ಪುತ್ತೂರು| ಬಸ್ – ರಿಕ್ಷಾ ಢಿಕ್ಕಿ: ಮಹಿಳೆ, ಮಗು ಸ್ಥಳದಲ್ಲೇ ಮೃತ್ಯು
ಪುತ್ತೂರು: ಕೆಎಸ್‍ಆರ್‍ಟಿಸಿ ಬಸ್ಸಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಮಹಿಳೆ ಮತ್ತು ಮಗು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ರಿಕ್ಷಾ ಚಾಲಕ ಗಂಭೀರಗೊಂಡ ಘಟನೆ ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಪು ಎಂಬಲ್ಲಿನ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸಿಗೆ ಪುತ್ತೂರು ಕಡೆಯಿಂದ ಕಬಕ ಕಡೆಗೆ ತೆರಳುತ್ತಿದ್ದ ಕೆದಂಬಾಡಿ ಗುಡ್ಡೆ ಎಂಬಲ್ಲಿನ ನಿವಾಸಿ ಮಹಮ್ಮದ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ರಿಕ್ಷಾ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಚಾಲಕ ಮಹಮ್ಮದ್ ಅವರ ಪತ್ನಿ ಜಮೀಲ(49) ಮತ್ತು ಅವರ ಪುತ್ರಿಯ ಮಗ ತಪ್ಸಿಬ್(5) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ಗಂಭೀರ ಗಾಯಗೊಂಡಿದ್ದು, ಅವರನ್ನು ನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ರಸ್ತೆಯಲ್ಲಿ ಚಲಿಸುತ್ತಿರುವ ರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ನಡುವಿನಲ್ಲಿಯೇ ಮುಂಭಾಗದಿಂದ ಆಗಮಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸಿನ ಎದುರು ಭಾಗಕ್ಕೆ ಉರುಳಿ ಬೀಳುವ ದೃಶ್ಯವು ಪಕ್ಕದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.