Home Mangalorean News Kannada News ಪಿ.ಪಿ.ಪಿ ಅಡಿ ಬಸ್ಸು ನಿಲ್ದಾಣ : ಡಿವೈಎಫ್ಐ ತೀವ್ರ ವಿರೋಧ

ಪಿ.ಪಿ.ಪಿ ಅಡಿ ಬಸ್ಸು ನಿಲ್ದಾಣ : ಡಿವೈಎಫ್ಐ ತೀವ್ರ ವಿರೋಧ

Spread the love

ಪಿ.ಪಿ.ಪಿ ಅಡಿ ಬಸ್ಸು ನಿಲ್ದಾಣ : ಡಿವೈಎಫ್ಐ ತೀವ್ರ ವಿರೋಧ

ಮಂಗಳೂರು: ಸ್ಮಾರ್ಟ್ ಸಿಟಿ, ಈಗಾಗಲೆ ಬಿಡುಗಡೆಗೊಂಡಿರುವ ಎಡಿಬಿ ಸಾಲ, ರಾಜ್ಯ ಸರಕಾರದ ಅನುದಾನ ಸಹಿತ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಹಲವು ಅವಕಾಶಗಳಿದ್ದರೂ, ಖಾಸಗಿ ಲಾಬಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಖಾಸಗಿ, ಸರಕಾರಿ ಪಾಲುದಾರಿಕೆ (ಪಿ ಪಿ ಪಿ) ಯಲ್ಲಿ ಮಂಗಳೂರು ಸಾರ್ವಜನಿಕ ಸಾರಿಗೆ ಕೇಂದ್ರ (ಬಸ್ಸು ತಂಗುದಾಣ) ನಿರ್ಮಿಸಲು ರಾಜ್ಯ ಸಚಿವ ಸಂಪುಟ ಅವಕಾಶ ನೀಡಿರುವುದನ್ನು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸಿದೆ. ರಾಜ್ಯ ಸರಕಾರ ಈ ಜನವಿರೋಧಿ ತೀರ್ಮಾನವನ್ನು ತಕ್ಷಣ ಕೈ ಬಿಟ್ಟು ನಗರ ಪಾಲಿಕೆ ಅಡಿಯಲ್ಲಿಯೇ ಬಸ್ಸು ನಿಲ್ದಾಣ ನಿರ್ಮಿಸಬೇಕು ಎಂದು ಅಗ್ರಹಿಸಿದೆ.

ಸುಸಜ್ಜಿತ ಬಸ್ಸು ನಿಲ್ದಾಣ ಮಂಗಳೂರಿನ ನಾಗರಿಕರ ಬಹುಕಾಲದ ಕನಸು. ಪಂಪ್ ವೆಲ್ ನಲ್ಲಿ ಅದರ ನಿರ್ಮಾಣವನ್ನು ಡಿವೈಎಫ್ಐ ಬೆಂಬಲಿಸುತ್ತದೆ. ಆದರೆ, ಅದು ಸಾರ್ವಜನಿಕ ರಂಗದಲ್ಲಿ ಆಗಬೇಕು. ಮೂಲಭೂತ ಸೌಲಭ್ಯಗಳ ನಿರ್ಮಾಣ ಖಾಸಗಿ ಲಾಬಿಗಳ ಸಂಪತ್ತು ಹೆಚ್ಚಿಸುವ ಹಿಡನ್ ಅಜೆಂಡಾ ಹೊಂದಿರಬಾರದು. ಮಂಗಳೂರಿನ ಕೇಂದ್ರ ಮಾರುಕಟ್ಟೆ, ಹಲವು ಉಪ ಮಾರುಕಟ್ಟೆಗಳು ಖಾಸಗಿ, ಸಾರ್ವಜನಿಕ ಸಹಭಾಗಿತ್ವದ (ಪಿ ಪಿ ಪಿ) ಅಡಿ ನಿರ್ಮಾಣಗೊಳ್ಖುತ್ತಿದೆ. ಜಲ ಸಿರಿ ಹೆಸರಿನಲ್ಲಿ ಕುಡಿಯುವ ನೀರು ಯೋಜನೆ ಖಾಸಾಗೀಕರಣ ಗೊಳ್ಳುತ್ತಿದೆ. ಕಸ ಸಂಗ್ರಹ ಖಾಸಗೀಕರಣಗೊಂಡಿದೆ, ಎರಡು ಹಂತಗಳಲ್ಲಿ 360 ಕೋಟಿ, 750 ಕೋಟಿ ರೂಪಾಯಿಗಳನ್ನು ವಿದೇಶಿ ಏಡಿಬಿ ಬ್ಯಾಂಕ್ ನಿಂದ ಸಾಲ ಪಡೆದು ನಗರ ಪಾಲಿಕೆ ಪೂರ್ಣವಾಗಿ ಏಡಿಬಿ ಹಿಡಿತಕ್ಕೆ ಸಿಲುಕಿದೆ. ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ಅನಗತ್ಯ ನಿರ್ಮಾಣಗಳಿಗೆ ಕೋಟಿ ಕೋಟಿ ಹಣ ದುರುಪಯೋಗಗೊಳ್ಳುತ್ತಿದೆ. ತಲಾ ಹನ್ನೆರಡು ಲಕ್ಷ ರೂಪಾಯಿ ವೆಚ್ಚದ ಸರಣಿ ಬಸ್ಸು ತಂಗುದಾಣಗಳನ್ನು ಮಳೆ, ಬಿಸಿಲಿನಿಂದ ರಕ್ಷಣೆ ನೀಡಲಾರದ ರೀತಿ ನಿರ್ಮಿಸಿ ಕೋಟ್ಯಾಂತರ ರೂಪಾಯಿ ವ್ಯರ್ಥ ಗೊಳಿಸಲಾಗಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಪರ ವಾದ ಯಾವ ಯೋಜನೆಗಳೂ ಜಾರಿಗೊಳ್ಳುತ್ತಿಲ್ಲ. ಈಗ ಕೇಂದ್ರ ಬಸ್ಸು ತಂಗುದಾಣವೂ ಖಾಸಾಗಿ, ಸರಕಾರಿ ಸಹಭಾಗಿತ್ವದ ಅಡಿ ನಿರ್ಮಾಣಗೊಂಡರೆ ನಗರ ಪಾಲಿಕೆಯಲ್ಲಿ ಎಲ್ಲವೂ ಖಾಸಗಿ ಪಾಲಾದಂತಾಗುತ್ತದೆ. ಪಾಲಿಕೆಯ ಚುನಾಯಿತ ಸದಸ್ಯರು, ಆಡಳಿತವನ್ನು ವಿಶ್ವಾಸಕ್ಕೆ ಪಡೆಯದೆ ಇದೆಲ್ಲವನ್ನು ಮಾಡುವುದಾದರೆ ಪಾಲಿಕೆಯ ಕೌನ್ಸಿಲ್ ಆದರೂ ಯಾಕಿರಬೇಕು ? ಎಂದು ಡಿವೈಎಫ್ಐ ಪ್ರಶ್ನಿಸಿದೆ.

445 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಆಧುನಿಕ ಬಸ್ಸು ತಂಗುದಾಣವು ಶಾಪಿಂಗ್ ಮಾಲ್, ಕಚೇರಿ ಸಂಕೀರ್ಣ, ಬಹು ಮಹಡಿ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಆದರೆ ನಿರ್ಮಾಣದ ನಂತರ 40 ವರ್ಷಗಳ ಕಾಲ ದೀರ್ಘ ಅವಧಿಗೆ ಇಡೀ ಸಾರಿಗೆ ಕೇಂದ್ರ ಹೂಡಿಕೆ ಮಾಡಿದ ಖಾಸಗಿ ಕಂಪೆನಿಯ ಒಡೆತನಕ್ಕೆ ಸಿಲುಕುತ್ತದೆ.‌ ನಲವತ್ತು ವರ್ಷಗಳ ನಂತರ ಕಟ್ಟಡದ ಬಾಳಿಕೆ ಅವಧಿ, ನವೀಕರಣ ವಿಸ್ತರಣೆ ಮುಂತಾದ ಕಾರಣಕ್ಕೆ ಮತ್ತೆ ಖಾಸಗಿಯವರ ಲೀಸ್ ನವೀಕರಣ ಗೊಳ್ಳುತ್ತದೆಯೇ ಹೊರತು ನಗರ ಪಾಲಿಕೆಯ ಒಡೆತನಕ್ಕೆ ಯಾವತ್ತೂ ಮರಳುವುದಿಲ್ಲ. ಇದು ಪಿ ಪಿ ಪಿ ಅಡಿ ನಿರ್ಮಾಣಗೊಳ್ಳುವ ಟೋಲ್ ರಸ್ತೆಯ ಮಾದರಿಯಾಗಿದ್ದು, ಲೀಸ್ ನವೀಕರಣಕ್ಕೆ ಕೊನೆಯೆಂಬುದು ಇರುವುದಿಲ್ಲ. ಇದು ಪೂರ್ಣವಾಗಿ ಸರಕಾರಿ ಭೂಮಿ,,ಸಂಪತ್ತಿನಲ್ಲಿ ಖಾಸಗಿಯವರ ತಿಜೋರಿ ತುಂಬಿಸುವ ಯೋಜನೆಯಾಗಿದೆ.

ಆದುದರಿಂದ ಸರಕಾರ ಈ ಜನವಿರೋಧಿ ನಿರ್ಧಾರವನ್ನು ವಾಪಾಸ್ ಪಡೆಯಬೇಕು. ಸ್ಮಾರ್ಟ್ ಸಿಟಿ, ಈಗಾಗಲೆ ಮಂಜೂರಾಗಿರುವ ಎಡಿಬಿ ಸಾಲ, ರಾಜ್ಯ ಸರಕಾರದ ಅನುದಾನಗಳ ಮೂಲಕ ಸಂಪನ್ಮೂಲ ಕ್ರೋಢೀಕರಿಸಿ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಪಾಲಿಕೆಯ ಸಂಪತ್ತು, ಆದಾಯವನ್ನು ಹೆಚ್ಚಿಸಬೇಕು. ಈ ಕುರಿತು ನಗರ ಪಾಲಿಕೆಯ ವಿಶೇಷ ಸಭೆ, ಜಿಲ್ಲಾ ಮಟ್ಟದ ಸರ್ವ ಪಕ್ಷಗಳ ವಿಶೇಷ ಸಭೆ ಕರೆದು ಸಮಗ್ರ ಚರ್ಚೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಬೇಕು, ಅದಕ್ಕಿಂತ ಮೊದಲು ಈಗ ಅನುಮೋದಿಸಿರುವ ಪಿ ಪಿ ಪಿ ಯೋಜನೆಯನ್ನು ತಕ್ಷಣ ಕೈ ಬಿಡಬೇಕು ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.


Spread the love

Exit mobile version