ಪುತ್ತೂರು: ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿರುವ ಬಿಜೆಪಿಗರು ಮೊದಲು ತಮ್ಮ ಯೋಗ್ಯತೆಯನ್ನು ಅರಿತು ಮಾತ ನಾಡಲಿ. ರಾಜಕೀಯದಲ್ಲಿ ಟೀಕೆ ಸಹಜ. ಆದರೆ ಮಾಜಿ ಉಪಮುಖ್ಯಮಂತ್ರಿಯವರು ಪುತ್ತೂರಿ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ನಿದ್ರಾಮಯ್ಯ’ ಎಂದು ವೈಯಕ್ತಿಕವಾಗಿ ನಿಂದಿಸಿರುವುದು ಸರಿಯಲ್ಲ. ಜೈಲಿಗೆ ಹೋದವರು, ನಿದ್ರಿಸಲು ಇನ್ನೊಬ್ಬರ ಮಂಚಕ್ಕೆ ಹೋದವರು ಮೊದಲು ತಮ್ಮ ಯೋಗ್ಯತೆ ಅರಿತುಕೊಳ್ಳಬೇಕಾಗಿತ್ತು ಎಂದು ಶಾಸಕಿ ಶಕುಂತಳಾ ಶೆಟ್ಟಿ ಟಾಂಗ್ ನೀಡಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ರಾಜ್ಯ ಸರಕಾರಕ್ಕೆ ನಕಲು ಭಾಗ್ಯ ಎನ್ನುವ ಬಿಜೆಪಿಗರು ಜಾರಿಗೆ ತಂದ ಸಕಾಲ ಯೋಜನೆ ಈ ಮೊದಲೇ 13 ರಾಜ್ಯಗಳಲ್ಲಿ ಜಾರಿಯಲ್ಲಿತ್ತು. ಸಿದ್ದರಾಮಯ್ಯ ಧರ್ಮಾರ್ಥವಾಗಿ ಎಲ್ಲರಿಗೂ ಅನ್ನಭಾಗ್ಯ ನೀಡಿದ್ದಾರೆ. ಇದನ್ನು ಸಹಿಸದ ಬಿಜೆಪಿಗರು ಅದಕ್ಕೆ ಜಾತಿ- ಬೇಧದ ಹಣೆಪಟ್ಟಿ ಕಟ್ಟುವ ಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು. ಬಡವರಿಗಾಗಿ ಹಲವು ಯೋಜನೆಗಳನ್ನು ತಂದಿರುವ ರಾಜ್ಯದ ಕಾಂಗ್ರೆಸ್ ಸರಕಾರದ ಸಾಧನೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಧನಾತ್ಮಕ ಪ್ರಭಾವ ಬೀರಲಿದೆ.
ಮನೆ ಇಲ್ಲದವರಿಗೆ 94ಸಿ ಅರ್ಜಿಯಡಿ ಮನೆ ಹಕ್ಕುಪತ್ರ ನೀಡಲಾಗಿದೆ. ಆದರೆ ಇತರ ಪಕ್ಷದವರು ತಪ್ಪುಹುಡುಕುವ ಪ್ರಯತ್ನ ನಡೆಸುತ್ತಾರೆ. ಬಿಜೆಪಿಗರು ತಿಳಿದಿರುವಂತೆ ಕಾಂಗ್ರೆಸ್‌ನ ಭಿನ್ನಮತ ಚುನಾವಣೆಯಲ್ಲಿ ಸಮಸ್ಯೆ ಆಗುವುದಿಲ್ಲ. ಪುತ್ತೂರಿನಲ್ಲಿ ಎಂಎಲ್‌ಎ ಕಾಂಗ್ರೆಸ್‌ನಲ್ಲಿ ಇರುವಾಗ ಪಕ್ಷಕ್ಕೆ ಹಿನ್ನಡೆ ಆಗುವುದು ಸಾಧ್ಯವೇ ಇಲ್ಲ. ಇದುವರೆಗೆ ಯಾವುದೇ ಮೋಸ ಮಾಡಿಲ್ಲ. ಆದ್ದರಿಂದ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪ ಯೋಗಿ ಇಲಾಖೆಗೆ 67 ಕೋಟಿ ರೂ., ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 46 ಕೋಟಿ ರೂ., ಕಂದಾಯ ಇಲಾಖೆಗೆ 64 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಗೆ 13 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 8 ಕೋಟಿ ರೂ., ಶಿಕ್ಷಣ ಇಲಾಖೆಗೆ 6 ಕೋಟಿ ರೂ., ನಿಗಮದಿಂದ ಸಾಲ ಸಹಾಯಧನ 4 ಕೋಟಿ ರೂ., ಮುಜರಾಯಿ ಇಲಾಖೆಗೆ 40 ಲಕ್ಷ ರೂ., ಪೊಲೀಸ್ ವಸತಿ ಗೃಹ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಐಟಿಐ ಕಾಲೇಜು, ಆಶ್ರಯ ವಸತಿ ಸಾಲಮನ್ನಾ, ಪುತ್ತೂರಿಗೆ 9 ಕೋಟಿ ರೂ. ಅಡಿಕೆ ಸಾಲಮನ್ನಾ ಮಾಡಲಾಗಿದೆ. ಬಸವ ವಸತಿ ಯೋಜನೆಯಡಿ 1,300 ಮನೆ ಪುತ್ತೂರಿಗೆ ಮಂಜೂರಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಝಲ್ ರಹೀಂ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದಿನ್ ಹರ್ಷದ್ ದರ್ಬೆ, ಪುಡಾ ಅಧ್ಯಕ್ಷ ಬೆಟ್ಟ ಈಶ್ವರ ಭಟ್ ಉಪಸ್ಥಿತರಿದ್ದರು.