Home Mangalorean News Kannada News ಪೋಲಿಸರ ಕ್ಷಿಪ್ರ ಕಾರ್ಯಾಚರಣೆ: ವೃದ್ಧರನ್ನು ಬೆದರಿಸಿ ಕಾರೊಂದಿಗೆ ಪರಾರಿಯಾದ ನಾಲ್ಕು ಆರೋಪಿಗಳ ಬಂಧನ

ಪೋಲಿಸರ ಕ್ಷಿಪ್ರ ಕಾರ್ಯಾಚರಣೆ: ವೃದ್ಧರನ್ನು ಬೆದರಿಸಿ ಕಾರೊಂದಿಗೆ ಪರಾರಿಯಾದ ನಾಲ್ಕು ಆರೋಪಿಗಳ ಬಂಧನ

Spread the love

ಪೋಲಿಸರ ಕ್ಷಿಪ್ರ ಕಾರ್ಯಾಚರಣೆ: ವೃದ್ಧರನ್ನು ಬೆದರಿಸಿ ಕಾರೊಂದಿಗೆ ಪರಾರಿಯಾದ ನಾಲ್ಕು ಆರೋಪಿಗಳ ಬಂಧನ

ಮಂಗಳೂರು: ಕ್ಷಿಪ್ರ ಕಾರ್ಯಾಚರಣೆಯಲ್ಲಿ ವೃದ್ಧ ದಂಪತಿಯನ್ನು ಹಲ್ಲೆ ನಡೆಸಿ ಮನೆಯಲ್ಲಿ ಕಳ್ಳತನ ನಡೆಸಿ ಕಾರಿನೊಂದಿಗೆ ಪರಾರಿಯಾಗಿದ್ದ ನಾಲ್ಕು ಮಂದಿಯ ತಂಡವನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಧ್ಯಪ್ರದೇಶ ನಿವಾಸಿಗಳಾದ ರಾಜು ಸಿಂಗ್ವಾನಿಯ (24 ವರ್ಷ) ಮಯೂರ್ (30 ವರ್ಷ) ಬಾಲಿ (22 ವರ್ಷ), ವಿಕ್ಕಿ (21 ವರ್ಷ) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 9 ರಂದು ಬೆಳಗ್ಗಿನ ಜಾವ ಸಮಯ ಸುಮಾರು 4-೦೦ ಗಂಟೆಗೆ ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ ಸುಮಾರು 30 ರಿಂದ 40 ವರ್ಷ ಪ್ರಾಯದ 4 ಜನ ಯುವಕರು (ಚೆಡ್ಡಿ ಗ್ಯಾಂಗ್) ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ಶ್ರೀ ವಿಕ್ಟರ್ ಮೆಂಡೋನ್ಸಾ ಎನ್ನುವವರ ಮನೆಯ ಕಿಟಕಿಯ ಗ್ರಿಲ್ ಅನ್ನು ತುಂಡರಿಸಿ ಒಳ ಪ್ರವೇಶಿಸಿ ವಿಕ್ಟರ್ ಮೆಂಡೋನ್ಸಾ ರವರಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ತೀವ್ರ ಗಾಯವನ್ನುಂಟು ಮಾಡಿ ಅವರ ಪತ್ನಿ ಪ್ಯಾಟ್ರಿಸಿಯಾ ಮೆಂಡೋನ್ಸ ರವರಿಗೆ ಕೂಡಾ ಸ್ಕ್ರೂ ಡ್ರೈವರ್ ನಿಂದ ಹೊಡೆದು ಬೊಬ್ಬೆ ಹಾಕದಂತೆ ಹಾಗೂ ಫೋನ್ ಮಾಡದಂತೆ ಬೆದರಿಸಿ ಮನೆಯಲ್ಲಿದ್ದ 3 ಮೊಬೈಲ್ ಫೋನ್ ಗಳನ್ನು ನೆಲಕ್ಕೆ ಬಡಿದು ಜಖಂಗೊಳಿಸಿ ಕಪಾಟಿನ ಲಾಕರ್ ಒಳಗೆ ಇರಿಸಿದ್ದ ಸುಮಾರು 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ರೂ 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3೦೦೦/- ನಗದು ಹಣವನ್ನು ಸುಲಿಗೆ ಮಾಡಿ, ಸದ್ರಿ ಮನೆಯ ವೆರಾಂಡದಲ್ಲಿದ್ದ ಕಾರಿನ ಸಮೇತ ಪರಾರಿಯಾಗಿದ್ದು, ಈ ಬಗ್ಗೆ ಪ್ಯಾಟ್ರ್ರಿಸಿಯಾ ಮೆಂಡೊನ್ಸಾ ರವರು ನೀಡಿದ ದೂರಿನಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯವರು ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದ ಮಾಹಿತಿಯನ್ನು ನಗರ ನಿಸ್ತಂತು ಕೊಠಡಿಗೆ ನೀಡಿದ್ದು, ಮುಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಸದರಿ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದು ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಗುಮಾನಿ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು.

ಕೆ.ಎಸ್.ಅರ್.ಟಿ.ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಬೆಳಗಿನ ಜಾವ ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಅರ್.ಟಿ.ಸಿ ಬಸ್ಸುಗಳ ಮಾಹಿತಿ ಪಡೆಯಲಾಗಿ ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಒಂದು ಕೆ.ಎಸ್.ಅರ್.ಟಿ.ಸಿ ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ 4 ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ತಿಳಿಸಿ, ಸದರಿ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದು, ಅವರ ಮಾಹಿತಿಯಂತೆ ಸದರಿ ಸಮಯ ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್ಸಿನ ಬಗ್ಗೆ ವಿವರ ಪಡೆದು, ಬಸ್ಸು ನಂಬ್ರ ಕೆಎ-19-ಎಫ್-3575 ದ ನಿರ್ವಾಹಕರನ್ನು ಸಂಪರ್ಕಿಸಿ ಅವರು ತಿಳಿಸಿದ ಮಾಹಿತಿಯಂತೆ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಲಾಗಿ, ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಗಳ ತಂಡ ಸಕಲೇಶಪುರ ಸಮೀಪ ಸದರಿ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಅವರುಗಳು ಕೃತ್ಯವೆಸಗಿದ ಬಗ್ಗೆ ಒಪ್ಪಿದ್ದು, ಅವರ ವಶದಲ್ಲಿದ್ದ ಮಂಗಳೂರು ನಗರದಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಗಳು ಹಾಗೂ ಹಣವನ್ನು ಅಮಾನತ್ತು ಪಡಿಸಿ ಉರ್ವಾ ಪೊಲೀಸ್ ಅಧಿಕಾರಿಗಳಿಗೆ ವಶಕ್ಕೆ ನೀಡಿರುತ್ತಾರೆ.

ಈ ಮಿಂಚಿನ ಕಾರ್ಯಾಚರಣೆಯನ್ನು ಕೃತ್ಯ ನಡೆದ ಕೇವಲ 5 ಗಂಟೆ ಗಳ ಒಳಗೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಕಾರ್ಯಾಚರಣೆಯನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್ ಐಪಿಎಸ್ ಹಾಗೂ ಅಪರಾಧ ವಿಭಾಗದ ಡಿಸಿಪಿ ಬಿ.ಪಿ ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ತೋರಟ್, ಉರ್ವಾ ಠಾಣೆಯ ನಿರೀಕ್ಷಕರಾದ ಭಾರತೀ ಜಿ. ರವರ ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣೆಯ ಎಸ್.ಐ ಹರೀಶ ಹೆಚ್.ವಿ , ಅನಿತಾ ಹೆಚ್.ಬಿ, ಎ.ಎಸ್.ಐ ವಿನಯ್ ಕುಮಾರ್, ವೇಣುಗೋಪಾಲ್ ಸಿಬ್ಬಂದಿಗಳಾದ ಪುಷ್ಪರಾಜ್, ಪ್ರಮೋದ್, ನಾರಾಯಣ, ಸತೀಶ್, ಪೀಟರ್, ರಾಮಚಂದ್ರ ವೆಂಕಟೇಶ್, ಅಭಿಷೇಕ್, ಪ್ರಜ್ವಲ್ ರವರು ನಡೆಸಿರುತ್ತಾರೆ.

ಈ ಶೀಘ್ರ ಪತ್ತೆ ಕಾರ್ಯಕ್ಕೆ ಹಾಸನ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಮಹಮ್ಮದ್ ಸುಜೀತಾ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ತಮ್ಮಯ್ಯ ಎಮ್ .ಕೆ , ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಪ್ರಮೋದ್ ಬಿ., ಸಕಲೇಶಪುರ ನಗರ ಪಿ.ಎಸ್.ಐ ಪ್ರಮೋದ್ ಕೆ.ಎಸ್ ಮತ್ತು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಸದಾಶಿವ ತಿಪ್ಪರೆಡ್ಡಿ, ಸಿಬ್ಬಂದಿಗಳಾದ ಖಾದರ್ ಆಲಿ, ಸುನಿಲ್, ಜಗದೀಶ್, ಯೋಗಿಶ್, ಮೂಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ ವಿನಾಯಕ್ ಬಾವಿಕಟ್ಟೆ, ಸಿಬ್ಬಂದಿಗಳಾದ ಹರೀಶೇಖರ್ ಎ.ಎಸ್.ಐ ಕಿಶೋರ್ ಕೋಟ್ಯಾನ್ , ಚಂದ್ರಶೇಖರ್ ಹಾಗೂ ಶಶಿಧರ್ರವರು ಸಹಕರಿಸಿರುತ್ತಾರೆ.


Spread the love

Exit mobile version