ಪೊಲೀಸ್ ಇಲಾಖೆಯನ್ನು ಬಿಜೆಪಿ ಕ್ರಯಕ್ಕೆ ಪಡೆದುಕೊಂಡಿಲ್ಲ – ವಿಕಾಸ್ ಹೆಗ್ಡೆ
ಕುಂದಾಪುರ: ಮಲ್ಪೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಗರು ಜಿಲ್ಲಾ ಪೊಲೀಸ್ ಇಲಾಖೆಯನ್ನು ಅವಮಾನಿಸುವತ್ತಿದ್ದು ಪೊಲೀಸ್ ಇಲಾಖೆಯನ್ನು ಬಿಜೆಪಿ ಕ್ರಯಕ್ಕೆ ಕೊಂಡು ಪಡೆದುಕೊಂಡಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಕೆ ವಿಕಾಸ್ ಹೆಗ್ಡೆ ಹೇಳಿದ್ದಾರೆ
ಮಲ್ಪೆಯಲ್ಲಿನ ದಲಿತ ಮಹಿಳೆ ಮೇಲಿನ ಹಲ್ಲೆ ಪ್ರಕರಣವನ್ನು ರಾಜಕೀಯವಾಗಿ ಬಿಜೆಪಿ ನಾಯಕರುಗಳು ಬಳಸಿಕೊಂಡದ್ದೇ ಈ ಎಲ್ಲಾ ಅವಾಂತರಗಳಿಗೆ ಕಾರಣ. ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಕೆ. ಅರುಣ್ ಕುಮಾರ್ ಜಿಲ್ಲೆಯಲ್ಲಿ ಅಧಿಕಾರ ಸ್ವೀಕರಿಸಿದ ದಿನದಿಂದ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಿದೆ, ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ, ಕೋಮು ಗಲಭೆಗಳಲಿಗೆ ಕಡಿವಾಣ ಬಿದ್ದಿದೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಒಬ್ಬ ಖಡಕ್ ಅಧಿಕಾರಿಯಾದುದರಿಂದ ಬಿಜೆಪಿಯವರಿಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬಿಜೆಪಿ ನಾಯಕರದ್ದು ಮೀನುಗಾರ ಬಂಧುಗಳ ಬಗೆಗಿನ ನಿಲುವು ಕೇವಲ ರಾಜಕೀಯ ಲಾಭಕ್ಕಾಗಿ. ಜಿಲ್ಲೆಯಲ್ಲಿ ಮೊಗವೀರ ಸಮಾಜದ ಮದ್ವರಾಜರು, ಮನೋರಮಾ ಮದ್ವರಾಜ್, ಸಭಾಪತಿ, ಪ್ರಮೋದ್ ಮದ್ವರಾಜರನ್ನು ಶಾಸಕರು ಮಾಡಿದ್ದು, ಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ, ಮೀನುಗಾರಿಕೆ ಇಲಾಖೆಯಿದೆ ಅದರ ಮೂಲಕ ಮೀನುಗಾರಿಕೆ ಹಾಗೂ ಮೀನುಗಾರ ಬಂಧುಗಳ ಅಭಿವೃದ್ಧಿ ಮಾಡಬಹುದು ಎಂದು ತೋರಿಸಿಕೊಟ್ಟವರು ಮಾಜಿ ಮೀನುಗಾರಿಕಾ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆಯವರು ಆದರೆ ಕರಾವಳಿಯಲ್ಲಿ ಸತತವಾಗಿ ಅಧಿಕಾರದಲ್ಲಿ ಇರುವ ಬಿಜೆಪಿ ಶಾಸಕರುಗಳು ತಮ್ಮ ಸರ್ಕಾರ ಇರುವಾಗ ಮೀನುಗಾರಿಕೆಗೆ, ಮೀನುಗಾರ ಬಂಧುಗಳಿಗೆ ಮಾಡಿದ ಉಪಕಾರ ಶೂನ್ಯ.
ಇಂದು ಕಾನೂನಿನ ಅಡಿಯಲ್ಲಿ ನಿಶ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ವರಿಷ್ಟಾಧಿಕಾರಿಯವರ ಕರ್ತವ್ಯವನ್ನು ಟೀಕಿಸುವುದು ಬಿಜೆಪಿಯವರ ರಾಜಕೀಯ ದಿವಾಳಿತನವಾಗಿದೆ. ಪೊಲೀಸ್ ವರಿಷ್ಟಾಧಿಕಾರಿಗಳು ಅಂಬೇಡ್ಕರ್ ಕೊಟ್ಟ ಸಂವಿಧಾನ ಅವರಿಗೆ ನೀಡಿದ ಕರ್ತವ್ಯ, ಅಧಿಕಾರ, ಹಕ್ಕುಗಳ ಅಡಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಅಣತಿಯಂತೆ ಕೆಲಸ ಮಾಡಲು ಪೊಲೀಸ್ ಇಲಾಖೆ ಬಿಜೆಪಿಯವರ ಸ್ವಂತ ಇಲಾಖೆಯಲ್ಲಾ. ಸಂವಿಧಾನದ ಮೇಲೆ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ಬಿಜೆಪಿಯವರು ಅಧಿಕಾರ ವರ್ಗದವರಿಗೆ ಅವರ ವೃತ್ತಿ ಧರ್ಮದಡಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿ ಕೊಡಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.