ಪುತ್ತೂರು ದಲಿತ ವಿಧ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣದ ವಿರುದ್ದ ಪ್ರತಿಭಟನೆ
ಮಂಗಳೂರು: ಪುತ್ತೂರಿನ ಕಾಲೇಜ್ ವಿದ್ಯಾರ್ಥಿನಿಯೊಬ್ಬಳನ್ನು ಅದೇ ಕಾಲೇಜಿನ 5 ಮಂದಿ ವಿಧ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರಗೊಳಪಡಿಸಿದ ಕ್ರತ್ಯವನ್ನು ತಾವೇ ವಿಡಿಯೋ ಮಾಡಿ 3 ತಿಂಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸಿದ ಕ್ರತ್ಯವು ದ.ಕ.ಜಿಲ್ಲೆಗೆ ಕಳಂಕಪ್ರಾಯವಾಗಿದೆ.ಕ್ರತ್ಯ ನಡೆಸಿದವರು ಸಂಘಪರಿವಾರ ಪೋಷಿತ ಎಬಿವಿಪಿ ಸಂಘಟನೆಗೆ ಸೇರಿದವರೆಂದು ಸ್ಪಷ್ಟವಿದ್ದರೂ, ಸಂಘಪರಿವಾರ ಹಾಗೂ ಎಬಿವಿಪಿ ಅದನ್ನು ನಿರಾಕರಿಸುತ್ತಿರುವುದು ಅವರ ಅನೈತಿಕ ಹಾಗೂ ಬೇಜವಾಬ್ದಾರಿ ವರ್ತನೆಯಾಗಿದೆ ಎಂದು ಸಿಪಿಐಎಮ್ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ತಿಳಿಸಿದರು.
ಅವರು ದ.ಕ. ಜಿಲ್ಲಾಧಿಕಾರಿಗಳ ಕಚೇರಿಯೆದುರು ಸಿಪಿಐ, ಸಿಪಿಐಎಮ್, ಜೆಡಿ ಎಸ್ ಪಕ್ಷಗಳ ಜಂಟಿ ನೇತ್ರತ್ವದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮುಂದುವರಿಸುತ್ತಾ ಅವರು, ಸಂಘಪರಿವಾರದವರು ಯಾವಾಗಲೂ ಮಹಿಳೆಯರ ಬಗ್ಗೆ ಪಾವಿತ್ರ್ಯದ ಮಾತನಾಡುವವರು ತಮ್ಮದೇ ಬಳಗದ ಯುವಕರು ಸಿಕ್ಕಿಬಿದ್ದಾಗ ಅವರು ತಮ್ಮ ಬಳಗದವರಲ್ಲ ಎನ್ನುತ್ತಿದ್ದಾರೆ. ಬಿಜೆಪಿ ಶಾಸಕರ ಚುನಾವಣೆಯಲ್ಲಿ ಅವರುಗಳು ಭಾಗವಹಿಸಿದ ದಾಖಲೆಗಳಿವೆ. ದೇಶದಲ್ಲಿ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬಂದದ್ದು, ಅವರ ಹಿತೈಷಿಗಳು ನಡೆಸುವ ಪೈಶಾಚಿಕ ಕ್ರತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಸ್ಪಷ್ಟವಾಗಿದೆ. ಆರಂಭದಲ್ಲೇ ಅಪರಾಧಿಗಳನ್ನು ಕ್ಲಪ್ತ ಸಮಯಕ್ಕೆ ಬಂಧಿಸಿದ ಪೋಲೀಸರು ಯಾವ ಒತ್ತಡಗಳಿಗೂ ತಲೆಬಾಗದೆ,ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ, ದ.ಕ.ಜಿಲ್ಲೆಯವರಾದ 3 ಸಂಸದರು ಹಾಗೂ 7 ಬಿಜೆಪಿ ಶಾಸಕರಿದ್ದರೂ ಅತ್ಯಾಚಾರ ಘಟನೆಯನ್ನು ಖಂಡಿಸದಿರುವುದು ಖೇದಕರ. ಬೇರೊಂದು ಸಂಧರ್ಭದಲ್ಲಿ ಸುಳ್ಳು ವರದಿಯನ್ನಾಧರಿಸಿ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಬೊಬ್ಬಿಟ್ಟ ಸಂಸದರು ಈಗೇಕೆ ಸುಮ್ಮನಿದ್ದಾರೆ ಎಂದು ಟೀಕಿಸಿದರು.
ಜಾತ್ಯಾತೀತ ಜನತಾದಳದ ರಾಜ್ಯ ಮುಖಂಡರಾದ ಎಂ.ಬಿ.ಸದಾಶಿವರವರು ಮಾತನಾಡಿ, ಅನ್ಯಾಯ ಭ್ರಷ್ಟಾಚಾರದ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆಂದು ಬೊಬ್ಬೆ ಹೊಡೆಯುವ ಬಿಜೆಪಿ ಮುಖಂಡರ ಕಣ್ಣೆದುರಲ್ಲೇ ನಡೆಯುವ ಅನೈತಿಕ ಹಾಗೂ ಭ್ರಷ್ಟಾಚಾರದ ಕ್ರತ್ಯಗಳಿಗೆ ಅವರು ಕಣ್ಣು ಮುಚ್ಚಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಐಎಮ್ ಮುಖಂಡರಾದ ಕೆ.ಆರ್.ಶ್ರೀಯಾನ್, ಜೆ.ಬಾಲಕ್ರಷ್ಣ ಶೆಟ್ಟಿ,ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ವಾಸುದೇವ ಉಚ್ಚಿಲ್, ಮುನೀರ್ ಕಾಟಿಪಳ್ಳ, ಜಯಂತಿ ಬಿ.ಶೆಟ್ಟಿ, ಯೋಗೀಶ್ ಜಪ್ಪಿನಮೊಗರು,ಸಂತೋಷ್ ಬಜಾಲ್, ಸದಾಶಿವದಾಸ್, ರಾಮಣ್ಣ ವಿಟ್ಲ, ಸಿಪಿಐ ಮುಖಂಡರಾದ ಎಚ್.ವಿ.ರಾವ್,ಬಿ.ಶೇಖರ್ , ಕರುಣಾಕರ್, ಸುರೇಶ್, ಶಿವಪ್ಪ ಕೋಟ್ಯಾನ್, ಭಾರತಿ ಶಂಭೂರು, ಸರಸ್ವತಿ ಮುಂತಾದವರು ಭಾಗವಹಿಸಿದ್ದರು.