Home Mangalorean News Kannada News ಪೇಜಾವರ ಸ್ವಾಮೀಜಿ ಕುರಿತ ‘ಎ ಡೇ ವಿತ್ ಸೈಂಟ್ ದೆನ್ ಅಂಡ್ ನೌ’...

ಪೇಜಾವರ ಸ್ವಾಮೀಜಿ ಕುರಿತ ‘ಎ ಡೇ ವಿತ್ ಸೈಂಟ್ ದೆನ್ ಅಂಡ್ ನೌ’ ಚಿತ್ರ ಸಂಪುಟ ಬಿಡುಗಡೆ

Spread the love

ಪೇಜಾವರ ಸ್ವಾಮೀಜಿ ಕುರಿತ ‘ಎ ಡೇ ವಿತ್ ಸೈಂಟ್ ದೆನ್ ಅಂಡ್ ನೌ’ ಚಿತ್ರ ಸಂಪುಟ ಬಿಡುಗಡೆ

ಉಡುಪಿ: ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ವರು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರ ನಾಲ್ಕನೇ ಮತ್ತು ಐದನೇ ಪರ್ಯಾಯದ ಒಂದು ದಿನದ ಚಟುವಟಿಕೆಗಳ ಕುರಿತು ರಚಿಸಿರುವ ‘ಎ ಡೇ ವಿತ್ದ ಸೇಂಟ್ ದೆನ್ ಅಂಡ್ ನೌ’ ಎಂಬ ವಿಶೇಷ ಚಿತ್ರಗಳ ಆಧಾರಿತ ಚಿತ್ರಸಂಪುಟದ ಬಿಡುಗಡೆ ಸಮಾರಂಭ ಶನಿವಾರ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಜರುಗಿತು.

ಚಿತ್ರ ಸಂಪುಟವನ್ನು ಬಿಡುಗಡೆ ಗೊಳಿಸಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ‘ಪೇಜಾವರ ಶ್ರೀಪಾದರಿಗೆ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ವೈಯಕ್ತಿಕ ಮುಖಗಳಿವೆ. ಆ ಮುಖಗಳನ್ನು ಆಸ್ಟ್ರೋ ಮೋಹನ್ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಚಿತ್ರವನ್ನು ನೋಡುವುದು ಮಾತ್ರವಲ್ಲ, ಅದನ್ನು ಧ್ಯಾನಿಸಬೇಕು’ ಎಂದರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ‘ಪೇಜಾವರ ಶ್ರೀಗಳು ಸಂನ್ಯಾಸವನ್ನು ಹುಡುಕಿಕೊಂಡು ಹೋಗಿಲ್ಲ ಅದುವೇ ಅವರನ್ನು ಒಲಿದುಕೊಂಡು ಬಂದಿದೆ. ಅವರು ಇಡೀ ಸಮಾಜದ ಆಸ್ತಿಯಾಗಿದ್ದು, ಮೇರು ವ್ಯಕ್ತಿತ್ವವುಳ್ಳ ಯತಿಗಳಾಗಿದ್ದಾರೆ’ ಎಂದು ಬಣ್ಣಿಸಿದರು.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ ‘ಒಬ್ಬ ವ್ಯಕ್ತಿಗೆ ಮೂರು ಬಗೆಯ ವ್ಯಕ್ತಿತ್ವ ಇದೆ. ಜನರು ನೋಡುವ ವ್ಯಕ್ತಿತ್ವ, ತಾನು ತನ್ನನ್ನು ನೋಡುವ ವ್ಯಕ್ತಿತ್ವ, ನಿಜವಾದ ವ್ಯಕ್ತಿತ್ವ. ಇದರಲ್ಲಿ ಯಾವುದು ನಮ್ಮಲ್ಲಿ ಇದೆ. ಯಾವುದು ಇಲ್ಲ ಎಂಬುವುದನ್ನು ಅರಿತುಕೊಳ್ಳುವುದು ಕಷ್ಟ’ ನನ್ನ ಕೊರತೆ, ದೌರ್ಬಲ್ಯ ಏನೆಂಬುವುದು ನನಗೆ ಗೊತ್ತಿದೆ. ನನಗೆ ಗೊತ್ತಿಲ್ಲದ ಎಷ್ಟೊ ಸಂಗತಿಗಳು ಕೂಡ ಇವೆ. ಅದರ ಬಗ್ಗೆ ಆತ್ಮವಿಮರ್ಶೆ ಮಾಡಬೇಕಾಗಿದೆ’ ಎಂದರು.

ನನ್ನ ಜೀವನದ ಕೆಲವೊಂದು ಕ್ಷಣಗಳನ್ನು ಆಧಾರವಾಗಿಟ್ಟುಕೊಂಡು ಆಸ್ಟ್ರೋ ಮೋಹನ್ ಅವರು ಈ ಚಿತ್ರ ಸಂಪುಟವನ್ನು ಹೊರತಂದಿದ್ದಾರೆ. ಇದಕ್ಕೆ ನಾನು ಅರ್ಹನೆ ಎಂಬುವುದನ್ನು ನಿಶ್ಚಿಯಿಸಬೇಕಾಗಿದೆ. ನನ್ನ ಮೇಲೆ ಇಷ್ಟೊಂದು ಅಭಿಮಾನವನ್ನು ತೋರಿಸು ತ್ತಿದ್ದಾರೆ. ಅದಕ್ಕೆ ಬೇಕಾದ ಅಹರ್ತೆ ನನ್ನಲ್ಲಿ ಉಂಟೋ ಇಲ್ಲವೋ ಗೊತ್ತಿಲ್ಲ. ನನ್ನನ್ನೇ ನಾನು ಕಾಣಬೇಕಾದ ಅನಿವಾರ್ಯತೆ ಇದೆ’ ಎಂದು ಅಭಿಪ್ರಾಯಪಟ್ಟರು.

‘ಆಸ್ಟ್ರೋ ಮೋಹನ್ ಅವರ ಪ್ರತಿಭೆ ಅದ್ಭುತವಾಗಿದೆ. ನಕ್ಸಲ್ ಪ್ರದೇಶದಲ್ಲಿ ನಾನು ಪೂಜೆ ಮಾಡುವ ಸಂದರ್ಭದಲ್ಲಿ ಸೆರೆ ಹಿಡಿದಿರುವ ಚಿತ್ರಗಳು ನನ್ನ ಮನಸ್ಸಿಗೆ ಬಹಳ ಸಂತೋಷ ನೀಡಿವೆ. ಅವರು ಅಂತರರಾಷ್ಟ್ರೀಯ ಸನ್ಮಾನಗಳನ್ನು ಪಡೆಯುವಂತಾಗಲಿ’ ಎಂದು ಹಾರೈಸಿದರು.

ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್. ಪೈ, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಎಂ. ಮೋಹನ್ ಆಳ್ವ, ಮಣಿಪಾಲ್ ಮೀಡಿಯಾ ಗ್ರೂಪ್ನ ಸಿಇಒ ವಿನೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭೂತರಾಜ ಪ್ರಕಾಶನ ಪ್ರಕಾಶಕಿ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರನ್ನು ಕಮಲದ ಹೂವಿನ ಪಲ್ಲಕ್ಕಿ ಮೇಲೆ ಕೂರಿಸಿ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ದರು. ಜನಾರ್ದನ ಕೊಡವೂರು ವಂದಿಸಿದರು. ವಾಸುದೇವ ಭಟ್ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version