ಪ್ರಕೃತಿಗೆ ಪೂರಕವಾದ ಅಭಿವೃದ್ದಿಗೆ ಆದ್ಯತೆ – ಪ್ರವಾಸೋದ್ಯಮ ಸಚಿವ ಸಿ.ಟಿ ರವಿ
- ಮೂಡಿಗೆರೆಯ ಪ್ರವಾಸಿ ತಾಣಗಳಿಗೆ ಸಚಿವ ಸಿ.ಟಿ ರವಿ ಬೇಟಿ
- ಸಚಿವರ ಕಾರು ತಡೆದು ಅಳಲು ತೋಡಿಕೊಂಡ ನೆರೆ ಸಂತ್ರಸ್ತೆ
- ಲಾಕ್ಡೌನ್ ನಡುವೆಯೂ ಸಚಿವರ ಪ್ರವಾಸ
- ಮಾಸ್ಕ್ ಧರಿಸದ ಶಾಸಕ ಎಂ.ಪಿ ಕುಮಾರಸ್ವಾಮಿ
ಕೊಟ್ಟಿಗೆಹಾರ: ಪ್ರಕೃತಿ ಸೌಂದರ್ಯಕ್ಕೆ ದಕ್ಕೆ ಬಾರದಂತೆ ಪ್ರಕೃತಿಗೆ ಪೂರಕವಾಗಿ ಪ್ರವಾಸಿ ತಾಣಗಳ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದರು.
ಮೂಡಿಗೆರೆಯ ಪ್ರವಾಸಿ ತಾಣಗಳಾದ ದೇವರಮನೆ, ಬಲ್ಲಾಳರಾಯನ ದುರ್ಗ, ನಿಡುವಾಳೆಯ ರಾಮೇಶ್ವರ ದೇವಸ್ಥಾನ ಹಾಗೂ ಜಾವಳಿಯ ಹೇಮಾವತಿ ನದಿ ಮೂಲಕ್ಕೆ ಬೇಟಿ ನೀಡಿ ಮಾತನಾಡಿದರು.
ರಾಣಿಝರಿಯಲ್ಲಿ ಕೇಬಲ್ ಕಾರ್ ಆರಂಭಿಸುವ ಬಗ್ಗೆ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಣಿಝರಿಯಲ್ಲಿ ಕೇಬಲ್ ಕಾರ್ ಅಳವಡಿಸುವ ಚಿಂತನೆ ಇಲ್ಲ. ರಾಣಿಝರಿ ಚಾರಣಕ್ಕೆ ಸೂಕ್ತವಾದ ಪ್ರದೇಶ. ಚಾರಣಕ್ಕೆ ಸೀಮಿತವಾಗಿಸುವುದು ಸೂಕ್ತ ಎಂದರು.
ಹೇಮಾವತಿ ನದಿಮೂಲದ ಕಲ್ಯಾಣಿಯ ಮೂಲಕ್ಕೆ ಧಕ್ಕೆ ಬಾರದಂತೆ ಕಲ್ಯಾಣಿಯನ್ನು ಅಭಿವೃದ್ದಿ ಪಡಿಸಲಾಗುವುದು. ಎಂದರು. ತಡೆಗೋಡೆಗಳನ್ನು ನಿರ್ಮಿಸುವ ಬಗ್ಗೆ ಯೋಜನಾವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೂಲುಹುಣ್ಣಿಮೆ ದಿನವಾದ ಭಾನುವಾರ ದೇವರಮನೆಯ ಶ್ರೀಕಾಲಬೈರವೇಶ್ವರ ದೇವಸ್ಥಾನದಲ್ಲಿ ಅರ್ಚಕರು ಸಚಿವರು, ಶಾಸಕರು ಹಾಗೂ ದೇವಸ್ಥಾನಕ್ಕೆ ಬಂದಿದ್ದ ಜನಪ್ರತಿನಿಧಿಗಳಿಗೆ ನೂಲನ್ನು ಕಟ್ಟಿದ್ದರು.
ಈ ಸಂದರ್ಭದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ, ತಾ.ಪಂ ಅಧ್ಯಕ್ಷ ಕೆ.ಸಿ ರತನ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್ ರಘು, ಉಪವಿಭಾಗಾಧಿಕಾರಿ ನಾಗರಾಜ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ತಹಶೀಲ್ದಾರ್ ರಮೇಶ್, ಉಪವಲಯ ಸಂರಕ್ಷಣಾಧಿಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಮೋಹನ್, ವೃತ್ತ ನಿರೀಕ್ಷಕ ಜಗನ್ನಾಥ್, ಪಿಎಸ್ಐಗಳಾದ ಶ್ರೀನಾಥ್ ರೆಡ್ಡಿ, ಮೂರ್ತಿ, ಬಿಜೆಪಿ ಮುಖಂಡರಾದ ಬಿ.ಎಂ ಭರತ್, ಟಿ.ಎಂ ಗಜೇಂದ್ರ, ಅನೂಪ್ಕುಮಾರ್, ಪಂಚಾಕ್ಷರಿ, ಬಿ.ಬಿ ಮಂಜುನಾಥ್, ಸಂಜಯಗೌಡ, ಪರೀಕ್ಷಿತ್ ಜಾವಳಿ, ಜಗದೀಶ್ಗೌಡ, ಶಶಿಧರ್, ಜಗದೀಪ್ ಮುಂತಾದವರು ಇದ್ದರು.
ಸಚಿವರ ಕಾರು ತಡೆದು ಅಳಲು ತೋಡಿಕೊಂಡ ನೆರೆ ಸಂತ್ರಸ್ತೆ
ಕಳೆದ ಮಳೆಗಾಲದಲ್ಲಿ ಮನೆ ಹಾನಿಯಾಗಿದ್ದು ಅದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮನೆ ಕಟ್ಟಿಕೊಡಲು ಪರಿಹಾರ ನೀಡಿ ಎಂದು ದುರ್ಗದಹಳ್ಳಿಯ ನೆರೆಸಂತ್ರಸ್ತೆ ಲಕ್ಷ್ಮಮ್ಮ ಬಲ್ಲಾಳರಾಯನ ಕಡೆಗೆ ಸಾಗುತ್ತಿದ್ದ ಸಚಿವ ಸಿ.ಟಿ ರವಿ ಅವರ ಕಾರು ತಡೆದು ಅಳಲು ತೋಡಿಕೊಂಡರು. ಕಾರು ನಿಲ್ಲಿಸಿ ನೆರೆ ಸಂತ್ರಸ್ತೆ ಲಕ್ಷ್ಮಮ್ಮ ಅವರನ್ನು ಮಾತನಾಡಿಸಿದ ಸಚಿವರ ಸ್ಥಳಿಯ ಅಧಿಕಾರಿಗಳನ್ನು ಕರೆದು ಲಕ್ಷ್ಮಮ್ಮ ಅವರಿಗೆ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೇಶಮುಂಡನೆ ಮಾಡಿಕೊಂಡ ಉಪವಿಭಾಗಾಧಿಕಾರಿ
ದೇವರಮನೆಯ ಶ್ರೀಕಾಲಬೈರವೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ. ನಾಗರಾಜ್ ಕೇಶಮುಂಡನೆ ಮಾಡಿಸಿಕೊಂಡಿದ್ದು ವಿಶೇಷವಾಗಿತ್ತು. ಆ ಭಾಗದ ಜನರು ದೇವರಮನೆಯಲ್ಲಿ ಹರಕೆ ತೀರಿಸಲು ಕೇಶಮುಂಡನೆ ಮಾಡಿಸಿಕೊಳ್ಳುವುದು ಸಾಮಾನ್ಯವಾಗಿದ್ದು ಭಾನುವಾರ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ. ನಾಗರಾಜ್ ಕೇಶಮುಂಡನೆ ಮಾಡಿಸಿಕೊಂಡರು.
ಲಾಕ್ಡೌನ್ ನಡುವೆಯೂ ಸಚಿವರ ಪ್ರವಾಸ, ಮಾಸ್ಕ್ ಧರಿಸದ ಶಾಸಕ ಎಂ.ಪಿ ಕುಮಾರಸ್ವಾಮಿ
ಭಾನುವಾರ ಲಾಕ್ಡೌನ್ನಿಂದ ಎಲ್ಲೆಡೆ ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದರೇ ಸಚಿವ ಸಿ.ಟಿ ರವಿ ಅವರು ಮೂಡಿಗೆರೆ ತಾಲ್ಲೂಕಿನ ಪ್ರವಾಸಿ ತಾಣಗಳಿಗೆ ಲಾಕ್ಡೌನ್ ದಿನದಂದು ಬೇಟಿ ನೀಡಿದ್ದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಪ್ರವಾಸಿ ತಾಣಗಳಾದ ದೇವರಮನೆ, ರಾಣಿಝರಿ, ಹೇಮಾವತಿ ನದಿಮೂಲ ಹಾಗೂ ನಿಡುವಾಳೆ ರಾಮೇಶ್ವರ ದೇವಸ್ಥಾನಕ್ಕೆ ಸಚಿವ ಸಿ.ಟಿ ರವಿ ಭಾನುವಾರ ಬೇಟಿ ನೀಡಿದ್ದು ಈ ವೇಳೆ ಕಾರ್ಯಕರ್ತರು, ಸ್ಥಳಿಯ ಮುಖಂಡರು ಸಾಮಾಜಿಕ ಅಂತರ ಕಾಪಾಡದೇ ಗುಂಪು ಸೇರಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಯಿತು. ಶಾಸಕ ಎಂ.ಪಿ ಕುಮಾರಸ್ವಾಮಿ ಮಾಸ್ಕ್ ಧರಿಸದೇ ಸಾರ್ವಜನಿಕರವಾಗಿ ಕಾಣಿಸಿಕೊಂಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.