ಪುತ್ತೂರು : ಸುಳ್ಳು ಸುದ್ದಿಗಳನ್ನು ನಂಬುವ ಬದಲು ಸತ್ಯ ಅರಿಯುವ ಕೆಲಸ ನಡೆಯಬೇಕು : ಅಣ್ಣಾಮಲೈ
ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ಸತ್ಯಾಸತ್ಯತೆಯನ್ನು ಕೂಲಕುಂಷವಾಗಿ ಪರಿಶೀಲನೆ ಮಾಡದೆ ಇನ್ನೊಬ್ಬರಿಗೆ ಕಳುಹಿಸುವ ಬದಲು ಅದರ ಸತ್ಯವನ್ನು ಅರಿಯುವ ಪ್ರಯತ್ನ ಮಾಡಿದರೆ ಯುವ ಸಮುದಾಯದಿಂದ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅಭಿಪ್ರಾಯಪಟ್ಟರು.
ಅವರು ಭಾನುವಾರ ಪುತ್ತೂರಿನಲ್ಲಿ ನಡೆದ ಯುವ ವಾಹಿನಿ ಕೆಂದ್ರ ಸಮಿತಿ ಇದರ 32 ನೇ ವಾರ್ಷಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮೂಲು ಸೇರ್ದಿನ ಮಾತೆರೆಗ್ಲಾ ಸೊಲ್ಮೇಲು ಎಂದು ತುಳುವಿನಲ್ಲಿ ಭಾಷಣ ಆರಂಭಿಸಿದ ಅಣ್ಣಾಮಲೈಎ ಅವರು ಬಿಲ್ಲವ ಸಮುದಾಯದ ಪ್ರೇರಣೆ ನಾರಾಯಣಗುರುಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾದ ಯುವ ಜನತೆ ಕೆಲವೊಮ್ಮೆ ಸುಳ್ಳು ಸುದ್ದಿಗಳನ್ನು ನಂಬುವುದರ ಮೂಲಕ ತಪ್ಪು ದಾರಿಯನ್ನು ಹಿಡಿಯಬೇಕಾದ ಪ್ರಸಂಗ ಬರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳೆಲ್ಲವೂ ಸತ್ಯವಾಗಿರುವುದಿಲ್ಲ ಬದಲಾಗಿ ಸುದ್ದಿಯ ನಿಜವಾದ ಸತ್ಯ ಏನು ಎಂದು ಅರಿಯುವ ಕೆಲಸ ಮಾಡಬೇಕು. ಇನ್ನೋಬ್ಬರು ಹೇಳುವುದೇ ಸತ್ಯ ಎನ್ನುವುದನ್ನು ನಂಬುವ ಬದಲು ನಿಜವಾಗಿ ಸತ್ಯ ಏನಿದೆ ಎನ್ನುವುದು ತಿಳಿದುಕೊಂಡು ನಡೆದಾಗ ಸಮಾಜದಲ್ಲಿ ಯಾವುದೇ ರೀತಿಯ ಅಶಾಂತಿಗೆ ಕಾರಣವಾಗಲಾರದು ಎಂದರು.
ಇತರ ದೇಶಗಳಿಗೆ ತುಲನೆ ಮಾಡಿದರೆ ಹೆಚ್ಚು ಯುವಜನರನ್ನು ಹೊಂದಿದ ದೇಶ ಭಾರತವಾಗಿದ್ದು ಆ ಯುವಶಕ್ತಿ ದೇಶದ ಬೆಳವಣಿಗೆಗೆ ಸೂಕ್ತ ರೀತಿಯಲ್ಲಿ ಉಪಯೋಗವಾಗುವುದರಲ್ಲಿ ತಪ್ಪಿ ಬಿದ್ದಿದೆ. ಇಂದಿನ ಯುವಜನತೆ ಹೆಚ್ಚು ಸಮಯ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವಲ್ಲಿ ಮಗ್ನರಾಗಿದ್ದು ಅದೇ ಸಮಯವನ್ನು ದೇಶದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಉಪಯೋಗಿಸಿದಾಗ ದೇಶದ ಬೆಳವಣಿಗೆ ಇನ್ನುಷ್ಟು ಶೀಘ್ರ ರೀತಿಯಲ್ಲಿ ನಡೆಯಲು ಸಾಧ್ಯವಿದೆ. ಪ್ರತಿಯೊಬ್ಬ ಯುವಕರಲ್ಲಿ ಕೂಡ ಸಾಮರ್ಥ್ಯ ಇದ್ದು ಅದನ್ನು ಅರಿತುಕೊಂಡು ಸಮಾಜದ ಅಭಿವೃದ್ಧಿಗೆ ಉಪಯೋಗ ಮಾಡಬೇಕಾಗಿದೆ.
ಇಂದು ವಿದ್ಯಾಭ್ಯಾಸವನ್ನು ಪ್ರತಿಯೊಬ್ಬರು ಕೂಡ ಪಡೆಯುತ್ತಾರೆ ಆದರೆ ಪಡೆದ ವಿದ್ಯಾಭ್ಯಾಸವನ್ನು ಎಷ್ಟರ ಮಟ್ಟಿಗೆ ಉತ್ತಮ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದು ಕೂಡ ಅಷ್ಟೇ ಗಮನಹರಿಸಬೇಕಾದ ವಿಚಾರವಾಗಿದೆ. ನಾವು ಕೇವಲ ವಿದ್ಯಾಭ್ಯಾಸ ಪಡೆದರೆ ಸಾಲದು ಅದನ್ನು ಅರ್ಥೈಸಿಕೊಳ್ಳುವ ಕೆಲಸ ಮಾಡಿದಾಗ ಮಾತ್ರ ನಾವು ಸಮಾಜಕ್ಕೆ ಏನಾದರೂ ವಾಪಾಸು ನೀಡಲು ಸಾಧ್ಯ. ಪ್ರತಿಯೊಬ್ಬ ಯುವಜನತೆ ತನ್ನಲ್ಲಿ ಇರುವ ಸಾಮರ್ಥ್ಯವನ್ನು ಅರಿಯಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಹೆಚ್ ಕೆ ಕೃಷ್ಣಮೂರ್ತಿ ಮಾತನಾಡಿ ಯುವಕರು ಮನಸ್ಸು ಮಾಡಿದರೆ ಒಂದು ಸಮೃದ್ಧ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ ಅದೇ ರೀತಿ ದೇಶವನ್ನು ನಾಶ ಮಾಡಲು ಕೂಡ ಸಾಧ್ಯವಿದೆ. ಸಮೃದ್ಧ ಭಾರತದ ನಿರ್ಮಾಣ ಅಥವಾ ಅದರ ನಾಶ ಎರಡೂ ಆಯ್ಕೆ ಕೂಡ ಯುವಕರಿಗಿದ್ದು ಯುವ ಜನತೆ ದೇಶಕಟ್ಟುವ ಕೆಲಸಕ್ಕೆ ಕೈಜೋಡಿಸುವ ಕೆಲಸ ನಡೆಯಬೇಕಾಗಿದೆ ಎಂದರು.
ನಾರಾಯಣಗುರುಗಳ ತತ್ವದಂತೆ ಶಿಕ್ಷಣ, ಸಂಘಟನೆ ಇಂದು ಹೆಚ್ಚು ಒತ್ತು ನೀಡಬೇಕಾಗಿದ್ದು ಯಾರಿಂದಲೂ ಕದಿಯಲಾರದ ಸಂಪತ್ತಿದ್ದರೆ ಅದು ಶಿಕ್ಷಣ ಆದ್ದರಿಂದ ಸಮುದಾಯ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು
ಇಂದಿನ ಸಮುದಾಯ ಸಮಾಜದಲ್ಲಿನ ಸವಾಲುಗಳನ್ನು ಎದುರಿಸುವ ಕೆಲಸ ಮಾಡಬೇಕಾಗಿದ್ದು ಸಮಾಜವನ್ನು ಒಡೆಯುವ ಕೆಲಸಕ್ಕೆ ಬೆಂಬಲಿಸದೆ ಸಮಾಜವನ್ನು ಒಗ್ಗೂಡಿಸುವ ಕೆಲಸಕ್ಕೆ ಕೈಜೋಡಿಸಬೇಕು. ಯುವಜನರು ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕಾರ್ಯಗಳಿಗೆ ಬಳಸಲು ಕರೆ ನೀಡಿದ ಅವರು ಇತಿಹಾಸ ತಿರುಚುವಂತಹ ಕೆಲಸಗಳಿಗೆ ಯಾವತ್ತೂ ಬೆಂಬಲಿಸದಂತೆ ಮನವಿ ಮಾಡಿದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಅವರು ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಆರ್ಥಿಕ-ಶಿಕ್ಷಣ ತಜ್ಞ ಹಾಗೂ ಉದ್ಯಮಿ ಡಾ. ಸಿ.ಕೆ. ಅಂಚನ್, ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್, ರಂಗಭೂಮಿ ಮತ್ತು ಚಿತ್ರನಟಿ ನವ್ಯ ಪೂಜಾರಿ ಮಾತನಾಡಿದರು.
ಪ್ರಶಸ್ತಿ, ಪುರಸ್ಕಾರ: ಮಣಿಪಾಲದ ರಮೇಶ್ ಎ.ಬಂಗೇರ ಅವರಿಗೆ ಸಾಧನಾ ಶ್ರೀ ಪ್ರಶಸ್ತಿ, ಗೋವಿಂದ ಬಾಬು ಪೂಜಾರಿ ಬೈಂದೂರು ಮತ್ತು ಪ್ರಕಾಶ್ ಅಂಚನ್ ಬಂಟ್ವಾಳ ಅವರಿಗೆ ಯುವ ಸಾಧನಾ ಪ್ರಶಸ್ತಿ , ಸಾಧನಾ ಶ್ರೇಷ್ಠ ಪ್ರಶಸ್ತಿಯನ್ನು ಬೆಳ್ತಂಗಡಿಯ ಗುರುದೇವಾ ವಿವಿಧೋದ್ದೇಶ ಸಹಕಾರಿ ಸಂಘ, ಯುವವಾಹಿನಿ ಸಾಧಕ ಪ್ರಶಸ್ತಿಯನ್ನು ಪ್ರಶಾಂತ ಅನಂತಾಡಿ, ಶಶಿಧರ ಕೋಟ್ಯಾನ್ ಬೆಂಗಳೂರು, ಶ್ರವಣ್ ಪೂಜಾರಿ ಅರ್ಕಬೈಲ್ ಅವರಿಗೆ ನೀಡಲಾಯಿತು. ಡಾಕ್ಟರೇಟ್ ಪಡೆದಿರುವ ಲತಾ ಕೋಟ್ಯಾನ್ ಸುರತ್ಕಲ್, ಶಿಲ್ಪಾಶ್ರೀ ಮಂಗಳೂರು, ಮನೋಹರ ಪುಣಚ ಮತ್ತು ಸಂತೋಷ್ ಉಡುಪಿ ಅವರನ್ನು ಅಭಿನಂದಿಸಲಾಯಿತು. ಯುವವಾಹಿನಿ ಜೀವಮಾನ ಸಾಧಕ ಪ್ರಶಸ್ತಿಯನ್ನು ಬಿ. ತಮ್ಮಯ್ಯ ಅವರಿಗೆ ನೀಡಲಾಯಿತು.
ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಯುವಾಹಿನಿ 35 ಘಟಕಗಳ ಅಧ್ಯಕ್ಷರು ಇದ್ದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕೆ. ಅಂಚನ್ ವರದಿ ವಾಚಿಸಿದರು. ಸಮಾವೇಶದ ನಿರದೇಶಕ ಶಶಿಧರ ಕಿನ್ನಿಮಜಲು ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಹಾಗೂ ನರೇಶ್ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು.