ಪುತ್ತೂರು: ಕೊಳವೆಬಾವಿ ಶುದ್ಧೀಕರಣ ವೇಳೆ ಕಲ್ಲು ತೂರಾಟ
ಪುತ್ತೂರು: ನರಿಮೊಗರು ಗ್ರಾಮದ ಮೇಘಾ ಪ್ರುಟ್ ಪ್ರೊಸ್ಸೆಸಿಂಗ್ ಕಂಪನಿ “ಬಿಂದು’ನಲ್ಲಿ ಕೊಳವೆಬಾವಿ ಶುದ್ದೀಕರಣ ವೇಳೆ ಸ್ಥಳೀಯ ಕೆಲ ನಿವಾಸಿಗಳು ಕಲ್ಲು ತೂರಾಟ ಮಾಡಿದ ಘಟನೆ ನಡೆದಿದ್ದು ಘಟನೆಗೆ ಸಂಬಂಧಪಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇ 27ರ ಸಂಜೆ ಸಂಸ್ಥೆಯ ನರಿಮೊಗರು ಫ್ಯಾಕ್ಟರಿ ಆವರಣದಲ್ಲಿ ಕೊಳವೆಬಾವಿಯನ್ನು ಶುದ್ಧೀಕರಿಸುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಗಳಾದ ಸಮದ್ ಮತ್ತು ಸಲೀಂ ಹಾಗೂ ಇತರರು ಸೇರಿಕೊಂಡು ಸಂಸ್ಥೆಯ ಆವರಣದ ಹೊರಭಾಗದಲ್ಲಿ ನಿಂತು ಕಲ್ಲು ತೂರಾಟ ನಿರತ ದೃಶ್ಯ ಕಂಡುಬಂದಿದೆ.
ನೀರಿನ ವಿಷಯದಲ್ಲಿ ಆಕ್ರೋಶ?
ಬಿಂದು ಫ್ಯಾಕ್ಟರಿ ಆಸುಪಾಸಿನಲ್ಲಿ ಹಲವು ಮನೆಗಳಿವೆ. ಫ್ಯಾಕ್ಟರಿಯ ಆವರಣದೊಳಗೆ ಹಳೆಯ ಕೊಳವೆಬಾವಿಯೊಂದರ ಶುದ್ಧೀಕರಣ ಕಾರ್ಯ ನಡೆಯುತಿತ್ತು ಎನ್ನಲಾಗಿದೆ. ಕೊಳವೆ ಬಾವಿ ಕೊರೆಯುವ ಯಂತ್ರದ ಶಬ್ದ ಕೇಳಿದ ಕೆಲವು ಯುವಕರು ಕೊಳವೆಬಾವಿ ಆಳ ಮಾಡುವುದರಿಂದ ನಾವು ಬಳಸುವ ಕೊಳವೆಬಾವಿಯ ನೀರು ಕಡಿಮೆ ಆಗುತ್ತದೆ ಎಂದು ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ. ಈ ವಿಷಯದಲ್ಲಿ ಆಕ್ರೋಶಗೊಂಡು ಕಲ್ಲು ಎಸೆದಿರುವ ಶಂಕೆ ವ್ಯಕ್ತವಾಗಿದೆ.
ನಾವು ಸಹಾಯಕ ಆಯುಕ್ತರ ಅನುಮತಿ ಪಡೆದುಕೊಂಡು ಫ್ಯಾಕ್ಟರಿ ಆವರಣದ ಕೊಳವೆ ಬಾವಿ ಶುದ್ದೀಕರಣ ಮಾಡಿದ್ದೇವೆ, ಆಳ ಮಾಡಿಲ್ಲ. ಆದರೆ ಸ್ಥಳೀಯ ಯುವಕರಿಬ್ಬರು ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಕೊಳವೆಬಾವಿ ಯಂತ್ರಕ್ಕೆ ಕಲ್ಲು ತಾಗಿದೆ. ಆಪರೇಟರ್‌ಗೆ ಗಾಯ ಉಂಟಾಗಿದೆ. ಘಟನೆಯ ಬಗ್ಗೆ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ ಎಂದು ಫ್ಯಾಕ್ಟರಿ ವ್ಯವಸ್ಥಾಪಕ ನಾಗರಾಜ್ ರಾವ್ ಉದಯವಾಣಿಗೆ ತಿಳಿಸಿದ್ದಾರೆ.