Home Mangalorean News Kannada News ಪೊಲೀಸ್ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಜನಪ್ರತಿನಿಧಿಗಳಿಗೆ ಘೇರಾವ್: ಸುಂದರ್ ಮಾಸ್ತರ್ ಎಚ್ಚರಿಕೆ

ಪೊಲೀಸ್ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಜನಪ್ರತಿನಿಧಿಗಳಿಗೆ ಘೇರಾವ್: ಸುಂದರ್ ಮಾಸ್ತರ್ ಎಚ್ಚರಿಕೆ

Spread the love

ಪೊಲೀಸ್ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಜನಪ್ರತಿನಿಧಿಗಳಿಗೆ ಘೇರಾವ್: ಸುಂದರ್ ಮಾಸ್ತರ್ ಎಚ್ಚರಿಕೆ

  • ಕೋಟ ಪೊಲೀಸ್ ಠಾಣೆಯ ಕ್ರೈಂ ಪಿಎಸ್‍ಐ ಸುಧಾ ಪ್ರಭು ವಿರುದ್ದ ಪೊಲೀಸ್ ದೌರ್ಜನ್ಯ ಆರೋಪ
  • ಪೊಲೀಸ್ ಠಾಣೆಯ ಎದುರು ದಸಂಸ, ಜನವಾದಿ, ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
  • ಅಮಾಯಕ ಮಹಿಳೆಯರ ಮೇಲೆ ನಡೆದ ಅಮಾನವೀಯ ಪೊಲೀಸ್ ದೌರ್ಜನ್ಯ ಸಹಿಸಲು ಅಸಾಧ್ಯ: ಟಿ. ಮಂಜುನಾಥ ಗಿಳಿಯಾರ್
  • ಬಾಡಿಗೆ ಗೂಂಡಾಗಳಂತೆ ವರ್ತಿಸಿದ ಮಹಿಳಾ ಅಧಿಕಾರಿ ಪೊಲೀಸ್ ಇಲಾಖೆಗೆ ನಾಲಾಯಕ್: ವಾಸುದೇವ ಮುದೂರು

ಕುಂದಾಪುರ: ಕೂಲಿಕಾರ್ಮಿಕ ಮಹಿಳೆಯರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಶೀಘ್ರವೇ ಈ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಸ್ಪಿ ಕಚೇರಿ ಎದುರು ಹೋರಾಟ ನಡೆಸಿ ಉಸ್ತುವಾರಿ ಸಚಿವರ ಸಹಿತ ಸರಕಾರದ  ಪ್ರತಿನಿಧಿಗಳು ಜಿಲ್ಲೆಗೆ ಬಂದಾಗ ಘೇರಾವ್ ಹಾಕಿ ಕಪ್ಪು ಪಟ್ಟಿ ಪ್ರದರ್ಶಿಸುವ ಮೂಲಕ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಎಚ್ಚರಿಕೆ ನೀಡಿದರು.

   

ಕೂಲಿ ಕಾರ್ಮಿಕ ಮಹಿಳೆಯರಾದ ಆಶಾ ಮತ್ತು ಸುಜಾತ ಎನ್ನುವರ ಮೇಲೆ ಕೋಟ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಪಿ.ಎಸ್.ಐ. ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಶನಿವಾರ ಕೋಟ ಪೊಲೀಸ್ ಠಾಣೆ ಎದುರು ದಲಿತ ಸಂಘರ್ಷ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದಲಿತ ಸಂಘರ್ಷ ಸಮಿತಿಯ ಐಕ್ಯ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಮಂಜುನಾಥ ಗಿಳಿಯಾರ್ ಮಾತನಾಡಿ, ಅಮಾಯಕ ಮಹಿಳೆಯರ ಮೇಲೆ ನಡೆದ ಅಮಾನವೀಯ ಪೊಲೀಸ್ ದೌರ್ಜನ್ಯ ಸಹಿಸಲು ಅಸಾಧ್ಯ. ಇದರಿಂದ ಇಬ್ಬರು ಮಹಿಳೆಯರ ಕುಟುಂಬಿಕರ ಜೀವನ ಕೂಡ ನೋವಲ್ಲಿದೆ. ಕೋಟ ಠಾಣೆಯಲ್ಲಿ ನಡೆದ ಮಹಿಳಾ ದೌರ್ಜನ್ಯ ಅತ್ಯಂತ ಹೇಯ ಕೃತ್ಯವಾಗಿದೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ದಸಂಸ ಮುಂದೆ ಬಂದಿದೆ. ನಮ್ಮ ದಸಂಸ ಹೋರಾಟದ ಶಕ್ತಿ ಪೊಲೀಸ್ ಮೇಲಾಧಿಕಾರಿಗಳಿಗೆ ತೋರಿಸುವ ಕೆಲಸ ಕಾನೂನಾತ್ಮಕವಾಗಿ ಹಾಗೂ ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಜನವಿರೋಧಿ ಅಧಿಕಾರಿಗಳ ಮೇಲೆ ಕ್ರಮ ಶೀಘ್ರ ಆಗಬೇಕು ಎಂದವರು ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಮಾತನಾಡಿ, ಖಾಕಿ ಬಟ್ಟೆ ಹಾಕಿ ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಬೇಕಾಗಿದ್ದು ದೌರ್ಭಾಗ್ಯ. ಹೊಟ್ಟೆಪಾಡಿಗಾಗಿ ಕೆಲಸ ಮಾಡುವ ಮಹಿಳೆಯರ ಅಂತಃಕರಣ ಅರ್ಥಮಾಡಿಕೊಳ್ಳಲಾಗದ, ಬಂಡವಾಳಶಾಹಿಗಳ ಬಾಡಿಗೆ ಗೂಂಡಾಗಳಂತೆ ವರ್ತಿಸುವ ಮಹಿಳಾ ಅಧಿಕಾರಿ ಪೊಲೀಸ್ ಇಲಾಖೆಗೆ ನಾಲಾಯಕ್. ಇಂತವರನ್ನು ಮೇಲಾಧಿಕಾರಿಗಳು ತಕ್ಷಣ ವಜಾ ಮಾಡಬೇಕು. ದಕ್ಷ ಅಧಿಕಾರಿ ಎಂದು ಜಿಲ್ಲೆಯಲ್ಲಿ ಕರೆಸಿಕೊಳ್ಳುವ ಎಸ್ಪಿಯವರು ಹೋರಾಟಗಾರರ ಬಳಿಯೇ ಸಾಕ್ಷಿ ಕೇಳುತ್ತಾರೆ. ಹಿರಿಯ ಅಧಿಕಾರಿಗಳು ಬಡವರಿಗೆ ನ್ಯಾಯ ಒದಗಿಸಿಕೊಡುವ ಮೂಲಕ ಕರ್ತವ್ಯಪ್ರಜ್ಞೆ ಮೆರೆಯಬೇಕು. ಇಲ್ಲವಾದಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ಖಚಿತ ಎಂದರು.

ಈ ಸಂದರ್ಭ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬ್ರಹ್ಮಾವರ ವೃತ್ತನಿರೀಕ್ಷಕ ಪಿ.ಎಂ ದಿವಾಕರ್ ಅವರಿಗೆ ಪ್ರತಿಭಟನಾಕಾರರು ಮನವಿ ನೀಡಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜೊತೆಗೆ, ಸಿ.ಐ.ಟಿ.ಯು.ಹಾಗೂ ಜನವಾದಿ ಮಹಿಳಾ ಸಂಘಟನೆ, ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ದಸಂಸ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಉಡುಪಿ ಜಿಲ್ಲಾ ದಸಂಸ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ಪರಮೇಶ್ವರ ಉಪ್ಪೂರು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಪಡುಕೋಣೆ, ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನ ನಾಡ, ಕುಂದಾಪುರ ತಾಲೂಕು ಅಧ್ಯಕ್ಷೆ ಬಲ್ಕಿಸ್, ಸಾಲಿಗ್ರಾಮ ಘಟಕಾಧ್ಯಕ್ಷೆ ಶಾರದಾ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ವೆಂಕಟೇಶ ಕೋಣಿ, ಸಿಐಟಿಯು ಜಿಲ್ಲಾ ಮುಖಂಡ ಚಂದ್ರಶೇಖರ್, ದಸಂಸ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ತಾ| ಸಂಚಾಲಕ ನಾಗರಾಜ್ ಉಪ್ಪುಂದ, ಬ್ರಹ್ಮಾವರ ತಾ| ಸಂಚಾಲಕ ಶ್ರೀನಿವಾಸ ವಡ್ಡರ್ಸೆ, ಕಾಪು ತಾ| ಸಂಚಾಲಕ ವಿಠ್ಠಲ್, ಹೆಬ್ರಿ ಸಂಚಾಲಕ ದೇವಣ್ಣ ಹೆಬ್ರಿ, ಬೈಂದೂರು ತಾ| ಮಹಿಳಾ ಸಂಘಟನೆಯ ವಿನಯಾ ಮಾಸ್ತಿಕಟ್ಟೆ,  ದಸಂಸ ಸಂಘಟನೆ ಕೋಟ ಸಂಚಾಲಕ ನಾಗರಾಜ ಪಡುಕೆರೆ, ಪ್ರಮುಖರಾದ ಸುರೇಶ್ ಹಕ್ಲಾಡಿ, ಗೋಪಾಲಕೃಷ್ಣ ನಾಡ, ವಿಜಯ ಗಿಳಿಯಾರು, ಗೋವಿಂದ, ಶ್ರೀಧರ್ ಕುಂಜಿಬೆಟ್ಟು, ಕೀರ್ತಿಕುಮಾರ್, ಲಕ್ಷ್ಮಣ್ ಬೈಂದೂರು, ಮಂಜುನಾಥ ಹಳಗೇರಿ, ಶ್ರೀನಿವಾಸ ಮಲ್ಯಾಡಿ, ಭಾಸ್ಕರ ಕೆರ್ಗಾಲು, ಕುಮಾರ ಕೋಟ, ಸುರೇಶ್ ಅಂಪಾರು, ಸತೀಶ್ ರಾಮನಗರ, ಶಿವಾನಂದ, ಮೋಹನ್ ಮೂಡುಬೆಟ್ಟು ಇದ್ದರು.


Spread the love

Exit mobile version