Home Mangalorean News Kannada News ಪೊಲೀಸ್ ಇಲಾಖೆಯಲ್ಲಿ ಕರಾವಳಿ ಯುವ ಜನತೆಯ ಸೇರ್ಪಡೆ ಅಗತ್ಯವಿದೆ- ಎಡಿಜಿಪಿ ಭಾಸ್ಕರ್ ರಾವ್

ಪೊಲೀಸ್ ಇಲಾಖೆಯಲ್ಲಿ ಕರಾವಳಿ ಯುವ ಜನತೆಯ ಸೇರ್ಪಡೆ ಅಗತ್ಯವಿದೆ- ಎಡಿಜಿಪಿ ಭಾಸ್ಕರ್ ರಾವ್

Spread the love

ಪೊಲೀಸ್ ಇಲಾಖೆಯಲ್ಲಿ ಕರಾವಳಿ ಯುವ ಜನತೆಯ ಸೇರ್ಪಡೆ ಅಗತ್ಯವಿದೆ- ಎಡಿಜಿಪಿ ಭಾಸ್ಕರ್ ರಾವ್

ಉಡುಪಿ: ಕರಾವಳಿಯ ಜನತೆ ಹೆಚ್ಚು ಧೈರ್ಯಶಾಲಿಗಳು, ಬುದ್ದಿವಂತರು ಮತ್ತು ಇತರರಿಗೆ ಸ್ಪೂರ್ತಿ ತುಂಬುವಂತಹವರು ಇಂತಹ ಪ್ರದೇಶದ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರೆ, ಇಲಾಖೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಕೆ.ಎಸ್.ಆರ್.ಪಿ ಯ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.

ಅವರು ಗುರುವಾರ ಮಲ್ಪೆಯ ಏಳೂರು ಮೊಗವೀರ ಸಭಾಂಗಣದಲ್ಲಿ, ಕೆ.ಎಸ್.ಆರ್.ಪಿ., ಕರಾವಳಿ ಕಾವಲು ಪಡೆ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ, ಕರಾವಳಿ ತೀರದ ಯುವಕ ಯುವತಿಯರಿಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ನೇಮಕಾತಿಯಲ್ಲಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಕಳೆದ 4-5 ವರ್ಷಗಳಿಂದ ಸ್ಥಳೀಯ ಅಭ್ಯರ್ಥಿಗಳು ನಿರಾಸಕ್ತಿ ತೋರುತ್ತಿದ್ದು, ಇದರಿಂದ ಬೇರೆ ಜಿಲ್ಲೆಯ ಅಭ್ಯರ್ಥಿಗಳು ನೇಮಕಗೊಳ್ಳುತ್ತಿದ್ದು, ಕಾನೂನು ಸುವ್ಯವಸ್ಥೆಯು ಸ್ಥಳೀಯ ವಿಷಯವಾಗಿದ್ದು, ಇದನ್ನು ನಿಭಾಯಿಸಲು ಸ್ಥಳೀಯರ ಅವಶ್ಯಕತೆ ಹೆಚ್ಚಾಗಿರುತ್ತದೆ, ಬೇರೆ ಜಿಲ್ಲೆಗಳಿಂದ ನೇಮಕಗೊಂಡ ಸಿಬ್ಬಂದಿಗಳು ಸ್ಥಳೀಯ ಭಾಷೆ, ಸ್ಥಳಗಳ ಪರಿಚಯ, ಸಂಸ್ಕøತಿ, ಅರಿಯಲು ಕೆಲವು ವರ್ಷಗಳು ಬೇಕಾಗಿದ್ದು, ಅಷ್ಟರಲ್ಲಿ ತಮ್ಮ ತವರು ಜಿಲ್ಲೆಗೆ ವರ್ಗಾವಣೆಯಾಗಿ ಹೋಗುವುದರಿಂದ ಇಲ್ಲಿ ಹುದ್ದೆಗಳು ಖಾಲಿ ಉಳಿಯಲಿದ್ದು, ಕಾನೂನು ಸುವ್ಯವಸ್ಥೆಗೆ ತೊಡಕಾಗಲಿದೆ ಎಂದರು.

ಕರಾವಳಿ ಭಾಗದಲ್ಲಿ 1624 ಪೊಲೀಸ್ ಕಾನ್ಸ್ ಸ್ಟೇಬಲ್, 110 ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳು ಖಾಲಿ ಇದ್ದು, ಪೊಲೀಸ್ ನೇಮಕಾತಿ ಸಂಪೂರ್ಣ ಪಾರದರ್ಶಕತೆಯಿಂದ ನಡೆಯುತ್ತಿದ್ದು, ಯಾವುದೇ ರಾಜಕೀಯ ಒತ್ತಡ, ಶಿಫಾರಸ್ಸು, ಲಂಚ ಹಾಗೂ ಮಧ್ಯವರ್ತಿಗಳಿಗೆ ಅವಕಾಶವಿಲ್ಲ, ಮಧ್ಯವರ್ತಿಗಳು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಿದ ಭಾಸ್ಕರ ರಾವ್, ಈಗಾಗಲೇ ಮಧ್ಯವರ್ತಿಗಳಾಗಿ ಕೆಲಸ ಮಾಡಿದ ವ್ಯಕ್ತಿಗಳ ವಿರುದ್ದ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಇಲಾಖೆಯಲ್ಲಿ ಈ ಹಿಂದಿನಂತೆ ಅತ್ಯಧಿಕ ಕೆಲಸದ ಒತ್ತಡ ಇಲ್ಲ, ಈಗ ವೈಟ್ ಕಾಲರ್ ಕ್ರೈಮ್ ಜಾಸ್ತಿಯಾಗಿದ್ದು, ಬುದ್ದಿವಂತಿಕೆಯಿಂದ ಕೆಲಸ ಮಾಡಬೇಕಿದೆ, ಇಲಾಖೆಯಲ್ಲಿ ಉತ್ತಮ ವೇತನವಿದ್ದು, ಔರಾದಕರ್ ಸಮಿತಿಯ ಶಿಫಾರಸ್ಸುಗಳು ಜಾರಿಗೆ ಬಂದ ನಂತರ ಇನ್ನೂ ವೇತನ ಸೌಲಭ್ಯ ಉತ್ತಮವಾಗಲಿದ್ದು, ಸಿಬ್ಬಂದಿಗಳು ಮತ್ತು ಕುಟುಂಬ ವರ್ಗಕ್ಕೆ ಉಚಿತ ಆರೋಗ್ಯ ಯೋಜನೆ, ಕ್ಯಾಂಟೀನ್ ಸೌಲಭ್ಯ, ಕ್ವಾಟ್ರಸ್ ಸೌಲಭ್ಯ ಸಹ ದೊರೆಯಲಿದೆ ಅಲ್ಲದೇ ಜನಸೇವೆ ಮತ್ತು ದೇಶಸೇವೆ ಮಾಡುವ ಅಮೂಲ್ಯ ಅವಕಾಶ, ನೊಂದವರಿಗೆ ನ್ಯಾಯ ಒದಗಿಸುವ ಅವಕಾಶ ನಿಮ್ಮದಾಗಲಿದ್ದು, ಉದ್ಯೋಗ ಮಾತ್ರವಲ್ಲದೇ ಸಾಹಸ ಜೀವನ ನಡೆಸಲು ಇಲಾಖೆಯಲ್ಲಿ ಸಾದ್ಯವಿದ್ದು, ಒಂದು ವಿಭಾಗದಲ್ಲಿ ಕರ್ತವ್ಯ ಸಾಕಾದಲ್ಲಿ ಇಲಾಖೆಯ ಇತರೆ ವಿಭಾಗಗಳಲ್ಲೂ ಸಹ ಕರ್ತವ್ಯ ನಿರ್ವಹಿಸಬಹುದು ಎಂದು ತಿಳಿಸಿದರು.

ಕರಾವಳಿ ಭಾಗದ ಯುವ ಜನತೆ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಅಗತ್ಯವಿರುವ ದೈಹಿಕ ಮತ್ತು ಲಿಖಿತ ಪರೀಕ್ಷೆಗೆ ಅಗತ್ಯವಿರುವ ತರಬೇತಿ ನೀಡುವ ಕುರಿತಂತೆ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಕರಾವಳಿ ಪೊಲೀಸ್ ಪಡೆ, ಕೆ.ಎಸ್.ಆರ್.ಪಿ ವತಿಯಿಂದ 5-6 ದಿನಗಳ ಉಚಿತ ತರಬೇತಿ ಶಿಬಿರವನ್ನು ಮಲ್ಪೆಯಲ್ಲಿಯೇ ಆಯೋಜಿಸಲಾಗುವುದು ಎಂದು ಭಾಸ್ಕರ ರಾವ್ ತಿಳಿಸಿದರು.

ಪೊಲೀಸ್ ನೇಮಕಾತಿ ಕುರಿತ ಇರುವ ಗೊಂದಲಗಳ ಕುರಿತು ಪ್ರಶ್ನಿಸಿದ ಉದಯ್ ಕೊಮೆ ತೆಕ್ಕಟ್ಟೆ, ಚೈತ್ರಾ ಕಟಪಾಡಿ, ಗೋಪಾಲ ಖಾರ್ವಿ, ಜಯರಾಜ್ ಬೈಂದೂರು ಅವರ ಪ್ರಶ್ನೆಗಳಿಗೆ ಉತ್ತರಿಸಿದ ಭಾಸ್ಕರ್ ರಾವ್, ಇಲಾಖೆಯ ನೇಮಕಾತಿ ಸಂಪೂರ್ಣ ಪಾರದರ್ಶಕವಾಗಿದ್ದು, ಪ್ರತಿಯೊಂದು ಆಯ್ಕೆ ಪ್ರಕ್ರಿಯೆ ಸಹ ವೀಡಿಯೋ ದಾಖಲೀಕರಣ ಮಾಡಲಾಗುತ್ತದೆ, ಅಭ್ಯರ್ಥಿಗಳ ಎತ್ತರ, ತೂಕವನ್ನು ಎಲೆಕ್ಟ್ರಾನಿಕ್ ಯಂತ್ರದ ಮೂಲಕ ಮಾಡಲಾಗುತ್ತಿದ್ದು, ಲಿಖಿತ ಪರೀಕ್ಷೆಯ ಫಲಿತಾಂಶವನ್ನೂ ಕಂಪ್ಯೂಟರೀಕರಣಗೊಳಿಸಿದ್ದು ಯಾವುದೇ ವ್ಯಕ್ತಿಗಳ ಮಧ್ಯ ಪ್ರವೇಶ ಇಲ್ಲವಾಗಿದ್ದು, ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ಈ ಆಯ್ಕೆ ಪಟ್ಟಿಯ ಕುರಿತು ನ್ಯಾಯಾಲಯದಲ್ಲಿ ಸಹ ಯಾವುದೇ ತಡೆ ಇದುವರೆಗೆ ಬಂದಿಲ್ಲ, ನೇಮಕಾತಿ ಕುರಿತಂತೆ ಗ್ರಾಮ ಮಟ್ಟದಲ್ಲಿ ಮತ್ತು ಕಾಲೇಜುಗಳಲ್ಲಿ ಸಹ ಮಾಹಿತಿ ನೀಡುವ ಕಾರ್ಯಕ್ರಮ ಏರ್ಪಡಿಸುವುದಾಗಿ ಹೇಳಿದರು.

ಕಾರ್ಯಕ್ರಮದ ಆದ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಾತನಾಡಿ, ಕಳೆದ ತಿಂಗಳು ಉಡುಪಿಯಲ್ಲಿ ಪೊಲೀಸ್ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಸಹ ಸ್ಥಳೀಯ ಅಭ್ಯರ್ಥಿಗಳು ಬೆರಳಣಿಕೆಯಷ್ಟಿದ್ದು, ಜಿಲ್ಲೆಯಲ್ಲಿ ಪೊಲೀಸ್ ನೇಮಕಾತಿ ಕುರಿತಂತೆ ಹೆಚ್ಚಿನ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಮತ್ತು ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಾಸನ ಕೆ.ಎಸ್.ಆರ್.ಪಿ ಕಮಾಂಡೆಂಟ್ ಕೃಷ್ಣಪ್ಪ, ಮಂಗಳೂರು ಕೆ.ಎಸ್.ಆರ್.ಪಿ ಕಮಾಂಡೆಂಟ್ ಜನಾರ್ಧನ್, ಉಡುಪಿ ಎಎಸ್ಪಿ ಕುಮಾರ ಚಂದ್ರ, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾಶ್ರ್ವನಾಥ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಉಪಸ್ಥಿತರಿದ್ದರು.

ಕರಾವಳಿ ಕಾವಲು ಪಡೆಯ ಇನ್ಸ್‍ಪೆಕ್ಟರ್ ಪ್ರಮೋದ್ ಕುಮಾರ್ ಸ್ವಾಗತಿಸಿದರು, ಉಡುಪಿ ಡಿವೈಎಸ್ಪಿ ಜೈ ಶಂಕರ್ ವಂದಿಸಿದರು. ಕರಾವಳಿ ಕಾವಲು ಪಡೆಯ ಎಎಸೈ ಮನಮೋಹನ್ ನಿರೂಪಿಸಿದರು.


Spread the love

Exit mobile version