ಮಂಗಳೂರು : ಕೆಲಸಕ್ಕೆ ತಕ್ಕ ವೇತನ, ವಾರಕ್ಕೊಂದು ರಜೆ, ಹಿರಿಯ ಅಧಿಕಾರಿಗಳ ದೌರ್ಜನ್ಯದಿಂದ ಮುಕ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜೂನ್ 4 ರಂದು ಪೊಲೀಸ್ ಸಿಬಂಧಿ ನಡೆಸುತ್ತಿರುವ ರಾಜ್ಯವ್ಯಾಪಿ ಪ್ರತಿಭಟನೆಗೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರ ತಕ್ಷಣ ಪೊಲೀಸ್ ಸಿಬಂಧಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರು ಸಮಾಜದ ಅವಿಭಾಜ್ಯ ಅಂಗ. ಕಾನೂನು ಸುವ್ಯವಸ್ಥೆ ಕಾಪಾಡಲು ಅವಿರತ ಶ್ರಮಿಸುವ ಕೆಲಹಂತದ ಪೊಲೀಸ್ ಸಿಬಂಧಿ ಅಪಾರ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಸಮಯದ ಮಿತಿ ಇಲ್ಲದ ಕರ್ತವ್ಯ ಪಾಲನೆ, ವೇತನಗಳಲ್ಲಿ ತಾರತಮ್ಯ, ನಿಯಮಿತ ರಜಾಗಳ ನಿರಾಕರಣೆ, ಪೊಲೀಸರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹಗಲೂ ರಾತ್ರಿ ದುಡಿತದ ಜೊತೆಯಲ್ಲಿ ಮೇಲಾಧಿಕಾರಿಗಳ ಕಿರುಕುಳದಿಂದ ಮಾನಸಿಕ ಒತ್ತಡಗಳಿಗೆ ಒಳಗಾಗುವ ಪರಿಸ್ಥಿತಿಯಿಂದ ಸಮಾಜದ ಮೇಲೆ ಮತ್ತು ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘ ಕಟ್ಟುವುದು, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಸಂವಿಧಾನ ಬದ್ಧವಾದ ಅವಕಾಶ. ಕರ್ನಾಟಕ ರಾಜ್ಯದ ಪೊಲೀಸರಿಗೂ ಈ ಸಂವಿಧಾನ ಬದ್ಧವಾದ ಹಕ್ಕುಗಳ ನಿರಾಕರಣೆ ಆಗಬಾರದು. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಈ ಹಿಂದೆ ಕೇರಳದ ಕಮ್ಯುನಿಷ್ಟ್ ಸರ್ಕಾರ ಪೊಲೀಸರಿಗೆ ಸಂಘ ಕಟ್ಟುವ ಅವಕಾಶವನ್ನು ನೀಡಿ ಮೇಲ್ಪಂಕ್ತಿಯನ್ನು ಹಾಕಿತ್ತು. ಆದರೆ ಕರ್ನಾಟಕದಲ್ಲಿ ತಮ್ಮ ಮೇಲಾಗುತ್ತಿರುವ ಶೋಷಣೆಯ ವಿರುದ್ಧ ಸಾಮೂಹಿಕ ರಜೆಯ ಮೂಲಕ ಶಾಂತಿಯುತ ಪ್ರತಿಭಟನೆಗೆ ಮುಂದಾದ ಪೊಲೀಸ್ ಸಿಬಂಧಿಗಳನ್ನು ಮೇಲಾಧಿಕಾರಿಗಳ ಮೂಲಕ ಬೆದರಿಸುವ, ಪ್ರತಿಭಟನೆ ಕೈಬಿಡುವಂತೆ ಬಲತ್ಕಾರಿಸುವ ಕೆಲಸಕ್ಕೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿರುವುದು ಬೇಸರದ ಸಂಗತಿ.
ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆಗೆ ಮುಂದಾಗಿರುವ ಪೊಲೀಸ್ ಸಿಬಂಧಿ ಜೊತೆ ಡಿವೈಎಫ್ಐ ರಾಜ್ಯ ಸಮಿತಿ ಧೃಡವಾಗಿ ನಿಲ್ಲಲಿದೆ. ಪೊಲೀಸರು ಯಾವುದೇ ಕಾರಣಕ್ಕೂ ಒತ್ತಡ, ಬೆದರಿಕೆಗಳಿಗೆ ಬಲಿಬಿದ್ದು ತಮ್ಮ ನ್ಯಾಯಯುತ ಬೇಡಿಕೆಗಳಿಂದ ಹಿಂದೆ ಸರಿಯಬಾರದು, ಕರ್ನಾಟಕದ ಯುವಜನತೆ ಪೊಲೀಸರ ಹೋರಾಟವನ್ನು ಬೆಂಬಲಿಸಲಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.