Home Mangalorean News Kannada News ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ

ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ

Spread the love

ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ

ಉಡುಪಿ: ರಥಬೀದಿಯ ತುಂಬಾ ಜನಸಾಗರ, ವಿವಿಧ ವೇಷಗಳ ಕುಣಿತದ ಸಂಭ್ರಮ, ಕಟ್ಟಡವೇರಿ ಕೃಷ್ಣನನ್ನು ಕಣ್ತುಂಬಿಕೊಂಡ ಭಕ್ತಾದಿಗಳು, ಮೊಸರು ಕುಡಿಕೆ ಒಡೆಯಲು ಸ್ಪರ್ಧೆ ನಡೆಸಿದ ಗೊಲ್ಲರ ವೇಷಧಾರಿಗಳು, ಜನರನ್ನು ನಿಯಂತ್ರಿಸಲು ಪೋಲಿಸರ ಹರಸಾಹಸ ಇವೆಲ್ಲವೂ ಸೋಮವಾರ ವಿಟ್ಲಪಿಂಡಿ ಸಂಭ್ರಮದಲ್ಲಿ ಉಡುಪಿಯ ರಥಬೀದಿಯಲ್ಲಿ ಕಂಡುಬಂದ ಚಿತ್ರಗಳು.

ಸೋಮವಾರ  ಮುಂಜಾವ ಶ್ರೀಕೃಷ್ಣ-ಮುಖ್ಯಪ್ರಾಣರಿಗೆ ಪರ್ಯಾಯ ಪಲಿಮಾರು  ಶ್ರೀಪಾದರು ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ ಮೆರವಣಿಗೆ ನಡೆಯಿತು.

ಚಿನ್ನದ ರಥದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ಮೂರ್ತಿಯೂ, ಇನ್ನೊಂದು ರಥದಲ್ಲಿ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳ ಉತ್ಸವ ನಡೆಯಿತು.

ಉತ್ಸವದಲ್ಲಿ ಪರ್ಯಾಯ ಪಲಿಮಾರು ಶ್ರೀಪಾದರು ಸೇರಿದಂತೆ, ಅದಮಾರು ಹಿರಿಯ ಮತ್ತು ಕಿರಿಯ ಸ್ವಾಮೀಜಿಗಳು, ಕೃಷ್ಣಾಪುರ ಮಠದ  ಸ್ವಾಮೀಜಿಯವರು ಪಾಲ್ಗೊಂಡಿದ್ದರು.

 ರಥಬೀದಿಯಲ್ಲಿ ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಒಂದೊಂದೇ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಮುಂದೆ ಸಾಗಿದಂತೆ ಮೆರವಣಿಗೆ ಮುಂದೆ ಸಾಗಿತು. ಕೊನೆಯಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು.

ನಗರದ ವಿವಿಧೆಡೆ ನೂರಾರು ಹುಲಿವೇಷಧಾರಿಗಳೂ ಕಂಡು ಬಂದರು. ದಿನವಿಡೀ ವಾದ್ಯಗಳ ಸದ್ದು ಮನೆಮಾಡಿತ್ತು. ವಿಟ್ಲಪಿಂಟಿ ಉತ್ಸವದಲ್ಲಿ ಕೆಲವು ಹುಲಿವೇಷಧಾರಿಗಳು, ಸಾಂಪ್ರದಾಯಿಕ ವೇಷಧಾರಿಗಳು ಕಂಡು ಬಂದರೆ ಉತ್ಸವದ ನಂತರ ರಥಬೀದಿಯ ಹಾಕಿದ ವೇದಿಕೆಯಲ್ಲಿ ಶೀರೂರು ಸ್ವಾಮೀಜಿಗಳ ಸ್ಮರಣಾರ್ಥ ಸೋದೆ ಮಠದ ವತಿಯಿಂದ ಹುಲಿವೇಷಗಳ ಪ್ರದರ್ಶನ ನಡೆಯಿತು.

ವಿಟ್ಲಪಿಂಡಿ ಉತ್ಸವ ಶಾಂತಿ ಸುವ್ಯವಸ್ಥಿತವಾಗಿ ನಡೆಯುವ ಉದ್ದೇಶದಿಂದ ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ಬಿ ನಿಂಬರಗಿ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತು ನಡೆಸಲಾಗಿತ್ತು. ರಥಬೀದಿಯ ಸುತ್ತ ಅಷ್ಟಮಠಗಳ ಸಹಿತ ವಿವಿಧ ಕಟ್ಟಡಗಳಲ್ಲಿ ಪೊಲೀಸ್ ಕಣ್ಗಾವಲು ರಥಬೀದಿಯಲ್ಲಿ ಕೃಷ್ಣಮಠದ ಸುತ್ತಮುತ್ತ ಪೋಲಿಸರ ದಂಡೇ ಬಂದೋಬಸ್ತಿನಲ್ಲಿ ಪಾಲ್ಗೊಂಡಿತ್ತು.


Spread the love

Exit mobile version