ಪುರಸಭೆ ಕಾಮಗಾರಿ ಟೆಂಡರ್‌ನಲ್ಲಿ ಒಳ ಒಪ್ಪಂದ ಆರೋಪ- ಅಧ್ಯಕ್ಷರ ರಾಜೀನಾಮೆಗೆ ವಿಕಾಸ್ ಹೆಗ್ಡೆ ಆಗ್ರಹ

Spread the love

ಪುರಸಭೆ ಕಾಮಗಾರಿ ಟೆಂಡರ್‌ನಲ್ಲಿ ಒಳ ಒಪ್ಪಂದ ಆರೋಪ- ಅಧ್ಯಕ್ಷರ ರಾಜೀನಾಮೆಗೆ ವಿಕಾಸ್ ಹೆಗ್ಡೆ ಆಗ್ರಹ

 ಕುಂದಾಪುರ: 3ನೇ ಬಾರಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಶೆಣೈ ಅವರು ಕೇವಲ 1 ತಿಂಗಳ ಒಳಗೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ನೈತಿಕ ಹೊಣೆ ಹೊತ್ತು ಅವರು ಈ ರಾಜೀನಾಮೆ ನೀಡಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೂತನವಾಗಿ ಅಧಿಕಾರ ವಹಿಸಿಕೊಂಡ ಇಲ್ಲಿನ ಪುರಸಭೆಯಲ್ಲಿ ಜನರ ನಿರೀಕ್ಷೆಗೆ ವಿರುದ್ಧವಾಗಿ ಅನುಮಾನ ಹುಟ್ಟಿಸುವ ಬೆಳವಣಿಗೆ ನಡೆಯುತ್ತಿದ್ದು, ಕಳೆದ 17 ತಿಂಗಳಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಲ್ಲದ ಕಾರಣ, ಜನರು ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ಹೇಳಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಇದೀಗ ಅಧಿಕಾರ ವಹಿಸಿಕೊಂಡ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಂದ ಪುರಸಭೆಯ ಸಮಸ್ಯೆಗಳು ಬಗೆಹರಿಯುತ್ತದೆ ಎನ್ನುವ ನಿರೀಕ್ಷೆಗಳು ಸಂಪೂರ್ಣ ಸುಳ್ಳಾಗುವಂತಹ ಬೆಳವಣಿಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಸರ್ಕಾರದ 15ನೇ ಹಣಕಾಸಿನ ಅನುದಾನದಲ್ಲಿ ಗುರುತಿಸಿರುವ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ಹಂಚಿಕೆ ಮಾಡಲು ಅಧಿಕಾರ ಹಿಡಿದಿರುವವರು ವಿಶೇಷ ಆಸಕ್ತಿಯನ್ನು ತೋರುತ್ತಿರುವುದು ಇವರ ಪೊಳ್ಳು ಜನಪರ ನೀತಿಯನ್ನು ಅನಾವರಣ ಮಾಡುತ್ತಿದೆ.

ಪುರಸಭೆಯ ಅತ್ಯಂತ ಹಿರಿಯ ಸದಸ್ಯ ಹಾಗೂ ಪ್ರಸ್ತುತ ಪುರಸಭೆಯ ಅಧ್ಯಕ್ಷರಾಗಿರುವ ಮೋಹನ್‌ದಾಸ್ ಶೆಣೈ ಅವರು, ಸೆ.4 ರಂದು ಸಂಜೆ 6 ಗಂಟೆಗೆ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುತ್ತಿಗೆದಾರರ ಸಭೆ ನಡೆಸಿ,15ನೇ ಹಣಕಾಸಿನ ಅನುದಾನದ ನಿಗದಿತ ಕಾಮಗಾರಿಗಳನ್ನು ತಮಗೆ ಬೇಕಾಗಿರುವ ಗುತ್ತಿಗೆದಾರರಿಗೆ ಹಂಚಿಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆನ್‌ಲೈನ್‌ನಲ್ಲಿ ಇರುವ ಟೆಂಡರ್‌ ಪಾರದರ್ಶಕತೆಯನ್ನು ಮರೆಮಾಚಿ ಗುತ್ತಿಗೆದಾರರಿಗೆ ಎಸ್‌ಆರ್ ದರದಲ್ಲಿಯೇ ಟೆಂಡರ್ ದರವನ್ನು ಹಾಕುವಂತೆ ಮೌಖಿಕ ಸೂಚನೆ ನೀಡಿದ್ದಲ್ಲದೇ, ತನ್ನ ಸೂಚನೆಯನ್ನು ಮೀರಿ ಯಾರಾದರೂ ಕಡಿಮೆ ದರ ನಿಕ್ಕಿ ಮಾಡಿದಲ್ಲಿ ಅಧಿಕಾರಿಗಳಿಗೆ ಹೇಳಿ ಅಂತವರ ಟೆಂಡರ್ ರದ್ದು ಮಾಡುವುದಾಗಿಯೂ ಎಚ್ಚರಿಕೆ ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಪುರಸಭೆಯ ಮೀಟಿಂಗ್ ಹಾಲ್‌ನಲ್ಲಿ ಈ ಅನಧಿಕೃತ ಸಭೆ ನಡೆಯುವಾಗ ಪುರಸಭೆಯ ಬಹುತೇಕ ಸದಸ್ಯರು ಇಲ್ಲ ಎನ್ನುವುದೆ ವಿಶೇಷ. ಅಧ್ಯಕ್ಷರ ಈ ನಡವಳಿಕೆಯಿಂದಾಗಿ ಸದ್ರಿ ಕಾಮಗಾರಿಗಳ ಟೆಂಡರ್‌ಗಳಿಂದ ಪುರಸಭೆ ಹಾಗೂ ಸರ್ಕಾರಕ್ಕೆ ಅಂದಾಜು 20 ಲಕ್ಷ ರೂ. ನಷ್ಟವಾಗಿರುವುದಲ್ಲದೆ, ಮೇಲ್ನೋಟಕ್ಕೆ ಭ್ರಷ್ಟಚಾರ ನಡೆದಿರುವುದು ಕಾಣಿಸುತ್ತಿದೆ. ಈ ಅನಧಿಕೃತ ಸಭೆಯ ನಡವಳಿಗಳನ್ನು ಲೋಕಾಯುಕ್ತ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಬೇಕು ಹಾಗೂ ಸರ್ಕಾರದ ನಿಯಮಾವಳಿಯಂತೆ ಪಾರದರ್ಶಕವಾಗಿ ನಡೆಯದ ಟೆಂಡರ್ ರದ್ದುಪಡಿಸಿ ಪುನ: ನಿಯಮಾನುಸಾರ ಟೆಂಡರ್ ನಡೆಯಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿಕಾಸ್ ಹೆಗ್ಡೆ ಒತ್ತಾಯಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments