Home Mangalorean News Kannada News ಪೊಲೀಸರ ಬಗ್ಗೆ ವ್ಯಕ್ತವಾಗುವ ಅಭಿಪ್ರಾಯಗಳು ಮುಕ್ತವಾಗಿರಲಿ: ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ

ಪೊಲೀಸರ ಬಗ್ಗೆ ವ್ಯಕ್ತವಾಗುವ ಅಭಿಪ್ರಾಯಗಳು ಮುಕ್ತವಾಗಿರಲಿ: ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ

Spread the love

ಪೊಲೀಸರ ಬಗ್ಗೆ ವ್ಯಕ್ತವಾಗುವ ಅಭಿಪ್ರಾಯಗಳು ಮುಕ್ತವಾಗಿರಲಿ: ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ

ಕುಂದಾಪುರ: ಪತ್ರಕರ್ತರು ‘ನಾ ಕಂಡಂತೆ ಪೊಲೀಸ್’ ಎನ್ನುವ ಪ್ರಬಂಧ ಸ್ಪರ್ಧೆ ಆಯೋಜಿಸುವ ಮೂಲಕ ಪೊಲೀಸರ ಬಗ್ಗೆ ಮಕ್ಕಳಲ್ಲಿ ಸದಾಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಪೊಲೀಸರ ಬಗ್ಗೆ ವ್ಯಕ್ತವಾಗುವ ಅಭಿವ್ಯಕ್ತಿ ಮುಕ್ತವಾಗಿರಲಿ. ನಮಗೂ ತಪ್ಪು-ಒಪ್ಪುಗಳನ್ನು ತಿದ್ದಿಕೊಂಡು ಬದಲಾವಣೆ ತಂದುಕೊಳ್ಳಲು, ಇನ್ನಷ್ಟು ಪರಿಣಾಮಕಾರಿಯಾಗಿ ಸಾರ್ವಜನಿಕ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ ಅಭಿಪ್ರಾಯಪಟ್ಟರು.

ಅವರು ಶನಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕುಂದಾಪುರ ತಾಲೂಕಿನ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ನಾ ಕಂಡಂತೆ ಪೊಲೀಸ್’ ಎನ್ನುವ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಪೊಲೀಸರು ಎಂದಿಗೂ ಜನರ ಹಾಗೂ ಸಮಾಜದ ಸೇವೆಗಾಗಿಯೇ ಇದ್ದು, ಸಮಾಜದಲ್ಲಿ ಎಲ್ಲರ ಸಮಸ್ಯೆಯನ್ನು ಬಗೆಹರಿಸಲು ಹಗಲಿರುಳು ದುಡಿಯುತ್ತಾರೆ. ಪೊಲೀಸ್ ವ್ಯವಸ್ಥೆ ಸದಾ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕಾರ್ಯನಿರತವಾಗಿರುತ್ತದೆ. ಪೊಲೀಸರು ಎಂದರೆ ಸಮಾಜದ ಒಂದು ಭಾಗ. ಪೊಲೀಸರ ಬಗ್ಗೆ ಭಯ ಬೇಡ, ಸಾರ್ವಜನಿಕ ವಲಯದಲ್ಲಿ ಉತ್ತಮ ಭಾವನೆ ಮೂಡಿಸುವ ಕೆಲಸ ವಿದ್ಯಾರ್ಥಿ ದಿಸೆಯಿಂದಲೇ ಆದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ‘ನಾ ಕಂಡಂತೆ ಪೊಲೀಸ್’ ವಿಷಯದ ಕುರಿತು ತಾಲೂಕು‌ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಬಂಧ ಸ್ಪರ್ಧೆ ಆಯೋಜಿಸಿರುವುದು ಅರ್ಥಪೂರ್ಣ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿದ್ಯಾಂಗ ಉಪನಿರ್ದೇಶಕ ಗಣಪತಿ ಮಾತನಾಡಿ, ಪತ್ರಕರ್ತರು ಸುದ್ದಿಯೊಂದಿಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದ ಮೂಲಕ ಜತೆ- ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುವ ಕೆಲಸ ಮಾಡಿದ್ದಾರೆ. ಇಂತಹ ಕಾರ್ಯಕ್ರಮ ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸಲು, ಮಾತ್ರವಲ್ಲದೆ ಮಕ್ಕಳು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಜೀವನ ಸಾಗಿಸಲು ಅನುಕೂಲವಾಗಲಿದೆ. ಸರಕಾರಿ ಶಾಲೆಗಳ ಬಗೆಗಿನ ಪತ್ರಕರ್ತರ ಕಾಳಜಿ ನಿಜಕ್ಕೂ ಶ್ಲಾಫನೀಯ ಎಂದವರು ಹೇಳಿದರು.

ಛಾಯಾಗ್ರಾಹಕರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ಜಿ.ಕೆ. ಮಾತನಾಡಿ, ಚಿಕ್ಕಂದಿನಿಂದಲೇ ಪೊಲೀಸರ ಬಗ್ಗೆ ಭಯ ಹುಟ್ಟಿಸುವ ಕೆಲಸ ಆಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದಾದರೂ ಆ ಭಯ ಹೋಗಲಾಡಿಸುವಂತಾಗಲಿ ಎಂದರು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿಜಯ ಪಾಯಸ್, ತಾಲೂಕು ಸಂಘದ ಕೋಶಾಧಿಕಾರಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ರಾಘವೇಂದ್ರ ಪೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಣೇಶ ಬೀಜಾಡಿ ವಂದಿಸಿದರು. ಹಿರಿಯ ಪತ್ರಕರ್ತ ಕೆ.ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರ ತಾಲೂಕಿನ ಸರಕಾರಿ ಪ್ರೌಢಶಾಲೆ ಮತ್ತು ಅನುದಾನಿತ ಸೇರಿದಂತೆ ಒಟ್ಟು 27 ಶಾಲೆಗಳ 99 ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.


Spread the love

Exit mobile version