Home Mangalorean News Kannada News ಪುರಸಭೆಯಾಗಿ ಕಾಪು: ಸಚಿವ ಸೊರಕೆ;ಸಮಗ್ರ ಅಭಿವೃದ್ಧಿಗೆ ವಿವಿಧ ಅನುದಾನಗಳ ಬಳಕೆ

ಪುರಸಭೆಯಾಗಿ ಕಾಪು: ಸಚಿವ ಸೊರಕೆ;ಸಮಗ್ರ ಅಭಿವೃದ್ಧಿಗೆ ವಿವಿಧ ಅನುದಾನಗಳ ಬಳಕೆ

Spread the love

ಕಾಪು: ಕಾಪು, ಉಳಿಯಾರಗೋಳಿ, ಮಲ್ಲಾರು ಗ್ರಾಮ ಪಂಚಾಯತ್‌ಗಳ ವಿಲೀನದೊಂದಿಗೆ ಕಾಪು ಪುರಸಭೆಯಾಗಿ ರಚನೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಕಾಪುವಿನ ರಾಜೀವ್ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ಕಾಪು ಪುರಸಭೆ ಘೋಷಣೆಯ ಬಗ್ಗೆ ಅಂತಿಮ ನೋಟಿಫಿಕೇಷನ್ ಹೊರಡಿಸಲಾಗಿದ್ದು, ಈ ಅವಧಿಯಲ್ಲಿ ಸ್ವೀಕೃತವಾಗಿದ್ದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ರಾಜ್ಯ ಸರಕಾರದ ವರದಿಯನ್ನಾಧರಿಸಿ ರಾಜ್ಯಪಾಲರು ಕಾಪು ಪುರಸಭೆ ಘೋಷಣೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿದ್ದು, ರಾಜ ಪತ್ರದಲ್ಲಿ ಆದೇಶವನ್ನು ಹೊರಡಿಸಿದ್ದಾರೆ ಎಂದರು.
ಕಾಪುವಿನ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟ ವಿವಿಧ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಆಗಲಿದೆ. ನಗರಾಭಿವೃದ್ಧಿ ಇಲಾಖೆಯ ಮೂಲಕವಾಗಿ ಈಗಾಗಲೇ 32 ಕೋ. ರೂ. ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಯೋಜನೆ, 51 ಕೋ. ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ, ನಗರೋತ್ಥಾನ ಇಲಾಖೆಯ ಮೂಲಕ 15 ಕೋ. ರೂ. ಅನುದಾನ, ತ್ಯಾಜ್ಯ-ಕಸ ವಿಲೇವಾರಿ ಘಟಕ ನಿರ್ಮಾಣವೂ ಸೇರಿದಂತೆ ನೂತನ ಕಾಪು ಪುರಸಭೆ ನಿರ್ಮಾಣದೊಂದಿಗೆ ಹತ್ತಾರು ಯೋಜನೆಗಳಿಗೆ 100 ಕೋ. ರೂ. ಅಧಿಕ ಮೊತ್ತದ ಅನುದಾನ ಹರಿದು ಬರಲಿದೆ. ಇದಕ್ಕೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಆಗಲಿದೆ ಎಂದರು. ಅಲ್ಲದೆ ಕಾಪುವಿಗೆ ಯೋಜನಾ ಪ್ರಾಧಿಕಾರವನ್ನು ರಚಿಸಲು ಚಿಂತನೆ ನಡೆಸಲಾಗಿದೆ. ಆ ಮೂಲಕ ರಾಜ್ಯಕ್ಕೇ ಮಾದರಿ ಎಂದೆನಿಸಿರುವ ಕಾಪು ಅಭಿವೃದ್ಧಿ ಸಮಿತಿಯನ್ನು ಇದರೊಂದಿಗೆ ಸೇರಿಸಿಕೊಂಡು ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಕಾಪು ತಾಲೂಕು ರಚನೆಗೆ ಒತ್ತಾಯ ಮಾಡಲಾಗುವುದು. ಪುರಸಭೆಯ ಆಡಳಿತ ನಿರ್ವಹಣೆ ಮುಂದಿನ ದಿನಗಳಲ್ಲಿ ನಡೆಯಲಿದ್ದು, ಪ್ರಾಥಮಿಕ ಹಂತದಲ್ಲಿ ಅತೀ ಶೀಘ್ರವಾಗಿ ಪುರಸಭೆಗೆ ಆಡಳಿತಾಧಿಕಾರಿ ಮತ್ತು ಎಂಜಿನಿಯರಿಂಗ್ ವಿಭಾಗಕ್ಕೆ ಅಧಿಕಾರಿಗಳನ್ನು ನೇಮಿಸಲಾಗುವುದು. ಈಗಾಗಲೇ ಮೂಲ್ಕಿಯಲ್ಲಿರುವ ಸಬ್‌ರಿಜಿಸ್ಟ್ರಾರ್ ಪ್ರತ್ಯೇಕಿಸಿ ಈ ಭಾಗದ ಜನರ ಅನುಕೂಲಕ್ಕಾಗಿ ಕಾಪುವಿನಲ್ಲೇ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಈ ಬಾರಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 26ರಲ್ಲಿ 19 ಗ್ರಾಪಂ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಸೇರಲಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಥಳೀಯವಾಗಿ ಕಾರ್ಯಕರ್ತರನ್ನು ಚುನಾವಣೆಗೆ ನಿಲ್ಲಿಸಲಾಗಿದೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡಿಲ್ಲ. ಕಾರ್ಯಕರ್ತರು ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಹೆಚ್ಚು ಪ್ರಚಾರ ಮಾಡಿದ್ದಾರೆ. ಯುಪಿಎ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿರುವುದೇ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ. ಎ. ಗಫೂರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಪಕ್ಷದ ಮುಖಂಡರಾದ ಅಬ್ದುಲ್ ಅಝೀಝ್, ಎಚ್. ಅಬ್ದುಲ್ಲಾ, ವಿಕ್ರಂ ಕಾಪು, ಕಾಪು ದಿವಾಕರ ಶೆಟ್ಟಿ, ಮನ್ಹರ್ ಇಬ್ರಾಹೀಂ, ಎಚ್. ಉಸ್ಮಾನ್, ನಾಗೇಶ್ ಸುವರ್ಣ, ಬಾಲಕೃಷ್ಣ ಶೆಟ್ಟಿ, ಮಾಧವ ಪಾಲನ್, ಶಾಬು ಸಾಹೇಬ್, ಸತೀಶ್ ಶೆಟ್ಟಿ ಮಲ್ಲಾರು, ದೇಜು ಪೂಜಾರಿ, ಮುಹಮ್ಮದ್ ಸಾದಿಕ್, ಅಬ್ದುಲ್ ಹಮೀದ್ ಮೂಳೂರು, ಮೋಹನ್ ಕಾಂಚನ್, ದೇವರಾಜ್ ಕಾಪು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love

Exit mobile version