ಪಿಲಿಕುಳದ ರಾಣಿ ಈಗ ಹತ್ತು ಮಕ್ಕಳ ತಾಯಿ, ಮೃಗಾಲಯದಲ್ಲಿ 10ಕ್ಕೇರಿದ ಹುಲಿಗಳ ಸಂಖ್ಯೆ
ಮಂಗಳೂರು: ಪಿಲಿಕುಳ ಉದ್ಯಾನವನದಲ್ಲಿ ರಾಣಿ ಎನ್ನುವ ಹೆಣ್ಣು ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಈ ಮೂಲಕ ಇಲ್ಲಿನ ಹುಲಿಗಳ ಸಂಖ್ಯೆ ಹತ್ತಕ್ಕೇರಿದೆ. ಮರಿಗಳು ಆರೋಗ್ಯದಿಂದಿವೆ.ಒಂದು ಗಂಡು ಒಂದು ಹೆಣ್ಣು ಮರಿಯಾಗಿದ್ದು, ಇವುಗಳಿಗೆ ಈಗ ಎರಡು ತಿಂಗಳ ಪ್ರಾಯ. ಇದೇ “ರಾಣಿ ಹುಲಿ’ಯು 2016ರಲ್ಲಿ 5 ಮರಿಗಳಿಗೆ ಜನ್ಮನೀಡಿ ದಾಖಲೆ ನಿರ್ಮಿಸಿತ್ತು. 2021 ರಲ್ಲಿ 3 ಮರಿಗಳಿಗೆ ಜನ್ಮ ನೀಡಿದ್ದು, ಒಟ್ಟು ಹತ್ತು ಮಕ್ಕಳ ತಾಯಿ.
2016ರಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟದಿಂದ ರಾಣಿಯನ್ನು ಪಿಲಿಕುಳಕ್ಕೆ ತಂದಿದ್ದು, ಪ್ರತಿಯಾಗಿ ಇಲ್ಲಿನ ಗಂಡು ಹುಲಿಯನ್ನು ಬನ್ನೇರುಘಟ್ಟ ಮೃಗಾಲಯಕ್ಕೆ ನೀಡಲಾಗಿತ್ತು. ಪಿಲಿಕುಳದಲ್ಲಿ ಈ ಹಿಂದೆ 15 ಕ್ಕೂ ಹೆಚ್ಚು ಹುಲಿಗಳಿದ್ದವು.
ಪಿಲಿಕುಳದಲ್ಲಿ ಮೃಗಾಲಯ ಆರಂಭಿ ಸುವಾಗ ಶಿವಮೊಗ್ಗದ ತಾವರೆಕೊಪ್ಪ ಮೃಗಾಲಯದಿಂದ ಹುಲಿಯನ್ನು ತರಲಾಗಿತ್ತು. ಆದರೆ ಈಗ ಶಿವಮೊಗ್ಗದ ಮೃಗಾಲಯದಿಂದಲೇ ಇಲ್ಲಿನ ಹುಲಿಗಳಿಗೆ ಬೇಡಿಕೆ ಇದೆ. ಹಂಪಿ ಮೃಗಾಲಯದಿಂದಲೂ ಬೇಡಿಕೆ ಇದೆ. ಮಧ್ಯಪ್ರದೇಶದಿಂದ ವಿನಿಮಯದಡಿ ಹುಲಿಯನ್ನು ತರಿಸಿಕೊಳ್ಳುವ ಯೋಜನೆ ಯೂ ಮೃಗಾಲಯದ ಮುಂದಿದೆ.
ದೇಶದಲ್ಲಿ 150 ಮೃಗಾಲಯಗಳಿದ್ದು, ಅವುಗಳಲ್ಲಿ 18 ದೊಡ್ಡ ಮೃಗಾಲಯಗಳು. ಇದರಲ್ಲಿ ಪಿಲಿಕುಳವೂ ಸೇರಿದೆ. ಇದು ಕೇಂದ್ರೀಯ ಮೃಗಾ ಲಯ ಪ್ರಾಧಿಕಾರದ ಅಡಿಯಲ್ಲಿ ಬರುವ ಮೃಗಾಲಯ. ಮೃಗಾಲಯಕ್ಕೆ ಸರಕಾರದಿಂದ ಅನುದಾನ ದೊರೆಯದು. ದಾನಿಗಳು ಮತ್ತು ಸಿಎಸ್ಆರ್ ಅನುದಾನದಿಂದ ನಿರ್ವಹಿ ಸಬೇಕು. ಇತ್ತೀಚೆಗೆ ಪಿಲಿಕುಳಕ್ಕೆ ಭೇಟಿ ನೀಡಿದ ವಿಧಾನ ಮಂಡಲ ಸಮಿತಿ ಯವರೂ ಪಿಲಿಕುಳದ ನಿರ್ವಹಣೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕೇಂದ್ರ ಮೃಗಾಲಯ ಪ್ರಾ ಧಿಕಾರ ಅ ಧೀನದಲ್ಲಿರುವ ದೇಶದ ಮೃಗಾಲಯಗಳ ಪೈಕಿ ಪಿಲಿಕುಳವು ಅತಿ ಹೆಚ್ಚು ಪ್ರಾಣಿಗಳ ಸಂತಾನೋತ್ಪತ್ತಿ ಆಗುವ ಮೃಗಾಲಯವಾಗಿದೆ. ಕೇಂದ್ರದ ಅಂಕಿ-ಅಂಶದಂತೆ 2023-24ನೇ ಸಾಲಿನಲ್ಲಿ ಪಿಲಿಕುಳದ ಸರಾಸರಿ ಸಂತಾನೋತ್ಪತ್ತಿ ಪ್ರಮಾಣ ಶೇ. 36.47 ಹಾಗೂ ಮರಣ ಪ್ರಮಾಣ ಶೇ.3.99ರಷ್ಟಿದೆ. ದೇಶದ ಮೃಗಾಲಯಗಳ ಪ್ರಾಣಿಗಳ ಸರಾಸರಿ ಜನನ ಪ್ರಮಾಣ ಶೇ.8.14ರಷ್ಟಿದ್ದು, ಮರಣ ಪ್ರಮಾಣ ಶೇ. 5.81ರಷ್ಟಿದೆ.
ರಾಣಿ ಹುಲಿಯ ಎರಡು ಮರಿಗಳೊಂದಿಗೆ ಪಿಲಿಕುಳದ ಒಟ್ಟು ಹುಲಿಗಳ ಸಂಖ್ಯೆ 10ಕ್ಕೇರಿದೆ. ಮರಿಗಳು ಆರೋಗ್ಯದಿಂದಿದ್ದು, ದತ್ತು ಸ್ವೀಕರಿಸಲು ಬರುವ ದಾನಿಗಳ ಮೂಲಕ ಶೀಘ್ರದಲ್ಲೇ ಅವುಗಳಿಗೆ ಹೆಸರಿಡಲಾಗುವುದು. ಪಿಲಿಕುಳದ ಹುಲಿಗಳಿಗೆ ಇತರ ಮೃಗಾಲಯಗಳಿಂದ ಹೆಚ್ಚಿನ ಬೇಡಿಕೆಯೂ ಇದೆ. ಎಂದು ಎಚ್. ಜಯಪ್ರಕಾಶ್ ಭಂಡಾರಿ. ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ ಇವರು ತಿಳಿಸಿದ್ದಾರೆ