ಪೌರತ್ವ ಕಾಯ್ದೆ; ಮಂಗಳೂರಿನಲ್ಲಿ ರಸ್ತೆ ತಡೆಗೆ ಯತ್ನಿಸಿದ ಸಿ.ಎಫ್.ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿರ್ವಸಿಟಿ ವಿದ್ಯಾರ್ಥಿಗಳ ಮೇಲೆ ಪೋಲಿಸರು ಎಸಗಿದ ದೌರ್ಜನ್ಯದ ವಿರುದ್ದ ದೇಶದಾದ್ಯಂತ ವಿದ್ಯಾರ್ಥಿ ಸಮುದಾಯವನ್ನು ಕೆರಳಿಸುವಂತೆ ಮಾಡಿದೆ.
ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿರ್ವಸಿಟಿ ವಿದ್ಯಾರ್ಥಿಗಳ ಮೇಲೆ ಪೋಲಿಸರು ಎಸಗಿದ ದೌರ್ಜನ್ಯ ಖಂಡಿಸಿ ಮಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಸೋಮವಾರ ಆಯೋಜಿಸಿದ್ದ ಪ್ರತಿಭಟನೆ ವೇಳೆ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ವಶಕ್ಕೆ ಪಡೆದಿದ್ದಾರೆ.
ಜಾಮಿಮಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಎಸಗಿದ ದೌರ್ಜನ್ಯವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಸೋಮವಾರ ಸಂಜೆ ನಗರದ ಬಲ್ಮಠದಲ್ಲಿರುವ ಕಲೆಕ್ಟರ್ ಗೇಟ್ ಬಳಿ ರಸ್ತೆ ತಡೆ ನಡೆಸಿದರು. ಈ ಸಂದರ್ಭ ಪೊಲೀಸರು ಸುಮಾರು 50ಕ್ಕೂ ಅಧಿಕ ಸಿಎಫ್ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿ ವಶಕ್ಕೆ ತೆಗೆದುಕೊಂಡರು.
ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳ ಮೇಲೆ ನಡೆಸಿದ ಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಲು ಸಿಎಫ್ಐ ಕಾರ್ಯಕರ್ತರಿಗೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ರಸ್ತೆ ನಡೆಸಲು ನಿರ್ಧರಿಸಿದರು. ಅದರಂತೆ ಖಾಸಗಿ ಬಸ್ಸೊಂದರಲ್ಲಿ ಆಗಮಿಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ದಿಲ್ಲಿಯ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದು, ಇದು ಜಂತರ್ ಮಂತರ್ ನಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ ಮೆರವಣಿಗೆ ನಂತರ ಹಿಂಸಾಚಾರ ಆರಂಭಗೊಂಡಿತ್ತು. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ತಾರಕಕ್ಕೇರಿದ ವೇಳೆ ಬಸ್ ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಕಲ್ಲು ತೂರಾಟದಲ್ಲಿ ಪೊಲೀಸರು, ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಘಟನೆ ನಂತರ ಪ್ರತಿಭಟನೆ ದೇಶದ ವಿವಿಧೆಡೆಗೂ ಹಬ್ಬಿತ್ತು.