ಪೋಷಕರೆ ಎಚ್ಚರ : ಕಾರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳ ಜಾಲಿರೈಡಿಗೆ ಒರ್ವ ಬಲಿ

Spread the love

ಪೋಷಕರೆ ಎಚ್ಚರ : ಕಾರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳ ಜಾಲಿರೈಡಿಗೆ ಒರ್ವ ಬಲಿ

ಬೆಂಗಳೂರು: ಮೂವರು ಅಪ್ರಾಪ್ತ ವಿದ್ಯಾರ್ಥಿಗಳು ಜಾಲಿರೈಡಿಗೆಂದು ಕಾರು ಕೊಂಡೊಯ್ದು ಭೀಕರ ಅಫಘಾತಕ್ಕೆ ಕಾರಣವಾಗಿ ಒಬ್ಬ ವ್ಯಕ್ತಿ ಸಾವಿಗೀಡಾಗಿ ಉಳಿದಿಬ್ಬರು ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಭಾನುವಾರ ನಸುಕಿನ 3 ಗಂಟೆ ಸುಮಾರಿಗೆ ಪ್ರಥಮ ಪಿಯುಸಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಜಾಲಿರೈಡ್‌ಗೆಂದು ಹೋದ ವೇಳೆ ಸಿಲ್ಕ್‌ಬೋರ್ಡ್‌ ಮೇಲುರಸ್ತೆಯಲ್ಲಿ ಭೀಕರ ದುರಂತ ಸಂಭವಿಸಿದ್ದು, ಘಟನೆ ನಡೆದಾಗ ಮೂವರೂ 150 ಕಿಲೋ ಮೀಟರ್‌ ವೇಗದಲ್ಲಿ ಕಾರು ಓಡಿಸುತ್ತಿದ್ದರು ಎನ್ನಲಾಗಿದೆ.

 ಮೃತ ವಿದ್ಯಾರ್ಥಿಯನ್ನು ಉದ್ಯಮಿ ಸಲೀಮ್‌ ಅವರ ಪುತ್ರ ಅರ್ಫಾನ್‌ (16) ಎಂದು ಗುರುತಿಸಲಾಗಿದೆ. ಈತನ ಸ್ನೇಹಿತರಾದ ಗೋವಿಂದರಾಜು ಎನ್ನುವವರ ಪುತ್ರ ಶ್ರೀನಿವಾಸ್‌, ಕೃಷ್ಣಮೂರ್ತಿ ಎನ್ನುವವರ ಪುತ್ರ ಅನಿರುಧ್‌ ಗಾಯಗೊಂಡವರು. ಗೋವಿಂದರಾಜು ಮತ್ತು ಕೃಷ್ಣಮೂರ್ತಿ ಇಬ್ಬರೂ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿದ್ದಾರೆ. ಮೂವರೂ ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿಗಳು.

ಶನಿವಾರ ತಡರಾತ್ರಿಯಲ್ಲಿ ಮೂವರೂ ಮಕ್ಕಳು ಪೋಷಕರು ಮಲಗಿದ ನಂತರ ಮನೆಯಲ್ಲಿದ್ದ ಕಾರು ಎತ್ತಿಕೊಂಡು ಜಾಲಿ ರೈಡ್‌ಗೆಂದು ಎಲೆಕ್ಟ್ರಾನಿಕ್‌ ಸಿಟಿಗೆ ಹೊರಟಿದ್ದರು. ನಸುಕಿನ 3 ಗಂಟೆ ಸುಮಾರಿಗೆ ಅವರು ವಾಪಸ್ಸಾಗುತ್ತಿರುವಾಗ ಅನಾಹುತ ಸಂಭವಿಸಿದೆ. 150 ಕಿಲೋಮೀಟರ್‌ ವೇಗದಲ್ಲಿ ಓಡಿಸುತ್ತಿದ್ದರಿಂದ ಮೂವರೂ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡರು. ಪರಿಣಾಮ ಮೂರೂ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದವು. ಅರ್ಫಾನ್‌ ಚಲಾಯಿಸುತ್ತಿದ್ದ ಸ್ಕೋಡ ಕಾರು ಮೇಲುರಸ್ತೆಯ ವಿಭಜಕಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದರಿಂದ ನೆಲಕ್ಕೆ ಅಪ್ಪಳಿಸಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಕೋಡ ಕಾರು ರಸ್ತೆಯ ಎಡಭಾಗಕ್ಕೆ ಬಿದ್ದರೆ, ಅನಿರುಧ್‌ ಇದ್ದ ಇನ್ನೋವಾ ಕಾರು ಬಲಭಾಗದ ವಿಭಜಕದಿಂದ ಎರಡು ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಅಪ್ಪಳಿಸಿದೆ. ಆ ವೇಳೆ ಅನಿರುಧ್‌ ಕಾರಿನಿಂದ ಹಾರಿ ರಸ್ತೆಯ ಮೇಲೆ ಬಿದ್ದಿದ್ದು, ಎದುರಿಗೆ ಬರುತ್ತಿದ್ದ ಹಾಲಿನ ಟ್ಯಾಂಕರ್‌ಗೆ ಸಿಕ್ಕಿಕೊಳ್ಳಬೇಕಿತ್ತು. ಅದೃಷ್ಟವಶಾತ್‌ ಟ್ಯಾಂಕರ್‌ ಚಾಲಕ ವೇಗವಾಗಿ ಪಕ್ಕಕ್ಕೆ ತಿರುಗಿಸಿದ್ದರಿಂದ ಆಕ್ಸೆಲ್‌ ಕಟ್ಟಾಗಿ ನೆಲಕ್ಕೆ ಉರುಳಿದೆ. ಈ ಕಾರಣದಿಂದ ಉಳಿದಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಆರ್‌.ಹಿತೇಂದ್ರ ಮತ್ತು ಪೂರ್ವ ವಿಭಾಗದ ಡಿಸಿಪಿ ಅಭಿಷೇಕ್‌ ಗೋಯಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಅರ್ಫಾನ್‌ ಮೃತದೇಹವನ್ನು ಶವಪರೀಕ್ಷೆಯ ನಂತರ ಪೋಷಕರಿಗೆ ಒಪ್ಪಿಸಲಾಗಿದೆ.

ಮೂವರೂ ವಿದ್ಯಾರ್ಥಿಗಳ ಬಳಿ ಡ್ರೈವಿಂಗ್‌ ಲೈಸೆನ್ಸ್‌ ಇರಲಿಲ್ಲ. ಆದರೂ ಕಾರನ್ನು ಚಾಲನೆ ಮಾಡಲು ಮಕ್ಕಳಿಗೆ ಕೊಟ್ಟು ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮೂವರೂ ಬಾಲಕರ ಪೋಷಕರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗಾಯಗೊಂಡಿರುವ ಅನಿರುಧ್‌ ಮತ್ತು ಶ್ರೀನಿವಾಸ್‌ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಶನಿವಾರ ರಾತ್ರಿ ಮೂವರು ಅಪ್ರಾಪ್ತ ವಯಸ್ಸಿನವರು ಹೈ ಎಂಡ್‌ ಕಾರುಗಳಲ್ಲಿ ಜಾಲಿ ರೈಡ್‌ ಹೋಗಿದ್ದರು. ಕಾರಿನ ವೇಗ 150 ಕಿಲೋ ಮೀಟರ್‌ ಸ್ಪೀಡ್‌ನಲ್ಲಿ ಇದ್ದುದರಿಂದ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡರು. ಈ ಘಟನೆ ಮಕ್ಕಳ ಕೈಗೆ ಕಾರುಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಗಂಟೆ ಆಗಬೇಕು.


Spread the love