಸೇತುವೆಯ ಅಸಮರ್ಪಕ ನಿರ್ಮಾಣದಿಂದ ನದಿಕೊರೆತ ; ಆತಂಕದಲ್ಲಿ ತೀರದ ನಿವಾಸಿಗಳು

ಉಡುಪಿ: ಗಾಂಧಿ ಪಥ – ಗ್ರಾಮ ಪಥ ಯೋಜನೆ(ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆ)ಯಡಿ ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಿತ್ರೋಡಿ – ಜಾರುಕುದ್ರುವಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಾರುಕುದ್ರು ಸೇತುವೆಗಾಗಿ ನದಿಗೆ ಅಡ್ಡಲಾಗಿ ಹಾಕಲಾದ ಮಣ್ಣಿನಿಂದಾಗಿ ನೀರು ಹರಿದುಹೋಗದೆ ನದಿ ತೀರದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿರುವ ಕುರಿತು ಶಾಸಕ ಲಾಲಾಜಿ ಆರ್ ಮೆಂಡನ್ ಅವರಿಗೆ ಸ್ಥಳೀಯ ನಿವಾಸಿಗಳು ಶನಿವಾರ ಮನವಿ ಸಲ್ಲಿಸಿದರು.

ಗಾಂಧಿ ಪಥ – ಗ್ರಾಮ ಪಥ ಯೋಜನೆ(ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆ)ಯಡಿ ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಿತ್ರೋಡಿ – ಜಾರುಕುದ್ರುವಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಸಲುವಾಗಿ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಗುದ್ದಲಿ ಪೂಜೆ ನಡೆದಿದ್ದು, ಸೇತುವೆಗೆ ಪಿಲ್ಲರ್ ನಿರ್ಮಿಸುವ ಸಲುವಾಗಿ ನದಿಗೆ ಅಡ್ಡಲಾಗಿ ಮಣ್ಣು ತುಂಬಿಸಿ ನೀರಿಗೆ ತಡೆಯೊಡ್ಡಲಾಗಿತ್ತು. ಮಳೆಗಾಲದ ಸಮಯವಾದ ಪರಿಣಾಮ ನದಿ ತುಂಬಿ ಹರಿಯುತ್ತಿದ್ದು ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಇಲ್ಲದ ಪರಿಣಾಮ ನದಿ ತೀರದ ಮನೆಗಳಿಗೆ ನದಿ ಕೊರೆತದ ಸಮಸ್ಯೆಯಿಂದ ಬದುಕು ಕಷ್ಟಸಾಧ್ಯವಾಗಿದೆ. ನದಿಕೊರೆತದಿಂದ ಮನೆಗಳು ಸಹ ಅಪಾಯದ ಅಂಚಿನಲ್ಲಿದ್ದು ಇದಕ್ಕೆ ಜಿಲ್ಲಾಡಳಿತ ಕೂಡ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಕೊರಗು.

ಈ ಕುರಿತು ಮಾಹಿತಿ ಅರಿತ ಸ್ಥಳೀಯ ಕಾಪು ಶಾಸಕ ಲಾಲಾಜಿ ಮೆಂಡನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದ್ದು ನದಿಯ ಮಧ್ಯೆ ಹಾಕಿರುವ ಮಣ್ಣಿನ ತಡೆಗೋಡೆ ಮಧ್ಯೆ ನೀರು ಹರಿದು ಹೋಗಲು ಪೈಪ್ ಅಳವಡಿಸುವಂತೆ ವಿನಂತಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳಲ್ಲಿ ಸಮಾಲೋಚನೆ ನಡೆಸಿ ಕೂಡಲೇ ನದಿಯ ಮಧ್ಯೆ ಹಾಕಿರುವ ಮಣ್ಣಿನ ತಡೆಗೋಡೆ ಮಧ್ಯೆ ನೀರು ಹರಿದು ಹೋಗಲು ಪೈಪ್ ಅಳವಡಿಸುವಂತೆ ಕೋರಲಾಗುವುದು ಎಂದರು.


Spread the love