ಪೇಜಾವರ ಶ್ರೀಗಳ ಅವಹೇಳನ ಸಹಿಸುವುದಿಲ್ಲ – ಪೆರ್ಣಂಕಿಲ ಶ್ರೀಶ ನಾಯಕ್

Spread the love

ಪೇಜಾವರ ಶ್ರೀಗಳ ಅವಹೇಳನ ಸಹಿಸುವುದಿಲ್ಲ – ಪೆರ್ಣಂಕಿಲ ಶ್ರೀಶ ನಾಯಕ್

  • ಅವಹೇಳನ ಮಾಡಿದವರ ಮೇಲೆ ಪೊಲೀಸರು ಸುಮುಟೋ ಕೇಸು ದಾಖಲಿಸಿ

ಉಡುಪಿ: ವಿಶ್ವಾದ್ಯಂತ ಕೋಟ್ಯಾಂತರ ಭಕ್ತಾಭಿಮಾನಿಗಳನ್ನು ಹೊಂದಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ತೀರಾ ಕೆಳಮಟ್ಟದಲ್ಲಿ ಅವಹೇಳನ ಮಾಡುವ ಘಟನೆಗಳು ನಡೆಯುತ್ತಿರುವ ಅತ್ಯಂತ ಖಂಡನೀಯ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಹೇಳಿದ್ದಾರೆ.

ಉಡುಪಿಯ ಅಷ್ಟ ಮಠಗಳ ಯತಿಗಳ ಪರಂಪರೆಯಲ್ಲಿ ಯಾರೂ ಸಂವಿಧಾನದ ವಿರುದ್ಧ ಮಾತನಾಡಿದ ಉದಾಹರಣೆಗಳಿಲ್ಲ. ಅದರಲ್ಲೂ ಪೇಜಾವರ ಮಠದ ಹಿರಿಯರಾಗಿದ್ದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಂತೂ ಸಂವಿಧಾನದ ಮೇಲೆ ವಿಶೇಷ ಗೌರವವನ್ನು ಹೊಂದಿದ್ದರು, ತಾವೂ ಅದನ್ನು ಪಾಲಿಸುತಿದ್ದರು, ಇತರರೂ ಪಾಲಿಸುವಂತೆ ಹೇಳುತಿದ್ದರು.

ಅವರ ಶಿಷ್ಯೋತ್ತಮರಾದ ಶ್ರೀ ವಿಶ್ವಪ್ರಸನ್ನ ತೀರ್ಥರೂ ಈ ದೇಶದ ಸಂವಿಧಾನಕ್ಕನುಗುಣವಾಗಿ, ಸಂವಿಧಾನದ ಆಶಯದಂತೆ ಸಮಾಜೋದ್ಧಾರಕ್ಕಾಗಿ ಶ್ರಮಿಸುತಿದ್ದಾರೆ. ಅವರ ಆಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣದಲ್ಲಿನ ಶ್ರಮ, ಅಸಂಖ್ಯ ಗೋವುಗಳ ಸೇವೆ, ದಲಿತರಿಗೆ ಭಕ್ತಿ ಮಾರ್ಗದರ್ಶನ, ಅಶಕ್ತರಿಗೆ ಮನೆ ನಿರ್ಮಾಣ, ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ ಸಾಂತ್ವಾನ, ಮಠಮಂದಿರಗಳ ಜೀರ್ಣೋದ್ಧಾರ ಇತ್ಯಾದಿ ಸತತ ಮತ್ತು ನಿರಂತರ ಯಶಸ್ವಿ ಸಾಧನೆಗಳನ್ನು ಸಹಿಸದ ಕೆಲವು ಫಡಪೋಶಿಗಳು ವಿಜಯಪುರದಲ್ಲಿ ಶ್ರೀಗಳ ವಿರುದ್ಧ ತೀರಾ ಅಸಂವಿದಾನಿಕ, ಅಸಂಸದೀಯ, ಕಾನೂನು ಉಲ್ಲಂಘಿತ ಪದಗಳನ್ನು ಬಳಸಿ ಮಾತನಾಡಿರುವುದನ್ನು ಅವರ ಭಕ್ತಕೋಟಿ ಎಂದೂ ಸಹಿಸುವುದಿಲ್ಲ.

ಮನುಷ್ಯನ ಘನತೆಯನ್ನೇ ಅವಹೇಳನ ಮಾಡುವ ಇಂತಹ ಪದಗಳ ಬಳಕೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಇದ್ದಿದ್ದರೇ ಉಗ್ರವಾಗಿ ವಿರೋಧಿಸುತಿದ್ದರು, ಆದರೇ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರು ಆಡಿರುವ ಈ ಅಸಂವಿಧಾನಿಕ ಪದಗಳು ಈ ದೇಶದ ಸಂವಿಧಾನವನ್ನು ರೂಪಿಸಿದ ಅಂಬೇಡ್ಕರ್ ಅವರಿಗೆ ಮಾಡಿರುವ ಘೋರ ಅವಮಾನವಲ್ಲದೇ ಬೇರೆನೂ ಅಲ್ಲ.

ಪೇಜಾವರ ಶ್ರೀಗಳು ತಾವು ಸಂವಿಧಾನದ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ, ಆದರೂ ತುಚ್ಛವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸಮಸ್ತ ಹಿಂದೂ ಸಮಾಜ ಸಹಿಸುವುದಿಲ್ಲ.

ಆದ್ದರಿಂದ ಇನ್ನು ಮುಂದೆ ಪೇಜಾವರ ಶ್ರೀಗಳ ವಿರುದ್ಧವಾಗಲೀ ಹಿಂದೂ ಧರ್ಮದ ವಿರುದ್ಧವಾಗಲಿ ಸುಳ್ಳು ಆರೋಪಗಳನ್ನು ಹೊರಿಸುವುದಾಗಲಿ ಅವಹೇಳನ ಮಾಡುವುದಾಗಿ ಮಾಡಿದರೇ ಶ್ರೀಗಳ ಅಭಿಮಾನಿಗಳು ಸುಮ್ಮನಿರುವುದಿಲ್ಲ

ಹಿಂದೂ ನಾಯಕ ಮೇಲೆ ಇಲ್ಲಸಲ್ಲದ ಕಾರಣಗಳಿಗೆ ಸುಮೋಟೋ ಕೇಸು ಹಾಕುವ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ಉಡುಪಿ ಎಸ್ಪಿ ಅವರು, ಪೇಜಾವರ ಶ್ರೀಗಳ ವಿರುದ್ಧ ಸಾರ್ವಜನಿಕವಾಗಿ ಶಾಂತಿಭಂಗವಾಗುವ ರೀತಿಯಲ್ಲಿ ಬೆದರಿಕೆ ರೀತಿಯಲ್ಲಿ ಮಾತುಗಳನ್ನಾಡುವವರ ಮೇಲೆಯೂ ಸುಮೋಟೋ ಕೇಸು ದಾಖಲಿಸಿ ತಮ್ಮ ಸಂವಿಧಾನಬದ್ದತೆಯನ್ನು ತೋರಿಸಬೇಕು.


Spread the love
Subscribe
Notify of

0 Comments
Inline Feedbacks
View all comments