Home Mangalorean News Kannada News ಪುತ್ತೂರು: ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್‌ ಸಿಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ

ಪುತ್ತೂರು: ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್‌ ಸಿಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ

Spread the love

ಪುತ್ತೂರು: ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್‌ ಸಿಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ
 

ಪುತ್ತೂರು: ವ್ಯವಹಾರಕ್ಕೆ ಪಡೆದ ಬ್ಯಾಂಕ್‌ ಸಾಲ ಬಾಕಿ ಇರಿಸಿದ್ದು, ಮರುಪಾವತಿಗಾಗಿ ಮನೆಗೆ ಹೋದ ಬ್ಯಾಂಕ್‌ ಸಿಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ ಒಡ್ಡಿದ ಆರೋಪದಡಿ ಇಬ್ಬರ ಮೇಲೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪುತ್ತೂರು ಕೋರ್ಟ್‌ ರೋಡ್‌ನ‌ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ರಿಲೇಷನ್‌ಶಿಪ್‌ ಮ್ಯಾನೇಜರ್‌ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿ ಚೈತನ್ಯ ಎಚ್‌.ಸಿ. ಅವರು ನೀಡಿದ ದೂರಿನಂತೆ ಅಖಿಲೇಶ್ ಮತ್ತು ಕೃಷ್ಣ ಕಿಶೋರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ಬೊಳುವಾರು ಬಳಿ ತಿರುಮಲ ಹೋಂಡಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಬಲ್ನಾಡು ಗ್ರಾಮದ ಉಜಿರ್ಪಾದೆ ನಿವಾಸಿ ಕೀರ್ತಿ ಎನ್ನುವವರು ಅಖಿಲೇಶ್ ಹೆಸರಿನಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ 2 ಕೋಟಿ ರೂ. ಸಾಲ ಮಾಡಿದ್ದು, ಸಾಲ ಮರುಪಾವತಿ ಮಾಡದೇ ಎನ್‌ಪಿಎ ಆಗಿತ್ತು. ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್‌ ನೋಟಿಸ್‌ ಮಾಡಿದ್ದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರಲಿಲ್ಲ ಎನ್ನಲಾಗಿದೆ.

ಈ ಬಗ್ಗೆ ಮೇಲಾಧಿಕಾರಿಗಳ ಮೌಖೀಕ ಆದೇಶದಂತೆ ಬ್ಯಾಂಕ್‌ ಸಿಬಂದಿ ಆಕಾಶ್‌ ಚಂದ್ರಬಾಬು ಮತ್ತು ದಿವ್ಯಶ್ರೀ ಅವರು ಅಖಿಲೇಶ್ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಅಖೀಲೇಶ್‌ ಅವರು ಮನೆಯಲ್ಲಿರಲಿಲ್ಲ. ಬ್ಯಾಂಕ್‌ನವರು ಬಂದ ವಿಚಾರವನ್ನು ಕೀರ್ತಿ ಅವರು ಪತಿ ಅಖೀಲೇಶ್‌ಗೆ ಕರೆ ಮಾಡಿ ತಿಳಿಸಿದ್ದರು.

ಅಖಿಲೇಶ್ ಅವರು ಮನೆಗೆ ಬಂದು ಬ್ಯಾಂಕ್‌ ಸಿಬಂದಿ ಜತೆಗೆ ಮನೆಗೆ ಬಂದಿರುವ ಬಗ್ಗೆ ತಕರಾರು ತೆಗೆದು ಗದರಿಸಿರುವುದು ಮಾತ್ರವಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಬಂದ್‌ ಮಾಡಿ ಬಲವಂತವಾಗಿ ಕೂರಿಸಿದ್ದಾರೆ. ಬಳಿಕ ಕೃಷ್ಣ ಕಿಶೋರ್‌ ಅವರು ಮನೆಗೆ ಬಂದು ದೂರುದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್‌ ತೋರಿಸಿ ಶೂಟ್‌ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಗುರುವಾರ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version