Home Mangalorean News Kannada News ಪೌರತ್ವ ವಿರೋಧಿ ಹೋರಾಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾಥ್ ನೀಡಿದ ಉಡುಪಿಗರು

ಪೌರತ್ವ ವಿರೋಧಿ ಹೋರಾಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾಥ್ ನೀಡಿದ ಉಡುಪಿಗರು

Spread the love

ಪೌರತ್ವ ವಿರೋಧಿ ಹೋರಾಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾಥ್ ನೀಡಿದ ಉಡುಪಿಗರು

ಉಡುಪಿ: ಮಂಗಳೂರಿಗಷ್ಟೇ ಸೀಮಿತವಾಗಿದ್ದ ಪೌರತ್ವ ವಿರೋಧಿ ಕಿಚ್ಚು ಈಗ ಉಡುಪಿಗೂ ಹಬ್ಬಿದೆ. ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಿಎಎ ವಿರುದ್ಧ ನಡೆದ ಸಮಾವೇಶದಲ್ಲಿ ಸಾವಿರಾರು ಜನ ಪ್ರಗತಿಪರರು ,ಸಮಾನಮನಸ್ಕ ಸಂಘಟನೆಗಳು ,ದಲಿತ ಸಂಘಟನೆಗಳು ,ಮುಸ್ಲಿಂ ಸಂಘಟನೆಗಳು ಭಾಗಿಯಾದವು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಈ ವೇಳೆ ಪ್ರಧಾನಿ ಮೋದಿಯನ್ನು ಅಭಿನಂದಿಸಿದರು .ಇವತ್ತು ದೇಶದ ಎಲ್ಲಿ ನೋಡಿದ್ರೂ ರಾಷ್ಟ್ರಧ್ವಜ ಕಾಣಿಸ್ತಿದೆ.ಸ್ವಾತಂತ್ರ್ಯ ಕಾಲದಲ್ಲಂತೂ ನಾವು ಇರಲಿಲ್ಲ.ಈಗ ನಾವು ಸಾಯೋ ಕಾಲಕ್ಕೆ ಇಷ್ಟು ಧ್ವಜಗಳನ್ನು ನೋಡುವ ಅವಕಾಶವಾಗಿದೆ ಎಂದು ಕುಟುಕಿದರು. ನಮಗೆ ಕೇಸರಿ ಬಟ್ಟೆ, ಧ್ವಜ ನೋಡಿ ನೋಡಿ ಸಾಕಾಗಿತ್ತು. ಆದರೆ ಈಗ ರಾಷ್ಟ್ರಧ್ವಜ ನೋಡುವ ಭಾಗ್ಯ ಒದಗಿ ಬಂದಿದೆ ಎಂದರು. ಮುಸಲ್ಮಾನರನ್ನು ಅನುಮಾನದಿಂದ ನೋಡಬೇಡಿ ಎಂದು ಮನವಿ ಮಾಡಿದ ರಮೇಶ್ ಕುಮಾರ್ , ಹಾಗೆ ಮಾಡಿದರೆ ಭಾರತ ಮಾತೆ ಕಣ್ಣೀರು ಹಾಕುತ್ತಾಳೆ. ಮುಸಲ್ಮಾನರು ಕೂಡ ಭಾರತ ಮಾತೆಯ ಮಕ್ಕಳು.ಆದರೆ ಬಿಜೆಪಿಯವರಿಗೆ ಭಾರತದ ಇತಿಹಾಸದ ಪರಿಚಯ ಇಲ್ಲ. ಭಾರತದ ಇತಿಹಾಸ ಬಿಜೆಪಿಗರಿಗೆ ಬೇಕಾಗಿಯೂ ಇಲ್ಲ ಎಂದರು.

ನಾವು ಗೋಡ್ಸೆ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸಲು ಬಿಡಲ್ಲ ಎಂದ ರಮೇಶ್ ಕುಮಾರ್,ಅಮೇರಿಕಾದಲ್ಲಿ ಜನಿಸಿದ್ರೆ ಪೌರತ್ವ ಸಿಗುತ್ತದೆ.ಆದರೆ ಇಲ್ಲಿ ಜನರನ್ನೇ ಬೀದಿಗೆ ತರಲಾಗಿದೆ ಎಂದರು.1955 ರಲ್ಲಿ ಜಾತಿ ಧರ್ಮದ ಆಧಾರದಲ್ಲಿ ಪೌರತ್ವ ಕಾಯ್ದೆ ಮಾಡಿರಲಿಲ್ಲ.ನಿರಾಶ್ರಿತರು ಮತ್ತು ನುಸುಳುಕೋರರು ಎಂಬ ಎರಡು ವಿಧ ಇದೆ.ಈಗ ಕೇಂದ್ರ ಸರಕಾರ ಕಾಯ್ದೆಯನ್ನು ಧರ್ಮಾಧಾರಿತವಾಗಿ ಮಾಡಿದೆ ಎಂದರು.ಮೋದಿ ಸರಕಾರ ಸಂವಿಧಾನ ವಿರೋಧಿ ಎಂದು ತಿವಿದ ಮಾಜಿ ಸ್ಪೀಕರ್,ಸ್ವಾತಂತ್ರ್ಯ ನಂತರ ಸಂವಿಧಾನ ಮತ್ತು ಜನರ ನಡುವೆ ತಿಕ್ಕಾಟ ಶುರುವಾಗಿದೆ.ಆದರೆ ದೇಶದ ಜಾತಕವನ್ನು ಜನ ಬದಲು ಮಾಡುತ್ತಾರೆ ಎಂದು ಗುಡುಗಿದರು.

ಜೆ ಎನ್ ಯು ಮಾದರಿಯಲ್ಲಿ ಪ್ರತಿಭಟನೆ ಆಯೋಜಿಸಿದ್ದ ಸಂಘಟಕರು ಭೀಮ್ ಆರ್ಮಿಯ ಚಂದ್ರಶೇಖರ ಆಜಾದ್ ಅವರನ್ನು ಕರೆಸಿದ್ದರು. ಆದರೆ ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಆಗಮಿಸದ ಆಜಾದ್ ಮೊಬೈಲ್ ಮೂಲಕವೇ ಭಾಷಣ ಕಳುಹಿಸಿದ್ದರು. ಈ ಸಂದೇಶದಲ್ಲಿ ಅವರು ದೇಶದ ರಕ್ಷಣೆಗೆ ಹಾಗೂ ಅಂಬೇಡ್ಕರ್ ಅವರು ದೇಶಕ್ಕೆ ಕೊಟ್ಟ ಸಂವಿಧಾನದ ರಕ್ಷಣೆಗಾಗಿ ಕೇಂದ್ರದ ಕರಾಳ ಶಾಸನದ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಕರೆ ನೀಡಿದರು.

ಪ್ರಜಾಪ್ರಭುತ್ವದಲ್ಲಿ ಇಂಥ ಹೋರಾಟಗಳ ಸಂದರ್ಭದಲ್ಲಿ ವಿಪಕ್ಷಗಳ ಪಾತ್ರ ಪ್ರಮುಖವಾಗಿರುತ್ತದೆ. ಆದರೆ ಈಗ ದೇಶದ ಜನರೇ ವಿಪಕ್ಷವಾಗಿ ಈ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ಈ ಆಂದೋಲನ ಇದೇ ರೀತಿ ಮುಂದುವರಿಯಬೇಕು. ಹಾಗೂ ಅದು ಇನ್ನಷ್ಟು ಬಲಿಷ್ಠಗೊಳ್ಳಬೇಕು.

ನಾವೆಲ್ಲ ಭರವಸೆಯನ್ನು ಇಟ್ಟಿರುವ ದೇಶದ ಸಂವಿಧಾನದಲ್ಲಿ ದೇಶದ ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇದರೊಂದಿಗೆ ನಮ್ಮ ಭೀಮರಾವ್ ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನವನ್ನು ರಕ್ಷಿಸುವುದು ಈಗ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲರೂ ನಿಮ್ಮ ಜೊತೆಗಿರುತ್ತಾರೆ ಎಂದು ಅವರು ನುಡಿದರು.


Spread the love

Exit mobile version