‘ಪೊಲಿಟಿಕಲ್ ಆದೇಶ’ ಎಂದ ಸಚಿವ ಜಮೀರ್ ವಿರುದ್ದ ನ್ಯಾಯಾಂಗ ನಿಂದನೆ ದೂರು – ಟಿ ಜೆ ಆಬ್ರಹಾಂ
ಉಡುಪಿ: ಹೈಕೋರ್ಟಿನ ತೀರ್ಪನ್ನು ಪೊಲಿಟಿಕಲ್ ಜಡ್ಜ್ ಮೆಂಟ್ ಎಂದು ಹೇಳಿರುವ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹಿರಿಯ ವಕೀಲ ಟಿ.ಜೆ.ಅಬ್ರಹಾಂ ಹೇಳಿದ್ದಾರೆ.
ಅವರು ಗುರುವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಜಮೀರ್ ನಾಲಿಗೆ ಹರಿಯ ಬಿಟ್ಟಿದ್ದು, ಟ್ರಾನ್ಸ್ಪೋರ್ಟ್ ಸಿಬ್ಬಂದಿಗಳ ಬಳಿ ಮಾತನಾಡಿದ ಹಾಗೆ ಮಾತನಾಡಿದ್ದಾರೆ. ಹೈಕೋರ್ಟ್ ತೀರ್ಪು ಬಗ್ಗೆ ಮಾತನಾಡುವುದು ಅಂದರೆ ಹುಡುಗಾಟನಾ? ರಾಜಕಾರಣದಲ್ಲಿ ಭಾಷಣ ಬಿಗಿದ ಹಾಗೆ ಮಾತನಾಡಿದರೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ನಾಲಿಗೆ ಬಿಗಿಯಿಲ್ಲದೆ ಮಾತನಾಡಿದ್ದು ಸರಿಯಲ್ಲ ಈ ತೀರ್ಪನ್ನು ಪೊಲಿಟಿಕಲ್ ಆದೇಶ ಎಂದು ಹೇಳುತ್ತಾರೆ. ನ್ಯಾಯಾಧೀಶರನ್ನು ರಾಜಕಾರಣಿಗಳ ಲೆವೆಲ್ಲಿಗೆ ಇಳಿಸುತ್ತೀರಾ? ನ್ಯಾಯಾಲಯ ದ ಬಗ್ಗೆ ಭಯ ಭಕ್ತಿ ಬೇಡ್ವಾ ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಗೊತ್ತಿದೆಯಾ ಎಂದು ಪ್ರಶ್ನಿಸಿದ ಅಬ್ರಾಹಾಂ ನನ್ನ ಬಗ್ಗೆ ಮಾತನಾಡಿ ಪರ್ವಾಗಿಲ್ಲ ಆದರೆನ್ಯಾಯಾಲಯದ ಬಗ್ಗೆ ಎಷ್ಟು ಕ್ಯಾಶುಯಲ್ ಆಗಿ ಮಾತಾಡಿರುವುದು ಸರಿಯಲ್ಲ. ಆದ್ದರಿಂದ ಅವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇನೆ. ಇವತ್ತು ಅಥವಾ ನಾಳೆ ಕೇಸ್ ದಾಖಲು ಆಗಲಿದ್ದು ಈಗಾಗಲೇ ಡ್ರಾಫ್ಟಿಂಗ್ ಶುರು ಮಾಡಿದ್ದೇವೆ. ಪ್ರತಿಯೊಬ್ಬರಿಗೂ ನ್ಯಾಯಾಲಯದ ಬಗ್ಗೆ ಭಯ ಬರಬೇಕು ಎಂಬ ಕಾರಣಕ್ಕೆ ನಾನು ಕೇಸು ಮಾಡುತ್ತಿದ್ದೇನೆ ಎಂದು ಹೇಳಿದರು.