ಪೌರತ್ವ ಕಾಯಿದೆ ಮೂಲಕ ಬಿಜೆಪಿಯು ಹಿಂದೂಗಳ ಬೆನ್ನಿಗೆ, ಮುಸಲ್ಮಾನರ ಎದೆಗೆ ಚೂರಿ ಇರಿದಿದೆ-  ಶಿವಸುಂದರ್

Spread the love

ಪೌರತ್ವ ಕಾಯಿದೆ ಮೂಲಕ ಬಿಜೆಪಿಯು ಹಿಂದೂಗಳ ಬೆನ್ನಿಗೆ, ಮುಸಲ್ಮಾನರ ಎದೆಗೆ ಚೂರಿ ಇರಿದಿದೆ-  ಶಿವಸುಂದರ್

ಉಡುಪಿ: ಪೌರತ್ವ ತಿದ್ದುಪಡಿ ಕಾಯ್ದೆ ಮುಸಲ್ಮಾನರಿಗೆ ನೇರವಾಗಿ ಚೂರಿ ಹಾಕಿದರೆ ಹಿಂದೂಗಳ ಬೆನ್ನಿಗೆ ಪರೋಕ್ಷವಾಗಿ ಇರಿಯುತ್ತದೆ ಎಂದು ಸಾಮಾಜಿಕ ಹೋರಾಟಗಾರ, ಚಿಂತಕ ಶಿವಸುಂದರ್ ಎಚ್ಚರಿಕೆ ನೀಡಿದರು.

ಅವರು ಗುರುವಾರ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಪುರಭವನದಲ್ಲಿ ಆಯೋಜಿಸಿದ್ದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳಾಗಿರುವ  ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್  ಕುರಿತು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಯ್ದೆ ಪ್ರಕಾರ ಈ ದೇಶದ ಮುಸಲ್ಮಾನರು ವಲಸೆಗಾರರಲ್ಲ. ಹಿಂದೂಗಳು ಈ ದೇಶದ ಮೂಲ ನಿವಾಸಿಗಳೆಂದು ಸಾಬೀತು ಮಾಡಬೇಕಾಗುತ್ತದೆ. ಹೀಗಾಗಿ ಎಲ್ಲರೂ ಇದನ್ನು ವಿರೋಧಿಸುವ ಅಗತ್ಯ ಇದೆ ಎಂದರು. ಮುಸಲ್ಮಾನರಿಗೆ ನೇರ ಚೂರಿ ಇರಿಯುವ ಈ ಮಸೂದೆ, ಹಿಂದೂಗಳ ಬೆನ್ನಿಗೆ ಚೂರಿ ಇರಿಯುತ್ತದೆ ಎಂದರು.

ಎನ್‌.ಆರ್‌.ಸಿಗೂ ಸಿಎಎಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಆದರೆ ನೇರ ಸಂಬಂಧ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದೆ ಚುನಾವಣಾ ಭಾಷಣದಲ್ಲೇ ಹೇಳಿರುವ ದಾಖಲೆಯಿದೆ. ಕಾಯ್ದೆ ವಿರುದ್ಧ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ವಿರೋಧ ಪಕ್ಷದ ಮತದಾರರ ಪೌರತ್ವವನ್ನೇ ಕಿತ್ತುಕೊಂಡು ಬಿಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಎನ್‌ಆರ್‌ಸಿ ಮತ್ತು ಸಿಎಎ ಜಾತಿ ತಾರತಮ್ಯದಿಂದ ಕೂಡಿದೆ. ಬೇರೆಲ್ಲ ಧರ್ಮಗಳಿಗೆ ವಿನಾಯಿತಿ ಇದೆ. ಮುಸಲ್ಮಾನರಿಗೆ ಇದರಲ್ಲಿ ಇಲ್ಲ. ಇಸ್ರೇಲ್ ಮಾದರಿಯಲ್ಲಿ ಒಡೆದು ಆಳುವ ನೀತಿಯನ್ನು ಕೇಂದ್ರ ಸರಕಾರ ಅನುಸರಿಸುತ್ತಿದೆ ಎಂದರು.

ಧರ್ಮದ ಆಧಾರದ ಮೇರೆಗೆ ತಾರತಮ್ಯ ಎಸಗುವ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿದೆ. ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುವ ಹೋರಾಟ ಸ್ವಾತಂತ್ರ್ಯ ಚಳುವಳಿಯ ರೂಪದಲ್ಲಿ ಇರಬೇಕು. ಪ್ರಜಾತಾಂತ್ರಿಕ ರಾಷ್ಟ್ರಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಅವಕಾಶವಿಲ್ಲ. ಪೌರತ್ವ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅದನ್ನು ಸರ್ಕಾರವೇ ನೀಡಬೇಕು. ಪೌರತ್ವ ಸಾಬೀತು ಪಡಿಸಲು ಕಾಯ್ದೆಯು ಪ್ರತಿಯೊಬ್ಬರ ದಾಖಲೆ ಕೇಳುತ್ತಿದೆ. ಸರ್ಕಾರಿ ಕಚೇರಿಗಳ ಎದುರು ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಇಂತಹ ದಯನೀಯ ಸ್ಥಿತಿಯನ್ನು ಕೇಂದ್ರ ಸರ್ಕಾರ ತಂದೊಡ್ಡಿದೆ ಎಂದರು.

ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ, ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಮಾತನಾಡಿ ಕೇಂದ್ರ ಸರ್ಕಾರ ನಿರುದ್ಯೋಗ, ಹಣದುಬ್ಬರ ಮೊದಲಾದ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸಿಎಎ ಕಾನೂನು ಜಾರಿ ಮಾಡಿದ್ದು, ನ್ಯಾಯಾಲಯ, ಪೆÇಲೀಸ್ ಅಥವಾ ಆಡಳಿತದಿಂದ ನಮಗೆ ನ್ಯಾಯ ಸಿಗುವ ಭರವಸೆ ಇಲ್ಲ. ಹೀಗಾಗಿ ಕಾನೂನನ್ನು ಅಹಿಂಸಾತ್ಮಕವಾಗಿ ವಿರೋಧಿಸಬೇಕು.

ಭಾರತವೆಂದರೆ ಕೇವಲ ಭೂಮಿಯ ತುಂಡಲ್ಲ. ಎಲ್ಲಾ ಭಾಷೆ, ಧರ್ಮ, ಸಂಸ್ಕøತಿಯ ಜನರು ವಾಸಿಸುವ ವೈವಿಧ್ಯಮಯ ದೇಶ. ಇದರ ಹೊರತು ದೇಶಕ್ಕೆ ಬೇರೆ ಅಸ್ತಿತ್ವವಿಲ್ಲ. ಎನ್‍ಆರ್‍ಸಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ. ಆದಿವಾಸಿಗಳು ಜನ್ಮಪ್ರಮಾಣಪತ್ರವನ್ನು ಎಲ್ಲಿಂದ ತರಲು ಸಾಧ್ಯ. ಹೀಗಾಗಿ ಸಾರ್ವಜನಿಕರು  ಎನ್‍ಆರ್‍ಸಿ, ಎನ್‍ಪಿಆರ್ ಬಹಿಷ್ಕರಿಸಬೇಕು. ಯಾವುದೇ ಮಾಹಿತಿ ನೀಡಬಾರದು. ಸರ್ಕಾರ ಕಾನೂನುಕ್ರಮ ಕೈಗೊಂಡರೆ ಅದನ್ನು ಎದುರಿಸಲೂ ಸಿದ್ಧರಾಗಿರಬೇಕು ಎಂದರು.

ಕೆ.ಪಿ.ಸಿ.ಸಿ.ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಇವರುಗಳು ಆಧುನಿಕ ಭಸ್ಮಾಸುರರಾಗಿ ದೇಶಕ್ಕೆ ವಕ್ಕರಿಸಿದ್ದಾರೆ. 2014-19 ರಲ್ಲಿ ದೇಶದ ಜನತೆಗೆ ನೀಡಿದ್ದ ಭರವಸೆಗಳನ್ನೆ ಇನ್ನು ಈಡೇರಿಸಲು ಆಗದ ಇವರು ತಮ್ಮ ಹುಳಕು ಮುಚ್ಚಿಕೊಂಡು ಜನರ ಗಮನವನ್ನು ಬೇರೆಡೆ ಸೆಳೆಯಲು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತಂದಿದ್ದಾರೆಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್, ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಆರ್‍ಜಿಪಿಎಸ್ ಸಂಚಾಲಕ ರಂಗಸ್ವಾಮಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸಂಯೋಜಕಿ ರೋಶನಿ ಒಲಿವೇರಾ ಸ್ವಾಗತಿಸಿ, ವೆರೋನಿಕಾ ಕರ್ನೇಲಿಯೋ, ಡಾ| ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love