ಪುತ್ತೂರು: ಖಾಸಗಿ ಬಸ್ ಮತ್ತು ಎರಡು ಈಚರ್ ಲಾರಿಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮುಕ್ರಂಪಾಡಿ ಜಂಕ್ಷನ್ನಲ್ಲಿ ಸೋಮವಾರಿ ನಡೆದಿದ್ದು, ಘಟನೆ ಬಳಿಕ ಸ್ಥಳದಲ್ಲಿ ಒಂದು ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಸದಾಶಿವ ಶೆಟ್ಟಿ ಎಂಬವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಅವರ ಕಾಲಿಗೆ ಶಸಚಿಕಿತ್ಸೆ ಮಾಡಲಾಗಿದೆ. ಚಂದ್ರ, ದುರ್ಗಾಪ್ರಸಾದ್, ಸುರೇಂದ್ರ ಮತ್ತು ಸುಬ್ರಹ್ಮಣ್ಯ ಎಂಬವರನ್ನು ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಮಿನಿ ಲಾರಿಗಳಲ್ಲಿದ್ದವರು.
ಪುತ್ತೂರಿನಿಂದ ಪಳ್ಳತ್ತೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮುಕ್ರಂಪಾಡಿಯಲ್ಲಿ ಪ್ರಯಾಣಿ ಕರಿಗಾಗಿ ನಿಂತು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆಯಿತು. ಬಸ್‌ನ ಹಿಂದೆ ಎರಡು ಲಾರಿಗಳು ಬರುತ್ತಿದ್ದು, ಒಂದು ಜಲ್ಲಿ ಹೇರಿಕೊಂಡು ಸುಳ್ಯದ ಕಡೆ ಹೊರಟಿದ್ದರೆ, ಮತ್ತೊಂದು ರದ್ದಿ ಪೇಪರ್ ತುಂಬಿಸಿಕೊಂಡು ಅದೇ ಮಾರ್ಗದಲ್ಲಿ ಹೋಗುತ್ತಿತ್ತು. ವೇಗವಾಗಿ ಬಂದ ಜಲ್ಲಿ ಸಾಗಾಟದ ಮಿನಿ ಲಾರಿ ತನ್ನ ಮುಂದಿದ್ದ ಲಾರಿಗೆ ಮೊದಲು ಡಿಕ್ಕಿ ಹೊಡೆಯಿತು. ಆ ರಭಸಕ್ಕೆ ಮುಂದಕ್ಕೆ ಮುಗ್ಗರಿಸಿದ ಲಾರಿ ತನ್ನ ಮುಂದಿದ್ದ ಬಸ್‌ಗೆ ಹಿಂದಿನಿಂದ ಗುದ್ದಿತು. ಬಸ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಸಣ್ಣ ಪ್ರಮಾಣದಲ್ಲಿ ಜಖಂಗೊಂಡಿದೆ.
ಎರಡನೇ ಲಾರಿ ಮತ್ತು ಮೂರನೇ ಲಾರಿಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಎರಡನೇ ಲಾರಿಯಲ್ಲಿದ್ದ ಇಬ್ಬರು ಮತ್ತು ಮೂರನೇ ಲಾರಿಯಲ್ಲಿದ್ದ ಮೂವರು ಅಲ್ಲೇ ಅಪ್ಪಚ್ಚಿಯಾಗಿ ಗಂಭೀರ ಗಾಯಗೊಂಡರು.
ಸುಮಾರು ಅರ್ಧಗಂಟೆ ಇದೇ ಸ್ಥಿತಿಯಲ್ಲಿ ವಾಹನಗಳಿದ್ದು, ಬಳಿಕ ಜೇಸಿಬಿ ತಂದು ಗಾಡಿಗಳನ್ನು ಎಳೆದ ನಂತರವೇ ಗಾಯಾಳುಗಳನ್ನು ಸಾರ್ವಜನಕರು ಒಳಗಿನಿಂದ ಎಳೆದು ತಂದು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟೂ ಹೊತ್ತು ಲಾರಿಗಳ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಪ್ರಾಣ ಸಂಕಟದಿಂದ ಚೀರುತ್ತಿದ್ದರು. ಗಾಯಾಳುಗಳ ದೇಹದ ಕೆಳಭಾಗ ನಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ.